ಮೂರು ದಿನಗಳ ಕಾನೂನು ಕಾರ್ಯಗಾರಕ್ಕೆ ಚಾಲನೆ

| Published : Jul 26 2025, 12:00 AM IST

ಸಾರಾಂಶ

ನಿರಂತರ ಪರಿಶ್ರಮ, ಶ್ರದ್ಧೆ, ಪ್ರಾಮಾಣಿಕತೆಗಳನ್ನು ಆಳವಡಿಸಿಕೊಂಡರೆ ವಕೀಲರು ತಮ್ಮ ವೃತ್ತಿಯಲ್ಲಿ ಯಶಸ್ವಿಯಾಗಲು ಸಾಧ್ಯ ಎಂದು ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶ ಲಕ್ಷ್ಮೀಕಾಂತ ಮಿಸ್ಕಿನ್ ಹೇಳಿದರು.

ಕನ್ನಡಪ್ರಭ ವಾರ್ತೆ ಸಿಂಧನೂರು

ನಿರಂತರ ಪರಿಶ್ರಮ, ಶ್ರದ್ಧೆ, ಪ್ರಾಮಾಣಿಕತೆಗಳನ್ನು ಆಳವಡಿಸಿಕೊಂಡರೆ ವಕೀಲರು ತಮ್ಮ ವೃತ್ತಿಯಲ್ಲಿ ಯಶಸ್ವಿಯಾಗಲು ಸಾಧ್ಯ ಎಂದು ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶ ಲಕ್ಷ್ಮೀಕಾಂತ ಮಿಸ್ಕಿನ್ ಹೇಳಿದರು.

ಅವರು ಶುಕ್ರವಾರ ವಕೀಲರ ಸಂಘದ ಹಾಗೂ ಕರ್ನಾಟಕ ರಾಜ್ಯ ವಕೀಲರ ಪರಿಷತ್ ಸಂಯುಕ್ತಾಶ್ರಯದಲ್ಲಿ ಮೂರು ದಿನಗಳ ಕಾನೂನು ಕಾರ್ಯಗಾರ ಉದ್ಘಾಟಿಸಿ ಮಾತನಾಡಿದರು. ವಕೀಲರಿಗೆ ಕಾಲಕಾಲಕ್ಕೆ ತರಬೇತಿ ಅವಶ್ಯಕ. ಹೊಸ ಕಾನೂನುಗಳು, ತಿದ್ದುಪಡಿಗಳನ್ನು ತಿಳಿದುಕೊಳ್ಳಲು ಕಾರ್ಯಾಗಾರಗಳು ನೆರವಾಗುತ್ತವೆ. ಇತ್ತೀಚಿಗೆ ಕೇಂದ್ರ ಸರ್ಕಾರ ಮೂರು ಹೊಸ ಕಾನೂನುಗಳನ್ನು ಜಾರಿಗೆ ತಂದಿದ್ದು, ಈ ಕಾರ್ಯಾಗಾರದಲ್ಲಿ ಅವುಗಳ ಕುರಿತು ಅನುಭವಿ ಉಪನ್ಯಾಸಕರಿಂದ ಉಪನ್ಯಾಸಗಳು ನಡೆಯುತ್ತವೆ. ಅದರ ಸದುಪಯೋಗವನ್ನು ವಿಶೇಷವಾಗಿ ಕಿರಿಯ ವಕೀಲರು ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.

ವಕೀಲರು ತಮ್ಮ ವೃತ್ತಿಯನ್ನು ಹಣಕ್ಕಾಗಿ ಮಾಡದೇ ಸೇವೆಗೆಂದು ಮಾಡಿದರೆ ಆತ್ಮತೃಪ್ತಿ ಸಿಗುತ್ತದೆ. ನೊಂದು-ಬೆಂದ ಕಕ್ಷಿದಾರರ ತಮ್ಮ ಹಲವಾರು ಸಮಸ್ಯೆಗಳನ್ನು ಹಾಗೂ ಲಕ್ಷಗಟ್ಟಲೇ ಬೆಲೆ ಬಾಳುವ ಆಸ್ತಿಗಳ ವ್ಯಾಜ್ಯಗಳನ್ನು ವಕೀಲರ ಕೈಗೆ ನೀಡಿರುತ್ತಾರೆ. ಅನ್ಯಾಯಕ್ಕೊಳಗಾದವರಿಗೆ, ವಿಧವೆಯರಿಗೆ ನ್ಯಾಯ ದೊರೆಸಿಕೊಡಲು ವಕೀಲರು ಮುಂದಾಗಬೇಕು. ಯಾವುದೇ ಕಾರಣಕ್ಕೂ ವಕೀಲರ ತಪ್ಪಿನಿಂದ ಕಕ್ಷಿದಾರರಿಗೆ ಅನ್ಯಾಯವಾಗಬಾರದು ಎಂದು ಕಿವಿಮಾತು ಹೇಳಿದರು.

