ಗೋಕುಲ ರಸ್ತೆಯ ಏರ್‌ಪೋರ್ಟ್‌ ಬಳಿಯ ದೇಶಪಾಂಡೆ ಸ್ಟಾರ್ಟ್‌ಅಪ್‌ ಕಟ್ಟಡದ ಎದುರಿನ 7 ಎಕರೆ ವಿಶಾಲವಾದ ಜಾಗೆಯಲ್ಲಿ 3 ದಿನ ಪ್ರತಿದಿನ ಬೆಳಗ್ಗೆ 11ರಿಂದ ರಾತ್ರಿ 9ರ ವರೆಗೆ ರಿಕಾನ್‌ ಎಕ್ಸ್‌ಪೋ ನಡೆಯಲಿದೆ.

ಹುಬ್ಬಳ್ಳಿ:

ಕ್ರೆಡಾಯ್‌ ಹುಬ್ಬಳ್ಳಿ-ಧಾರವಾಡ​ದಿಂದ ಜ. 9 ರಿಂದ 11ರ ವರೆಗೆ ಉತ್ತರ ಕರ್ನಾಟಕದ ಅತಿದೊಡ್ಡ ರಿಯಲ್‌ ಎಸ್ಟೇಟ್‌, ಒಳಾಂಗಣ ವಿನ್ಯಾಸ ಮತ್ತು ನಿರ್ಮಾಣ ಸಾಮಗ್ರಿಗಳ ಪ್ರದರ್ಶನ "ರಿಕಾನ್‌ ಎಕ್ಸ್‌ಪೋ-2026 " ಹಮ್ಮಿಕೊಳ್ಳಲಾಗಿದೆ ಎಂದು ಕ್ರೆಡಾಯ್‌ ಹು-ಧಾ ಅಧ್ಯಕ್ಷ ಗುರುರಾಜ ಅಣ್ಣಿಗೇರಿ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗೋಕುಲ ರಸ್ತೆಯ ಏರ್‌ಪೋರ್ಟ್‌ ಬಳಿಯ ದೇಶಪಾಂಡೆ ಸ್ಟಾರ್ಟ್‌ಅಪ್‌ ಕಟ್ಟಡದ ಎದುರಿನ 7 ಎಕರೆ ವಿಶಾಲವಾದ ಜಾಗೆಯಲ್ಲಿ 3 ದಿನ ಪ್ರತಿದಿನ ಬೆಳಗ್ಗೆ 11ರಿಂದ ರಾತ್ರಿ 9ರ ವರೆಗೆ ರಿಕಾನ್‌ ಎಕ್ಸ್‌ಪೋ ನಡೆಯಲಿದೆ. ಈ ಎಕ್ಸ್‌ಪೋದಲ್ಲಿ 150ಕ್ಕೂ ಹೆಚ್ಚು ಮಳಿಗೆ ತೆರೆಯಲಾಗಿದೆ. ಇದರಲ್ಲಿ ರಿಯಲ್‌ ಎಸ್ಟೇಟ್‌, ಇಂಟಿರಿಯರ್‌ ಡಿಸೈನ್‌ ಹಾಗೂ ಕಟ್ಟಡ ನಿರ್ಮಾಣ ಸಾಮಗ್ರಿ ಪ್ರದರ್ಶಿಸಲಾಗುತ್ತಿದೆ ಎಂದರು.

ಕರ್ನಾಟಕದಲ್ಲೇ ಎರಡನೇ ಮತ್ತು ಉತ್ತರ ಕರ್ನಾಟಕದಲ್ಲೇ ಮೊಟ್ಟಮೊದಲ ಬಾರಿಗೆ ಈ ಮೇಗಾ ಎಕ್ಸ್‌ಪೋ ನಡೆಯುತ್ತಿದೆ. ಧಾರವಾಡ, ಬೆಳಗಾವಿ, ಬೆಂಗಳೂರು, ಮೈಸೂರು, ದಾವಣಗೆರೆ, ಶಿವಮೊಗ್ಗ, ಬಾಗಲಕೋಟ, ವಿಜಯಪುರ ಸೇರಿದಂತೆ ವಿವಿಧ ಜಿಲ್ಲೆಗಳ ರಿಯಲ್‌ ಎಸ್ಟೇಟ್‌, ಒಳಾಂಗಣ ವಿನ್ಯಾಸ ಸಂಸ್ಥೆ ಹಾಗೂ ಕಟ್ಟಡ ನಿರ್ಮಾಣ ಸಂಸ್ಥೆಗಳು ಮತ್ತು ಸಾಮಗ್ರಿಗಳ ಉತ್ಪಾದಕರು, ಡೀಲರ್‌ಗಳು, ಕನ್ಸಲ್ಟಂಟ್‌ಗಳು, ಬಿಲ್ಡರ್‌ಗಳು ಭಾಗವಹಿಸಲಿದ್ದಾರೆ. ಮೊದಲ ಬಾರಿಗೆ ದುಬೈ ಮೂಲದ ಕಟ್ಟಡ ನಿರ್ಮಾಣ ಸಂಸ್ಥೆಯು ಪಾಲ್ಗೊಳ್ಳುತ್ತಿರುವುದು ವಿಶೇಷ ಎಂದು ಹೇಳಿದರು.

