ಸಾರಾಂಶ
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಬಸವ ಧರ್ಮ ಪೀಠದ ವತಿಯಿಂದ ಕೂಡಲಸಂಗಮದಲ್ಲಿ ಜ.12 ರಿಂದ 14ರವರೆಗೆ ಮೂರು ದಿನಗಳ ಕಾಲ 37ನೇ ಶರಣ ಮೇಳ ಜರುಗಲಿದೆ ಎಂದು ಕೂಡಲಸಂಗಮದ ಬಸವ ಧರ್ಮ ಪೀಠದ ಪೀಠಾಧ್ಯಕ್ಷೆ ಡಾ.ಮಾತೆ ಗಂಗಾದೇವಿ ಹೇಳಿದರು.ನವನಗರದ ಪತ್ರಿಕಾಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಶರಣ ಮೇಳದ ಮೊದಲ ದಿನ ಜ.12ರಂದು ಬೆಳಗ್ಗೆ 10.30ಕ್ಕೆ ರಾಷ್ಟ್ರೀಯ ಬಸವ ದಳದ 33ನೇ ಅಧಿವೇಶನ ಸಮಾರಂಭ ನಡೆಯಲಿದ್ದು, ಜಿಲ್ಲಾಧಿಕಾರಿ ಜಾನಕಿ ಕೆ.ಎಂ. ಉದ್ಘಾಟಿಸುವರು. ಬಸವ ಕಲ್ಯಾಣ ಅನುಭವಚ ಮಂಟಪ ಅಧ್ಯಕ್ಷ ಡಾ.ಬಸವಲಿಂಗ ಪಟ್ಟದೇವರು , ಹರಿಹರ ಲಿಂಗಾಯತ ಪಂಚಮಸಾಲಿ ಪೀಠದ ಪೀಠಾಧ್ಯಕ್ಷ ವಚನಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸುವರು.
ಸಂಜೆ 6.30ಕ್ಕೆ ಮಹಿಳಾ ಗೋಷ್ಠಿಯನ್ನು ರಾಷ್ಟ್ರೀಯ ಮಹಿಳಾ ಆಯೋಗದ ಮಾಜಿ ಸದಸ್ಯೆ ಶ್ಯಾಮಲಾ ಕುಂದರ್ ಉದ್ಘಾಟಿಸಲಿದ್ದು, ಬಸವಕಲ್ಯಾಣ ಅಖಿಲ ಭಾರತ ಲಿಂಗವಂತ ಹರಳಯ್ಯ ಪೀಠದ ಡಾ.ಅಕ್ಕ ಗಂಗಾಂಬಿಕೆ, ಶಿಕಾರಿಪುರದ ಬಸವಾಶ್ರಮದ ಮಾತೆ ಶರಣಾಂಬಿಕೆ, ಮಹಾರಾಷ್ಟ್ರ ಮುಗಳಿ ಬಸವ ಮಂಟಪದ ಮಾತೆ ಮಹಾನಂದ ತಾಯಿ ಸಾನ್ನಿಧ್ಯ ವಹಿಸುವರು. ಮುಖ್ಯ ಅತಿಥಿಗಳಾಗಿ ಭಾರತ ಸೌಟ್ಸ್ ಮತ್ತು ಗೈಡ್ಸ್ ಆಯುಕ್ತೆ ಮುಕ್ತಾ ಕಾಗಲಿ ಆಗಮಿಸುವರು.ಜ.13ರಂದು ಬೆಳಗ್ಗೆ 10.30ಕ್ಕೆ 37ನೇ ಶರಣ ಮೇಳವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಲಿದ್ದು, ಶಾಸಕ ವಿಜಯಾನಂದ ಕಾಶಪ್ಪನವರ ಅಧ್ಯಕ್ಷತೆ ವಹಿಸುವರು. ಇಳಕಲ್ಲ ವಿಜಯಮಹಾಂತೇಶ್ವರ ಸಂಸ್ಥಾನಮಠದ ಗುರುಮಹಾಂತ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಮುಖ್ಯ ಅತಿಥಿಗಳಾಗಿ ಸಚಿವ ಈಶ್ವರ ಖಂಡ್ರೆ, ಮಾಜಿ ಸಚಿವ ಎಂ.ನರೇಂದ್ರಸ್ವಾಮಿ, ಶಾಸಕ ಬಾಬಾಸಾಹೇಬ ಪಾಟೀಲ, ಚಿತ್ರ ನಟ ಡಾಲಿ ಧನಂಜಯ ಆಗಮಿಸುವರು.