ವಕೀಲರ ಸಂಘದ ಅಧ್ಯಕ್ಷ ಎನ್.ರಾಮನಗೌಡ ಮಾತನಾಡಿ, ಮೂರು ದಿನ ನಡೆಯುವ ಕಾನೂನು ಕಾರ್ಯಾಗಾರದಲ್ಲಿ ಕಿರಿಯ ವಕೀಲರು ತಪ್ಪದೇ ಭಾಗವಹಿಸಬೇಕು. ಹಿರಿಯ ವಕೀಲರ ಕಛೇರಿಗಳಿಗೆ ಹೋಗದೆ ಅವರ ಅನುಮತಿ ಪಡೆದು ಕಾರ್ಯಾಗಾರದಲ್ಲಿ ನಡೆಯುವ ಹೊಸ ಕಾನೂನುಗಳ ಸಂಪೂರ್ಣ ಮಾಹಿತಿಯನ್ನು ಪಡೆಯಬೇಕು. ತಮಗೇನಾದರೂ ಸಂದೇಹಗಳಿದ್ದರೆ ಉಪನ್ಯಾಸಕರು ನಡೆಸುವ ಸಂವಾದದಲ್ಲಿ ಭಾಗವಹಿಸಿ ಉತ್ತರಗಳನ್ನು ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.

ಸನ್ಮಾನ: ಇದೇ ವೇಳೆ ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶ ಲಕ್ಷ್ಮೀಕಾಂತ ಮಿಸ್ಕಿನ್, ಉಪನ್ಯಾಸಕ ಜಿ.ಐ.ಮೇಟಿ, ಹಿರಿಯ ವಕೀಲರಾದ ಟಿ. ಮಲ್ಲಯ್ಯ ಹಾಗೂ ಪ್ರಹ್ಲಾದ ಗುಡಿ ಅವರನ್ನು ಸನ್ಮಾನಿಸಲಾಯಿತು.

ಗುಳೇದಗುಡ್ಡದ ಹಿರಿಯ ವಕೀಲ ಜಿ.ಐ.ಮೇಟಿ ಮಾತನಾಡಿದರು. ನಂತರ ಹಿರಿಯ ವಕೀಲ ಜಿ.ಐ.ಮೇಟಿ ‘ಭಾರತೀಯ ನಾಗರಿಕ ಸಂರಕ್ಷಾ ಸಂಹಿತೆ-2023’ ಕುರಿತು ಉಪನ್ಯಾಸ ನೀಡಿದರು. ನಂತರ ಅವರು ವಕೀಲರೊಂದಿಗೆ ಸಂವಾದ ನಡೆಸಿದರು. ವಕೀಲರ ಸಂಘದ ಕಾರ್ಯದರ್ಶಿ ಶಿವಕುಮಾರ ಬೈರಿದೊರೆ, ಖಜಾಂಚಿ ಕೆ. ಶರಣಬಸವ ಉಮಲೂಟಿ ಉಪಸ್ಥಿತರಿದ್ದರು.

ಕಾರ್ಯಾಗಾರದಲ್ಲಿ ಹಿರಿಯ ವಕೀಲರಾದ ಹೆಚ್.ರಾಮನಗೌಡ, ಅಬ್ದುಲ್ ಗನಿಸಾಬ, ಜಿ.ಎಸ್.ಆರ್.ಕೆ.ರೆಡ್ಡಿ, ಕೆ.ವೀರನಗೌಡ, ಬಸವಂತರಾವಗೌಡ, ಎಂ.ಅಮರೇಗೌಡ, ವಿ.ಬಿ.ರೆಡ್ಡಿ, ಈರೇಶ ಇಲ್ಲೂರು, ಕೆ.ಭೀಮನಗೌಡ, ಬಸವರಾಜ ಗುಡದೂರು, ಶೇಖರಪ್ಪ ದುಮತಿ, ಜೆ.ರಾಯಪ್ಪ, ಅಜಯಕುಮಾರ ಗದ್ರಟಗಿ ಇದ್ದರು. ಕೆ.ಅಮರೇಶ ಸಾಸಲಮರಿ ಮತ್ತು ಹೇಮಲತಾ ಜೋಳದರಾಶಿ ನಿರೂಪಿಸಿದರು.

---

ಫೋಟೋ:25ಕೆಪಿಎಸ್ಎನ್ಡಿ1: ಸಿಂಧನೂರಿನ ವಕೀಲರ ಸಂಘದಲ್ಲಿ ಮೂರು ದಿನಗಳ ಕಾನೂನು ಕಾರ್ಯಾಗಾರವನ್ನು ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶ ಲಕ್ಷ್ಮೀಕಾಂತ ಮಿಸ್ಕಿನ್ ಉದ್ಘಾಟಿಸಿದರು.

---

ಫೋಟೋ: 25ಕೆಪಿಎಸ್ಎನ್ಡಿ2: ಸಿಂಧನೂರಿನ ವಕೀಲರ ಸಂಘದಲ್ಲಿ ಮೂರು ದಿನಗಳ ಕಾನೂನು ಕಾರ್ಯಾಗಾರದಲ್ಲಿ ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶ ಲಕ್ಷ್ಮೀಕಾಂತ ಮಿಸ್ಕಿನ್ ಅವರನ್ನು ಸನ್ಮಾನಿಸಲಾಯಿತು.

---