ಸಾರಾಂಶ
ಇಲ್ಲಿ ಕಲಿತು ವಿವಿಧ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ವಿದ್ಯಾರ್ಥಿಗಳು ತನು, ಮನ, ಧನದಿಂದ ಸಹಾಯ ಮಾಡಬೇಕು
ಮುಂಡರಗಿ: ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಮಾತೃ ಋಣ, ಗುರುವಿನ ಋಣ, ಸಮಾಜದ ಋಣ ಈ ಮೂರು ಋಣಗಳನ್ನು ಯಾರೂ ಮರೆಯಬಾರದು ಎಂದು ಜ. ನಾಡೋಜ ಅನ್ನದಾನೀಶ್ವರ ಸ್ವಾಮೀಜಿ ಹೇಳಿದರು.
ಜ.ಅ. ವಿದ್ಯಾ ಸಮಿತಿಯ ಶತಮಾನೋತ್ಸವದ ಸಂದರ್ಭದಲ್ಲಿ ಇಲ್ಲಿನ ಕ.ರಾ. ಬೆಲ್ಲದ ಕಾಲೇಜಿನ ಸಭಾಭವನದಲ್ಲಿ ಜ.ಅ. ಪ್ರೌಢಶಾಲೆ ಮುಂಡರಗಿಯ 2017-18ನೇ ಸಾಲಿನ ವಿದ್ಯಾರ್ಥಿಗಳಿಂದ ಇತ್ತೀಚೆಗೆ ಆಯೋಜಿಸಿದ್ದ ಗುರುವಂದನೆ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಅವರು ಮಾತನಾಡಿದರು. ಮನುಷ್ಯ ಜೀವನದಲ್ಲಿ ಎಷ್ಟೇ ದೊಡ್ಡ ವ್ಯಕ್ತಿಯಾದರೂ ವಿದ್ಯೆ ಕಲಿತ ಶಾಲೆ ಹಾಗೂ ಅಕ್ಷರ ಕಲಿಸಿದ ಗುರುಗಳನ್ನು ಎಂದಿಗೂ ಮರೆಯಬಾರದು. ಮುಂಡರಗಿಯಂತಹ ಬರದ ನಾಡಿನಲ್ಲಿ ಕೆಜಿಯಿಂದ ಪಿಜಿ ವರೆಗೆ ಶಿಕ್ಷಣ ಸಂಸ್ಥೆಯನ್ನು ಪ್ರಾರಂಭಿಸಿ ಅದನ್ನು ಬೆಳೆಸುವಲ್ಲಿ ಶ್ರೀಮಠದ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದು ಹೇಳಿದರು. ಇತ್ತೀಚಿನ ವರ್ಷಗಳಲ್ಲಿ ಸರ್ಕಾರ ಶಿಕ್ಷಕರನ್ನು, ಪ್ರಾಧ್ಯಾಪಕರನ್ನು ಮತ್ತೆ ಭರ್ತಿ ಮಾಡಿಕೊಳ್ಳುತ್ತಿಲ್ಲ. ನಮ್ಮ ಸಂಸ್ಥೆಯಿಂದಲೇ ಪ್ರತಿ ತಿಂಗಳು ಲಕ್ಷಾಂತರ ವೇತನ ನೀಡಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡಲಾಗುತ್ತಿದೆ. ಇದೀಗ ಪಿಯು ಕಾಲೇಜಿನ ಕಟ್ಟಡ ಕಾರ್ಯ ಪ್ರಾರಂಭವಾಗಿದ್ದು, ಇಲ್ಲಿ ಕಲಿತು ವಿವಿಧ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ವಿದ್ಯಾರ್ಥಿಗಳು ತನು, ಮನ, ಧನದಿಂದ ಸಹಾಯ ಮಾಡಬೇಕು. ಅಂದಾಗ ಮುಂದೆ ಮತ್ತೆ ನಿಮ್ಮಂತಹ ಮಕ್ಕಳ ಕಲಿಕೆಗೆ ಅನುಕೂಲವಾಗುತ್ತದೆ ಎಂದರು.ಕಾಲೇಜು ಮೇಲ್ವಿಚಾರಣಾ ಸಮಿತಿ ಕಾರ್ಯಾಧ್ಯಕ್ಷ ಕರಬಸಪ್ಪ ಹಂಚಿನಾಳ ಅಧ್ಯಕ್ಷತೆವಹಿಸಿ, ಕಲಿತ ಶಾಲೆಯ ಗುರುಗಳನ್ನು ಗೌರವಿಸುತ್ತಿರುವುದು ವಿದ್ಯಾರ್ಥಿಗಳಲ್ಲಿನ ವಿನಯಶೀಲತೆಯನ್ನು ತೋರಿಸುತ್ತಿದೆ ಎಂದರು.
ವಿದ್ಯಾರ್ಥಿಗಳಾದ ವಿನಾಯಕ ಪತ್ತಾರ, ಮಹಮ್ಮದ್ ಹರೀವಾಣ, ಕಾಶೀನಾಥ ಸಣ್ಣದ್ಯಾವಣ್ಣವರ, ಇಮ್ಮಾಸಾಬ್ ಮುಲ್ಲಾ, ವೆಂಕಟೇಶ ಝಳಕಿ ತಮ್ಮ ಶಾಲಾ ದಿನಗಳಲ್ಲಿನ ನೆನಪಿನ ಬುತ್ತಿಯನ್ನು ಬಿಚ್ಚಿಡುತ್ತಾ ಎಸ್.ಸಿ. ಚಕ್ಕಡಿಮಠ, ಎಸ್.ಆರ್. ರಿತ್ತಿ, ವಿ.ಸಿ. ಹಂಪಿಮಠ, ಎಸ್.ಬಿ. ಸವಣೂರು, ಎಚ್.ವೈ. ಭಜಂತ್ರಿ, ಎಂ.ಎ. ಜಾತಗೇರ, ಎಸ್.ಕೆ. ಹುಬ್ಬಳ್ಳಿ, ಜಿ.ಡಿ. ಲಮಾಣಿ, ಎಂ.ಕೆ. ರೋಣದ, ಬಿ.ಟಿ. ಅಬ್ಬಿಗೇರಿ, ಎಂ.ಎಸ್. ನರೇಗಲ್, ಎಂ.ವೈ. ಬಳ್ಳಾರಿ, ಶಬೀರಾಬೇಗಂ ಕಾರಬೂದಿ, ಮನೋಜ ಕಾಡಯ್ಯಮಠ, ಸಾವಿತ್ರಿ ಹೊನ್ನೂರು, ಚನ್ನಪ್ಪಗೌಡ್ರ ಅವರಿಗೆ ಗುರುವಂದನೆ ಸಲ್ಲಿಸಿದರು.ಎಸ್.ಬಿ. ಹೀರೆಮಠ, ಡಾ. ಬಿ.ಜಿ. ಜವಳಿ, ಬಿ.ಎಫ್. ಈಟಿ, ಬಸವರಾಜ ಬನ್ನಿಕೊಪ್ಪ, ಎಂ.ಎಸ್. ಶಿವಶೆಟ್ಟರ್ ಪಾಲ್ಗೊಂಡಿದ್ದರು. ಆನಂತರ ಪ್ರಾಥಮಿಕ ಶಾಲಾ ಮಕ್ಕಳಿಂದ ಮನೋರಂಜನೆ ಕಾರ್ಯಕ್ರಮ ಜರುಗಿದವು. ವಿನಾಯಕ ಪತ್ತಾರ ಹಾಗೂ ವೆಂಕಟೇಶ ಝಳಕಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.