ಅಂದು ಸಂಜೆ 6ಕ್ಕೆ ಬಸವ ಧರ್ಮ ಪೀಠಾರೋಹಣ ನಡೆಯಲಿದ್ದು, ಮುಖ್ಯ ಅತಿಥಿಗಳಾಗಿ ಸಚಿವ ಸತೀಶ ಜಾರಕಿಹೊಳಿ, ಎಸ್ಆರ್ ಎನ್ಇ ಫೌಂಡೇಶನ್ ಅಧ್ಯಕ್ಷ ಎಸ್.ಆರ್. ನವಲಿಹಿರೇಮಠ ಆಗಮಿಸುವರು. ಕೂಡಲಸಂಗಮದ ಲಿಂಗಾಯತ ಪಂಚಮಸಾಲಿ ಪೀಠದ ಜಗದ್ಗುರು ಬಸವಜಯಮೃತ್ಯುಂಜಯ ಸ್ವಾಮೀಜಿ, ಗುರು ಬಸವೇಶ್ವರ ಸಂಸ್ಥಾನಮಠದ ಡಾ.ಶಿವಾನಂದ ಮಹಾಸ್ವಾಮೀಜಿ ಸಾನ್ನಿಧ್ಯ ವಹಿಸುವರು.ಜ.14ರಂದು ಬೆಳಗ್ಗೆ 10.30ಕ್ಕೆ ಸಮುಯದಾಯ ಪ್ರಾರ್ಥನೆ ಮತ್ತು ವಚನ ಪಠಣ ಸಮಾರಂಭವನ್ನು ಉಚ್ಚ ನ್ಯಾಯಾಲಯದ ವಿಶ್ರಾಂತ ನ್ಯಾಯಾಧೀಶ ಅರಳಿ ನಾಗರಾಜ ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ ಮಾಜಿ ಸಚಿವ ಎಸ್.ಆರ್. ಪಾಟೀಲ, ಮಾಜಿ ಶಾಸಕ ದೊಡ್ಡನಗೌಡ ಪಾಟೀಲ, ಶಾಸಕ ಶೈಲೇಂದ್ರ ಬೆಲ್ದಾಳೆ ಆಗಮಿಸಲಿದ್ದು, ಕಲ್ಮಠದ ಮಡಿವಾಳ ರಾಜಯೋಗಿ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಮೂರು ದಿನಗಳ ಸಮಾರಂಭದ ಸಾನ್ನಿಧ್ಯವನ್ನು ಬಸವ ಧರ್ಮ ಪೀಠದ ಪೀಠಾಧ್ಯಕ್ಷೆ ಮಾತೆ ಗಂಗಾದೇವಿ ವಹಿಸುವರು.
