ಸಾರಾಂಶ
ಪೂರ್ವ ಸಿದ್ಧತಾ ಸಭೆಯಲ್ಲಿ ತೀರ್ಮಾನ । ಏ.28 ರಿಂದ 30 ವರೆಗೆ ನಿಗಧಿಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಮಹಾ ಮಾನವತಾವಾದಿ ಬಸವೇಶ್ವರರ ಜಯಂತಿಯನ್ನು ಮೂರು ದಿನಗಳ ಕಾಲ ಆಚರಿಸುವ ನಿರ್ಣಯವನ್ನು ಇಲ್ಲಿನ ಮುರುಘಾಮಠದಲ್ಲಿ ನಡೆದ ಪೂರ್ವ ಸಿದ್ಧತಾ ಸಭೆಯಲ್ಲಿ ಕೈಗೊಳ್ಳಲಾಗಿದೆ.ಕಾರ್ಯಕ್ರಮದ ಸಮ್ಮುಖ ವಹಿಸಿ ಮಾತನಾಡಿದ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠ ಹಾಗೂ ಎಸ್‌ಜೆಎಂ ವಿದ್ಯಾಪೀಠದ ಆಡಳಿತ ಮಂಡಳಿ ಸದಸ್ಯ ಡಾ.ಬಸವಕುಮಾರಸ್ವಾಮಿ, ಬಸವಣ್ಣ ಈ ನಾಡಿಗೆ ಬಹುದೊಡ್ಡ ಕೊಡುಗೆ ನೀಡುವ ಮೂಲಕ ಸಮಾಜದ ಶಕ್ತಿಯಾಗಿದ್ದಾರೆ. ಅಂತಹ ಪ್ರಬಲ ಶಕ್ತಿ ಸದಾಕಾಲ ನಮ್ಮೊಂದಿಗಿದ್ದರೆ ನಾವು ಜೀವನದಲ್ಲಿ ಸೋಲುವುದಿಲ್ಲ. ಅವರು ಕೇವಲ ಕರ್ನಾಟಕಕ್ಕೆ ಸಾಂಸ್ಕೃತಿಕ ನಾಯಕನಲ್ಲ. ಅವರು ಇಡೀ ವಿಶ್ವದ ನಾಯಕ ಎಂದರು.
900 ವರ್ಷಗಳ ಹಿಂದೆ ಜಗತ್ತೇ ಮೆಚ್ಚಿ ಆದರಿಸುವಂತಹ ಸಂಸತ್ತನ್ನುಬಸವಣ್ಣ ನೀಡಿ ಹೋಗಿರುವುದು ಸಾಮಾನ್ಯ ಮಾತಲ್ಲ. ಅವರು ಸಂಕಷ್ಟಗಳನ್ನೆದುರಿಸಿ, ಅನುಭವಿಸಿ ಒಂದು ತತ್ವ ಸಿದ್ಧಾಂತವನ್ನು ಈ ನಾಡಿಗೆ ಕೊಟ್ಟು ಹೋಗಿದ್ದಾರೆ. ಬೃಹನ್ಮಠದ ಆಡಳಿತ ಮಂಡಳಿ ಆಶಯದಂತೆ ಮೂರುದಿನಗಳ ಕಾಲ ಬಸವ ಜಯಂತಿಯನ್ನು ಅರ್ಥಪೂರ್ಣವಾಗಿ ಆದರ್ಶವಾಗಿ ಆಚರಿಸುವ ಮೂಲಕ ಅವರನ್ನು ನೆನಪಿಸಿಕೊಳ್ಳುವ ಕಾರ್ಯವಾಗಬೇಕಾಗಿದೆ ಎಂದರು.ಜಯಂತಿ ಸಂದರ್ಭದಲ್ಲಿ ಪ್ರಬಂಧ, ವಚನಗಾಯನ, ಕಂಠಪಾಠ, ವೇಷಭೂಷಣ ಸ್ಪರ್ಧೆ ಸೇರಿದಂತೆ ತತ್ವಧಾರಿತವಾಗಿ ಏನು ಬೇಕೋ ಅದನ್ನೆಲ್ಲವನ್ನು ನಾವು ನೀವೆಲ್ಲರೂ ಸೇರಿ ಮಾಡೋಣ. ಶ್ರೀಮಠದ ವತಿಯಿಂದ ಈ ಹಿಂದೆ ಪ್ರಕಟಗೊಳ್ಳುತ್ತಿದ್ದ ಸತ್ಯಶುದ್ಧ ಕಾಯಕ ತ್ರೈಮಾಸಿಕ ಮಾಸಿಕ ಪತ್ರಿಕೆಯನ್ನು ಜಯಂತಿ ಸಂದರ್ಭದಲ್ಲಿ ಬಿಡುಗಡೆಗೊಳಿಸುವ ತಯಾರಿ ನಡೆದಿದೆ. ವಚನಕಾರರ ವಚನಗಳ ಕಿರುಹೊತ್ತಿಗೆಯನ್ನು ಪ್ರಕಟಿಸುವ ಆಶಯವಿದೆ ಎಂದರು.