ಒಂದೇ ಸೂರಿನಲ್ಲಿ ಎಲ್ಲ ಸೌಲಭ್ಯ:

ಎಕ್ಸ್‌ಪೋ ಸಂಯೋಜಕ ಇಸ್ಮಾಯಿಲ್‌ ಸಂಶಿ ಮಾತನಾಡಿ, ಬಿಯಾಂಡ್‌ ಬೆಂಗಳೂರು ಕಲ್ಪನೆಯಲ್ಲಿ ಹುಬ್ಬಳ್ಳಿ-ಧಾರವಾಡವನ್ನು ಪ್ರಮುಖ ಹೂಡಿಕೆ ತಾಣವನ್ನಾಗಿ ರೂಪಿಸುವ ನಿಟ್ಟಿನಲ್ಲಿ ಈ ಎಕ್ಸ್‌ಪೋ ಮಹತ್ವದ ಹೆಜ್ಜೆಯಾಗಿದೆ. ಹೊಸ ಮಾದರಿ ನಿರ್ಮಾಣ ಸಾಮಗ್ರಿ, ಆಧುನಿಕ ಒಳಾಂಗಣ ವಿನ್ಯಾಸ ರಿಯಾಯಿತಿ ದರದಲ್ಲಿ ದೊರೆಯವಂತೆ ಈ ಎಕ್ಸ್‌ಪೋ ನೆರವಾಗಲಿದೆ ಎಂದರು.

ಲಕ್ಕಿ ಡ್ರಾ:

ಕ್ರೆಡಾಯ್‌ ಕಾರ್ಯದರ್ಶಿ ಸತೀಶ ಮುನವಳ್ಳಿ ಮಾತನಾಡಿ, ಎಕ್ಸ್‌ಪೋಗೆ ಬರುವ ಗ್ರಾಹಕರಿಗೆ ಲಕ್ಕಿ ಕೂಪನ್‌ ನೀಡಲಾಗುತ್ತಿದ್ದು, ಪ್ರತಿನಿತ್ಯವೂ ಲಕ್ಕಿ ಕೂಪನ್‌ಗಳನ್ನು ಡ್ರಾ ಮಾಡಿ ಅದೃಷ್ಟವಂತ ಗ್ರಾಹಕರಿಗೆ ಐಪೋನ್‌-17 ಪ್ರೊ ಮೊಬೈಲ್‌ ನೀಡಲಾಗುತ್ತದೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಕ್ರೆಡಾಯ್‌ ಚೇರ್‌ಮನ್‌ ಸಂಜಯ್‌ ಕೊಠಾರಿ, ಉಪಾಧ್ಯಕ್ಷ ಸೂರಜ ಅ​ಳವಂಡಿ, ಜಂಟಿ ಕಾರ್ಯದರ್ಶಿ ಅರ್ಬಾಜ್‌ ಸಾಂಸಿ, ಶ್ರೀಪಾದ ಶೇಜವಾಡ್ಕರ್‌, ಖಜಾಂಚಿ ಬ್ರಿಯಾನ್‌ ಡಿಸೋಜಾ, ಜಂಟಿ ಖಜಾಂಚಿ ಆಕಾಶ ಹಬೀಬ್‌, ಕಾರ್ಯಕ್ರಮ ನಿರ್ದೇಶಕ ಪ್ರಕಾಶ್‌ ಕಲ್ಕುಂದ್ರಿಕ​ರ್‌, ವಿನಯ್‌ ಕದಂ ಸೇರಿದಂತೆ ಹಲವರಿದ್ದರು.

ಉದ್ಘಾಟನೆಗೆ ನಟಿ ರಚಿತಾ ರಾಮ್‌

ಸ್ಯಾಂಡಲ್‌ವುಡ್‌ ನಟಿ ರಚಿತಾ ರಾಮ್‌ ಎಕ್ಸ್‌ಪೋ-2026ರ ಉದ್ಘಾಟನೆಗೆ ಆ​ಗ​ಮಿ​ಸ​ಲಿ​ದ್ದಾ​ರೆ. ಕೇಂದ್ರ ಸಚಿವ ಪಹ್ಲಾದ ಜೋಶಿ, ಸಭಾಪತಿ ಬಸವರಾಜ ಹೊರಟ್ಟಿ, ಸಂಸದ ಜಗದೀ​ಶ ಶೆಟ್ಟರ್‌, ಉಸ್ತುವಾರಿ ಸಚಿವ ಸಂತೋಷ್‌ ಲಾಡ್‌, ಶಾ​ಸ​ಕ​ರಾದ ಅರವಿಂದ ಬೆಲ್ಲದ, ಪ್ರಸಾದ್‌ ಅಬ್ಬಯ್ಯ, ಮಹೇಶ ಟೆಂಗಿನಕಾಯಿ, ಶ್ರೀನಿವಾಸ್‌ ಮಾನೆ, ಮೇಯರ್‌ ಜ್ಯೋತಿ ಪಾಟೀಲ, ಹುಡಾ ಅಧ್ಯಕ್ಷ ಶಾಕೀರ ಸನದಿ, ಕ್ರೆಡಾಯ್‌ ಕರ್ನಾಟಕದ ಅಧ್ಯಕ್ಷ ಭಾಸ್ಕರ್ ನಾಗೇಂದ್ರಪ್ಪ ಸೇರಿದಂತೆ ಹಲವರು ಭಾಗಿಯಾಗಲಿದ್ದಾರೆ ಎಂದು ಗುರುರಾಜ ಅಣ್ಣಿಗೇರಿ ತಿಳಿಸಿದರು.