2024 ರ ಶರಣ ಕಾಯಕ ರತ್ನ ಪ್ರಶಸ್ತಿಯನ್ನು ತೆಲಂಗಾಣ ರಾಜ್ಯದ ರಾಷ್ಟ್ರೀಯ ಬಸವ ದಳದ ಅನಿಲಕುಮಾರ ಪಾಟೀಲ, ಶರಣ ಸೇವಾ ರತ್ನಾ ಪ್ರಶಸ್ತಿಯನ್ನು ಬೈಲಹೊಂಗಲ ರಾಷ್ಟ್ರೀಯ ಬಸವ ದಳದ ಅಧ್ಯಕ್ಷೆ ವಿಜಯಲಕ್ಷ್ಮೀ ತೋಟಗಿ, ಶರಣ ದಾಸೋಹ ರತ್ನ ಪ್ರಶಸ್ತಿಯನ್ನು ಗೋಕಾಕ ರಾಷ್ಟ್ರೀಯ ಬಸವ ದಳದ ಗುರುಪಾದವ್ವ ದುಂಡಪ್ಪ ಜಕಾತಿ, ಶರಣ ವೈದ್ಯ ರತ್ನ ಪ್ರಶಸ್ತಿಯನ್ನು ಚಿತ್ರದುರ್ಗದ ವೈದ್ಯ ಡಾ.ಇಂದುಧರ ಅವರಿಗೆ ಪ್ರದಾನ ಮಾಡಲಾಗುವುದು.2024ರ ಬಸವಾತ್ಮಜೆ ರಾಷ್ಟ್ರೀಯ ಪ್ರಶಸ್ತಿಯನ್ನು ನರ್ಮದಾ ಬಚಾವೋ ಆಂದೋಲನ ಹೋರಾಟಗಾರ್ತಿ, ಸಾಮಾಜಿಕ ಕಾರ್ಯಕರ್ತೆ ಮೇಧಾ ಪಾಟ್ಕರ್ ಅವರಿಗೆ ನೀಡಲಾಗುವುದು. ಪ್ರವಚನ ಪಿತಾಮಹ ಲಿಂಗಾನಂದ ಸ್ವಾಮೀಜಿಯವರ ಸ್ಮರಣಾರ್ಥ ರಾಷ್ಟ್ರಮಟ್ಟದ ಸ್ವಾಮಿ ಲಿಂಗಾನಂದ ಶ್ರೀ ಪ್ರಶಸ್ತಿಯನ್ನು ಈ ವರ್ಷದಿಂದ ಕೊಡಲು ನಿರ್ಧರಿಸಿದ್ದು, 2024ರ ಸ್ವಾಮಿ ಲಿಂಗಾನಂದ ಶ್ರೀ ಪ್ರಶಸ್ತಿಯನ್ನು ಖ್ಯಾತ ಗಾಯಕ ಹಂಸಲೇಖ ಅವರಿಗೆ ಪ್ರದಾನ ಮಾಡಲಾಗುವುದು. ಬಸವ ರತ್ನ ರಾಜ್ಯ ಪ್ರಶಸ್ತಿಯನ್ನು ರಾಮದುರ್ಗದ ಬಸವ ತತ್ವ ಪ್ರಚಾರಕ ಸಿದ್ದಣ್ಣ ಲಂಗೋಟಿ ಅವರಿಗೆ ನೀಡಲಾಗುವುದು ಎಂದು ತಿಳಿಸಿದರು.
37ನೇ ಶರಣ ಮೇಳದ ವೇದಿಕೆ ತಯಾರಿ ಕಾರ್ಯ ನಡೆದಿದ್ದು, ಬರುವ ಭಕ್ತರಿಗೆ ಊಟಕ್ಕಾಗಿ 5 ಲಕ್ಷ ಬಿಳಿಜೋಳದ ರೊಟ್ಟಿ, 5 ಲಕ್ಷ ಸಜ್ಜೆ ರೊಟ್ಟಿ ತಯಾರಿ ಕಾರ್ಯ ನಡೆದಿದೆ. ಶರಣ ಮೇಳಕ್ಕೆ ರಾಜ್ಯ ಮಾತ್ರವಲ್ಲದೇ ನೆರೆಯ ಮಹಾರಾಷ್ಟ್ರ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ಗೋವಾ, ಕೇರಳದಿಂದ ಮೂರು ಲಕ್ಷಕ್ಕೂ ಅಧಿಕ ಭಕ್ತರು ಬರುವ ನಿರೀಕ್ಷೆ ಇದೆ ಎಂದು ಹೇಳಿದರು.ಸುದ್ದಿಗೋಷ್ಠಿಯಲ್ಲಿ ಬಸವ ಧರ್ಮ ಪೀಠದ ಉಪಾಧ್ಯಕ್ಷರಾದ ಮಹಾದೇಶ್ವರ ಸ್ವಾಮೀಜಿ, ಬಸವ ಮಂಟಪದ ಅನಿಮಿಷಾನಂದ ಸ್ವಾಮೀಜಿ, ಗುರುಬಸಪ್ಪ ನಿಲುಗಲ್ಲ, ಎಸ್.ಎಸ್.ರಾಂಪೂರ, ಶಿವಾನಂದ ಹುರಕಡ್ಲಿ ಉಪಸ್ಥಿತರಿದ್ದರು.