ಸಿಡಿಲಿಗೆ ಮೂರು ಹಸುಗಳು ಬಲಿ

| Published : May 01 2024, 01:22 AM IST

ಸಾರಾಂಶ

ಅಗ್ನಿಶಾಮಕ ಠಾಣೆ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡುವ ವೇಳೆಗಾಗಲೇ ಜಾನುವಾರುಗಳು ಬೆಂಕಿಯ ಕೆನ್ನಾಲಿಗೆಗೆ ಸಿಲುಕಿದ್ದವು. ಅಗ್ನಿಶಾಮಕ ಠಾಣೆ ಸಿಬ್ಬಂದಿ ಕಾರ್ಯಾಚರಣೆಯಿಂದಾಗಿ ಹೆಚ್ಚಿನ ಅನಾಹುತ ತಪ್ಪಿದೆ.

ಕನ್ನಡಪ್ರಭ ವಾರ್ತೆ ಹಗರಿಬೊಮ್ಮನಹಳ್ಳಿ

ತಾಲೂಕಿನ ಗುಳೇದಾಳು ಗ್ರಾಮದಲ್ಲಿ ಸಿಡಿಲು ಬಡಿದು ರೆಡ್ಡಿಬಸಪ್ಪನವರ ಗೂಳೆಪ್ಪ ಅವರಿಗೆ ಸೇರಿದ ಬಣವೆಗೆ ಬೆಂಕಿ ಹತ್ತಿಕೊಂಡು ಪಕ್ಕದಲ್ಲೇ ಕಟ್ಟಿದ್ದ ಮೂರು ಜಾನುವಾರುಗಳು ಬಲಿಯಾದ ಘಟನೆ ಮಂಗಳವಾರ ಸಂಜೆ ನಡೆದಿದೆ.

ಗ್ರಾಮದ ಹೊರವಲಯದಲ್ಲಿ ಹೊಲವೊಂದರ ಬಳಿಯ ಕಣದಲ್ಲಿನ ಬಣವಿ ಬಳಿಯಲ್ಲಿ ಕಟ್ಟಲಾಗಿದ್ದ ಹಸು, ಎಮ್ಮೆ ಮತ್ತು ಕರುವಿಗೆ ಸಿಡಿಲು ಬಡಿದು ಸ್ಥಳದಲ್ಲಿಯೇ ಮೃತಪಟ್ಟಿವೆ. ಬಣವಿಗೆ ಸಿಡಿಲು ಬಡಿದ ಪರಿಣಾಮ ಬೆಂಕಿ ಆವರಿಸಿದೆ. ಕ್ಷಣಾರ್ಧದಲ್ಲೇ 3ಕ್ಕೂ ಹೆಚ್ಚು ದೊಡ್ಡ ಪ್ರಮಾಣದ ಮೇವಿನ ಬಣವಿ ಸುಟ್ಟಿವೆ. ಅಗ್ನಿಶಾಮಕ ಠಾಣೆ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡುವ ವೇಳೆಗಾಗಲೇ ಜಾನುವಾರುಗಳು ಬೆಂಕಿಯ ಕೆನ್ನಾಲಿಗೆಗೆ ಸಿಲುಕಿದ್ದವು. ಅಗ್ನಿಶಾಮಕ ಠಾಣೆ ಸಿಬ್ಬಂದಿ ಕಾರ್ಯಾಚರಣೆಯಿಂದಾಗಿ ಹೆಚ್ಚಿನ ಅನಾಹುತ ತಪ್ಪಿದೆ. ಈ ಕುರಿತು ಮರಿಯಮ್ಮನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಒಟ್ಟು ₹3 ಲಕ್ಷ ನಷ್ಟ ಅಂದಾಜಿಸಲಾಗಿದೆ. ಘಟನೆ ಕುರಿತಂತೆ ಮಾಹಿತಿ ಪಡೆಯಲಾಗಿದೆ. ಸೂಕ್ತ ಪರಿಹಾರಕ್ರಮಕ್ಕೆ ಜಿಲ್ಲಾಧಿಕಾರಿಗಳಿಗೆ ವರದಿ ಸಲ್ಲಿಸಲಾಗಿದೆ ಎಂದು ತಹಸೀಲ್ದಾರ್ ಚಂದ್ರಶೇಖರ ಶಂಭಣ್ಣ ಗಾಳಿ ತಿಳಿಸಿದರು.

ಸ್ಥಳಕ್ಕೆ ಪಶುಸಂಗೋಪನೆ ಇಲಾಖೆ ಸಹಾಯಕ ನಿರ್ದೇಶಕ ಡಾ. ಸೂರಪ್ಪ, ಪಶುವೈದ್ಯಾಧಿಕಾರಿ ಡಾ. ರಾಘವೇಂದ್ರ, ಕಂದಾಯ ನಿರೀಕ್ಷಕ ರಾಜುಸ್ವಾವಿು, ಗ್ರಾಮ ಆಡಳಿತಾಧಿಕಾರಿ ಭೇಟಿ ನೀಡಿದ್ದರು.