ಕೊಪ್ಪಳ ಜಿಲ್ಲೆಯಲ್ಲಿ ಹೃದಯಾಘಾತಕ್ಕೆ ಮೂವರು ಬಲಿ

| Published : Jul 19 2025, 01:00 AM IST

ಸಾರಾಂಶ

ಕೊಪ್ಪಳ ಜಿಲ್ಲೆಯಲ್ಲಿ 24 ಗಂಟೆಯೊಳಗೆ ಗಂಗಾವತಿ ತಾಲೂಕಿನಲ್ಲಿ ಇಬ್ಬರು, ಕೊಪ್ಪಳ ತಾಲೂಕಿನಲ್ಲಿ ಒಬ್ಬರು ಸೇರಿ ಮೂವರು ಹೃದಯಾಘಾತಕ್ಕೆ ಬಲಿಯಾಗಿದ್ದಾರೆ. ಈ ಮೂಲಕ ಜಿಲ್ಲೆಯಲ್ಲಿ ವಾರದೊಳಗೆ ಹೃದಯಾಘಾತಕ್ಕೆ ಮೃತರಾದವರ ಸಂಖ್ಯೆ 6ಕ್ಕೇರಿದೆ.

ಕೊಪ್ಪಳ/ಗಂಗಾವತಿ:

ಜಿಲ್ಲೆಯಲ್ಲಿ 24 ಗಂಟೆಯೊಳಗೆ ಗಂಗಾವತಿ ತಾಲೂಕಿನಲ್ಲಿ ಇಬ್ಬರು, ಕೊಪ್ಪಳ ತಾಲೂಕಿನಲ್ಲಿ ಒಬ್ಬರು ಸೇರಿ ಮೂವರು ಹೃದಯಾಘಾತಕ್ಕೆ ಬಲಿಯಾಗಿದ್ದಾರೆ. ಈ ಮೂಲಕ ಜಿಲ್ಲೆಯಲ್ಲಿ ವಾರದೊಳಗೆ ಹೃದಯಾಘಾತಕ್ಕೆ ಮೃತರಾದವರ ಸಂಖ್ಯೆ 6ಕ್ಕೇರಿದೆ.

ಗಂಗಾವತಿ ತಾಲೂಕಿನ ಹಿರೇಬೆಣಕಲ್‌ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ, ಕೊಪ್ಪಳ ತಾಲೂಕಿನ ಬಹದ್ದೂರಬಂಡಿಯ ಶಾಂತವೀರ ಸ್ವಾಮಿ ಗಂಗಾಧರ ಗಂಧದಮಠ(57), ಗಂಗಾವತಿ ತಾಲೂಕಿನ ದಾಸನಾಳ ಗ್ರಾಮದ ಕಾಂಗ್ರೆಸ್‌ ಕಾರ್ಯಕರ್ತ ಅಬ್ದುಲ್‌ ಖಾಜವಲಿ ( 27), ಕೊಪ್ಪಳ ತಾಲೂಕಿನ ಅಗಳಕೇರಿಯ ದೇವಮ್ಮ ನರೇಗಲ್‌ (68) ಹೃದಯಾಘಾತದಿಂದ ನಿಧನರಾಗಿದ್ದಾರೆ.

ಶಾಂತವೀರ ಸ್ವಾಮಿ ಅವರು, ಆರ್ಟ್‌ ಆಫ್ ಲಿವಿಂಗ್ ಯೋಗ ಶಿಕ್ಷಕರಾಗಿ ಹಲವು ವರ್ಷಗಳಿಂದ ಕೆಲಸ ಮಾಡುತ್ತಿದ್ದರು. ಕಳೆದ ಮೂರು ದಿನಗಳ ಹಿಂದೆ ಎದೆನೋವು ಕಾಣಿಸಿಕೊಂಡ ಹಿನ್ನೆಲೆ ಹುಬ್ಬಳ್ಳಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಶುಕ್ರವಾರ ಬೆಳಗ್ಗೆ ನಿಧನರಾದರು.

ಮೃತರಿಗೆ ಪತ್ನಿ, ಓರ್ವ ಪುತ್ರ, ಇಬ್ಬರು ಪುತ್ರಿಯರು ಸೇರಿದಂತೆ ಅಪಾರ ಬಂಧು-ಬಳಗವಿದೆ.

ಕಾಂಗ್ರೆಸ್ ಕಾರ್ಯಕರ್ತ ಅಬ್ದುಲ್ ಖಾಜವಲಿ (27) ಕೆಲ ದಿನಗಳಿಂದ ಕಾಲು ನೋವಿನಿಂದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಏಕಾಏಕಿ ಹೃದಯಾಘಾತಕ್ಕೆ ಒಳಗಾಗಿ ಗುರುವಾರ ರಾತ್ರಿ ಮೃತಪಟ್ಟಿದ್ದಾನೆ.

ಐದು ದಿನಗಳ ಹಿಂದೇ ಹೃದಯಾಘಾತದಿಂದ ನಿಧನರಾಗಿದ್ದ ಕೊಪ್ಪಳ ತಾಲೂಕಿನ ಅಗಳಿಕೇರಿಯ ರಾಮಣ್ಣ ನರೇಗಲ್ (76) ಅವರ ಪತ್ನಿ ದೇವಮ್ಮ(68) ಪತಿ ನಿಧನದಿಂದ ಆಘಾತಕ್ಕೆ ಒಳಗಾಗಿ ಗುರುವಾರ ರಾತ್ರಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.

ಕಳೆದೆರಡು ದಿನಗಳ ಹಿಂದೆ ಕೊಪ್ಪಳ ಭಾಗ್ಯನಗರದ ಮಂಜುಳಾ ಹಾಗೂ ಕುಷ್ಟಗಿಯ ಶಾಸಕ ದೊಡ್ಡನಗೌಡ ಪಾಟೀಲ ಆಪ್ತ ಸಹಾಯಕ ಸಹ ಚಂದ್ರು ವಡಿಗೇರಿ (46) ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಈ ಮೂಲಕ ಕೊಪ್ಪಳ ಜಿಲ್ಲೆಯಲ್ಲಿ ಹೃದಯಾಘಾತಕ್ಕೆ ಬಲಿಯಾದವರ ಸಂಖ್ಯೆ ವಾರದಲ್ಲಿಯೇ 6 ಕ್ಕೇರಿದೆ.