ಯೂರಿಯಾ ತಿಂದು ಮೂರು ಹಸುಗಳು ಸಾವು

| Published : Aug 13 2025, 12:30 AM IST

ಸಾರಾಂಶ

ಮನೆಯವರು ಹೊರಬಂದು ನೋಡುವಷ್ಟರಲ್ಲಿ ಎರಡು ನಾಟಿ ತಳಿ ಹಸು ಹಾಗೂ ಒಂದು ಫಲ ಭರಿತ ಸೀಮೆ ಹಸು ಯೂರಿಯಾವನ್ನು ತಿಂದು ಕೆಲವೇ ಸಮಯದಲ್ಲಿ ಅಸ್ವಸ್ಥಗೊಂಡು ಸಾವನ್ನಪ್ಪಿವೆ.

ಮಳವಳ್ಳಿ: ಯೂರಿಯಾ ರಾಸಾಯನಿಕ ಗೊಬ್ಬರ ತಿಂದು ಮೂರು ಹಸುಗಳು ಸಾವನ್ನಪ್ಪಿರುವ ಘಟನೆ ತಾಲೂಕಿನ ನಾಗೇಗೌಡನದೊಡ್ಡಿ ಗ್ರಾಮದಲ್ಲಿ ಜರುಗಿದೆ. ಗ್ರಾಮದ ಸಿದ್ದಲಿಂಗೇಗೌಡರಿಗೆ ಸೇರಿದ ಎರಡು ನಾಟಿ ಹಸು ಹಾಗೂ ದೈತೇಗೌಡನ ಮಹದೇವರಿಗೆ ಸೇರಿದ ಒಂದು ಗರ್ಭಿಣಿ ಸೀಮೆ ಹಸು ಸಾವನ್ನಪ್ಪಿದ್ದು, ರೈತರಿಗೆ ಲಕ್ಷಾಂತರ ರು. ನಷ್ಟ ಉಂಟಾಗಲಿದೆ. ಎಂದಿನಂತೆ ಮುಂಜಾನೆ ಕೊಟ್ಟಿಗೆಯಿಂದ ಹಸುಗಳನ್ನು ಹೊರಬಿಟ್ಟ ಕೂಡಲೇ ಹಿತ್ತಲಿನ ಹೊರಾಂಡದಲ್ಲಿ ಒಂದೇ ಕಡೆ ಪಶು ಆಹಾರ ಹಾಗೂ ಯೂರಿಯಾ ರಾಸಾಯನಿಕ ಗೊಬ್ಬರವನ್ನು ಜೋಡಿಸಿಟ್ಟಿದ್ದ ಕಡೆ ಬಂದ ಹಸುಗಳು ಪಶು ಆಹಾರ ಎಂದು ಯೂರಿಯಾ ರಸಗೊಬ್ಬರದ ಚೀಲಕ್ಕೆ ಬಾಯಿ ಹಾಕಿ ಯೂರಿಯಾವನ್ನು ತಿಂದಿವೆ. ಮನೆಯವರು ಹೊರಬಂದು ನೋಡುವಷ್ಟರಲ್ಲಿ ಎರಡು ನಾಟಿ ತಳಿ ಹಸು ಹಾಗೂ ಒಂದು ಫಲ ಭರಿತ ಸೀಮೆ ಹಸು ಯೂರಿಯಾವನ್ನು ತಿಂದು ಕೆಲವೇ ಸಮಯದಲ್ಲಿ ಅಸ್ವಸ್ಥಗೊಂಡು ಸಾವನ್ನಪ್ಪಿವೆ. ಕುಟುಂಬಕ್ಕೆ ಜೀವನಾಧಾರವಾಗಿದ್ದ ಈ ಹಸುಗಳನ್ನು ಕಳೆದುಕೊಂಡ ಬಡ ಕುಟುಂಬ ಆಘಾತಕ್ಕೆ ಒಳಗಾಗಿದೆ. ಸ್ಥಳಕ್ಕೆ ವಡ್ಡರಹಳ್ಳಿ ಪಶು ಆಸ್ಪತ್ರೆ ಪಶು ವೈದ್ಯಾಧಿಕಾರಿ ಆಗಮಿಸಿ ಮೃತ ಹಸುಗಳ ವೈದ್ಯಕೀಯ ಪರೀಕ್ಷೆ ನಡೆಸಿದ್ದಾರೆ. ಹಸುಗಳನ್ನು ಕಳೆದುಕೊಂಡು ಕಂಗಾಲಾಗಿರುವ ಬಡ ರೈತರು ಸರ್ಕಾರದಿಂದ ಸೂಕ್ತ ಪರಿಹಾರ ಕೊಡಿಸುವಂತೆ ತಾಲೂಕು ಆಡಳಿತಕ್ಕೆ ಮನವಿ ಮಾಡಿಕೊಂಡಿದ್ದಾರೆ.