ಸಭೆಯ ಸಮ್ಮುಖ ವಹಿಸಿದ್ದ ದಾವಣಗೆರೆ ವಿರಕ್ತಮಠದ ಡಾ.ಬಸವಪ್ರಭು ಸ್ವಾಮಿಗಳು ಮಾತನಾಡಿ, ಈ ನಾಡಿನಲ್ಲಿ ಬಸವ ಜಯಂತಿಯನ್ನು ಮುರುಘಾಮಠದ ಶಾಖಾಮಠವಾದ ದಾವಣಗೆರೆ ವಿರಕ್ತಮಠದಲ್ಲಿ ಮೃತ್ಯುಂಜಯ ಅಪ್ಪಗಳ ನೇತೃತ್ವದಲ್ಲಿ ಹರ್ಡೇಕರ್ ಮಂಜಪ್ಪನವರು ಮೊದಲಿಗೆ ಆರಂಭಿಸಿದರು.. ಶ್ರೀಮಠವು ಬಸವತತ್ವದ ಅನುಸರಣೆ ಮತ್ತು ಪ್ರಸಾರಕ್ಕಾಗಿ ಹಲವಾರು ಕಾರ್ಯಕ್ರಮಗಳನ್ನು ಹಾಕಿಕೊಂಡು ಮುಂಚೂಣಿಯಲ್ಲಿದೆ ಎಂದರು. ನಗರಸಭೆ ಮಾಜಿ ಅಧ್ಯಕ್ಷ ನಿರಂಜನಮೂರ್ತಿ ಮಾತನಾಡಿ, ಸರ್ವರ ಸಮಾನತೆಗಾಗಿ ಶ್ರಮಿಸಿದ ಬಸವಣ್ಣನವರ ಕೊಡುಗೆ ಆಶಯಗಳನ್ನು ಜನತೆಗೆ ತಿಳಿಸುವ ಕೆಲಸ ಸರ್ವರ ಸಹಭಾಗಿತ್ವದಲ್ಲಿ ಆಚರಿಸುವಂತಾಗಬೇಕೆಂದು ಸಲಹೆ ನೀಡಿದರು.ಲೇಖಕ ಎಚ್.ಆನಂದಕುಮಾರ್ ಮಾತನಾಡಿ, ಚಿತ್ರದುರ್ಗ ಮುರುಘಾಮಠದಿಂದ ಬಸವತತ್ವ ಆಚರಣೆಗಾಗಿ ಒಂದು ಸಂದೇಶ ನೀಡಿದರೆ ಅದು ವ್ಯಾಪಕವಾಗಿ ಚರ್ಚೆಯಾಗುತ್ತದೆ. ಅಂತ ನಿಲುವು ಶ್ರೀಮಠದ್ದಾಗಿದೆ ಎಂದರು.
ಲೇಖಕ ಜಿ.ಎಸ್.ಉಜ್ಜಿನಪ್ಪ, ಜಿಲ್ಲಾ ವೀರಶೈವ ಲಿಂಗಾಯತ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಬಿ.ವೀರೇಶ್ ವೀರಶೈವ ಸಮಾಜದ ಕಾರ್ಯದರ್ಶಿ ಪಿ.ವೀರೇಂದ್ರಕುಮಾರ್,ಕಣಿವೆ ಮಾರಮ್ಮ ಸಂಘದ ಅಧ್ಯಕ್ಷ ತಿಪ್ಪೆಸ್ವಾಮಿ ವೀರಶೈವ ಕ್ಷೇಮಾಭಿವೃದ್ಧಿ ಸಂಘದ ಮಾಜಿ ಅಧ್ಯಕ್ಷ ನಾಗರಾಜ ಸಂಗಮ್, ಜಾಗತಿಕ ಲಿಂಗಾಯತ ಮಹಾಸಭಾದ ಪ್ರಧಾನ ಕಾರ್ಯದರ್ಶಿ ಬಿ.ಟಿ ನಂದೀಶ್, ಡಾ.ಯಶೋದ ರಾಜಶೇಖರಪ್ಪ, ವಿವಿಧ ಸಮಾಜಗಳ ಮುಖಂಡರುಗಳಾದ ಷಡಾಕ್ಷರಯ್ಯ, ಕುಬೇರಪ್ಪ, ಶಶಿಧರಬಾಬು, ವಿಜಯಲಕ್ಷ್ಮಿ, ಗೀತಾ ಮುರುಗೇಶ್, ಜಯಶೀಲ, ಮಹಮ್ಮದ್ ಸಾಧಿಕ್ ಸೇರಿದಂತೆ ಅನೇಕ ಮುಖಂಡರು ವೇದಿಕೆಯಲ್ಲಿದ್ದರು. ಜಮುರಾ ಕಲಾವಿದ ಉಮೇಶ್ ಸಂಗಪ್ಪ ಪತ್ತಾರ್ ವಚನ ಗೀತೆ ಹಾಡಿದರು. ಪ್ರಾಚಾರ್ಯ ಡಾ.ಎಲ್. ಈಶ್ವರಪ್ಪ ಸ್ವಾಗತಿಸಿದರು. ಡಾ. ನವೀನ್ ಮಸ್ಕಲ್ ಕಾರ್ಯಕ್ರಮ ನಿರ್ವಹಿಸಿದರು.