ಸಾರಾಂಶ
ಕನ್ನಡಪ್ರಭ ವಾರ್ತೆ ಮಧುಗಿರಿ
ಇತ್ತೀಚಿಗೆ ಕಲುಷಿತ ನೀರು ಸೇವನೆಯಿಂದ ಮೂವರು ಮೃತಪಟ್ಟ ಘಟನೆ ತಾಲೂಕಿನ ಮಿಡಿಗೇಶಿ ಹೋಬಳಿ ಚಿನ್ನೇನಹಳ್ಳಿಯಲ್ಲಿ ನಡೆದಿದೆ.ಚಿಕ್ಕದಾಸಪ್ಪ(74), ಮೀನಾಕ್ಷಿ (3), ಪೆದ್ದಣ್ಣ (74) ಮೃತ ದುರ್ಧೈವಿಗಳು. ಮೃತ ಚಿಕ್ಕದಾಸಪ್ಪ ಕಲುಷಿತ ನೀರು ಸೇವೇಸಿ ಅಸ್ವಸ್ಥರಾದ ಪರಿಣಾಮ ತುಮಕೂರು ಸಾರ್ವಜನಿಕ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಇದೇ ಗ್ರಾಮದ ಮೀನಾಕ್ಷಿ ವಾಂತಿಬೇಧಿಯಿಂದ ನರಳಿ ಚಿಕಿತ್ಸೆಗೆ ಮಧುಗಿರಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸುವ ಸಲುವಾಗಿ ಬರುತ್ತಿದ್ದ ಮಾರ್ಗ ಮಧ್ಯ ಮೃತಪಟ್ಟಿದ್ದಾರೆ.
ಕಳೆದ ನಾಲ್ಕು ದಿನಗಳಿಂದ ಕಲುಷಿತ ನೀರು ಸೇವನೆಯಿಂದಾಗಿ 200ಕ್ಕೂ ಅಧಿಕ ಗ್ರಾಮಸ್ಥರು ವಾಂತಿಬೇಧಿಯಿಂದ ಬಳಲುತ್ತಿದ್ದು, ಹಲವು ಆಸ್ಪತ್ರೆಗಳಿಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಪೈಕಿ ಕೆಲವರು ಚೇತರಿಕೆ ಕಂಡಿದೆ. ಆದರೆ ಇದ್ದಕ್ಕಿದ್ದಂತೆ ಮೂರು ವರ್ಷದ ಹೆಣ್ಣು ಮಗು ಸೇರಿ ಮೂವರು ಮೃತಪಟ್ಟಿದ್ದು, ಗ್ರಾಮಸ್ಥರಲ್ಲಿ ಆತಂಕ ಉಂಟಾಗಿದೆ.ಚಿನ್ನೇನಹಳ್ಳಿಯಲ್ಲಿ ಗ್ರಾಮ ದೇವತೆ ಲಕ್ಷ್ಮೀದೇವಿ ಮತ್ತು ಕೆಂಪಮ್ಮ ದೇವಿಯ ಜಾತ್ರಾ ಮಹೋತ್ಸವಕ್ಕೆ ಸಿದ್ದತೆ ನಡೆದಿತ್ತು. ಈ ವೇಳೆ ಇದ್ದಕ್ಕಿದ್ದಂತೆ ಕೆಲವರಿಗೆ ವಾಂತಿಬೇಧಿ ಕಾಣಿಸಿಕೊಂಡಿದ್ದು, ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ. ಗ್ರಾಮದಲ್ಲಿ ಮೂವರು ವಯೋವೃದ್ಧರು ಹಲವು ಕಾರಣಗಳಿಂದ ಮೃತಪಟ್ಟಿದ್ದಾರೆ. ಇದರಿಂದ ಎಚ್ಚೆತ್ತ ತಾಲೂಕು ಮತ್ತು ಜಿಲ್ಲಾಡಳಿತ ಮುನ್ನೆಚ್ಚರಿಕೆ ಕ್ರಮ ಕೈಗೊಂಡು ಎಲ್ಲ ಹಂತದ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದರು.
ಪ್ರಸ್ತುತ 292 ಜನ ಅಸ್ವಸ್ಥ: ಗ್ರಾಮದಲ್ಲಿ ತಾತ್ಕಾಲಿಕವಾಗಿ ತೆರೆದಿರುವ ಚಿಕಿತ್ಸಾ ಕೇಂದ್ರದಲ್ಲಿ 100ಕ್ಕೂ ಅಧಿಕ ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ. ಮಧುಗಿರಿ, ತುಮಕೂರು, ಹಿಂದೂಪುರ, ಗೌರಿಬಿದನೂರು, ಹಾಗೂ ಬೆಂಗಳೂರು ಆಸ್ಪತ್ರೆಗಳಿಗೆ ತೆರಳಿ ಚಿಕಿತ್ಸೆಗೆ ಒಳಗಾಗಿದ್ದಾರೆ. ಉಳ್ಳವರು ಖಾಸಗಿ ಆಸ್ಪತ್ರೆಯಲ್ಲಿ 40ಕ್ಕೂ ಹೆಚ್ಚು ಮಂದಿ ರೋಗಿಗಳು ದಾಖಲಾಗಿ ಚಿಕಿತ್ಸೆ ಪಡೆದು ಚೇತರಿಕೆ ಕಂಡಿದ್ದರು. ವಾಂತಿಬೇಧಿ ಮಾತ್ರ ನಿಯಂತ್ರಣಕ್ಕೆ ಬರುತ್ತಿಲ್ಲ ಎಂದು ಸಂಬಂಧಿಕರು ಕಳವಳ ವ್ಯಕ್ತಪಡಿಸಿದ್ದಾರೆ.ಸ್ಥಳೀಯ ಚಿಕಿತ್ಸಾ ಕೇಂದ್ರದಲ್ಲಿ 122 ರೋಗಿಗಳು ಚಿಕಿತ್ಸೆ ಪಡೆದ ಬಗ್ಗೆ ದಾಖಲಾಗಿದ್ದು, ನೇರವಾಗಿ 100ಕ್ಕೂ ಅಧಿಕ ರೋಗಿಗಳು ವಿವಿಧ ಆಸ್ಪತ್ರೆಗೆಳಿಗೆ ದಾಖಲಾಗಿದ್ದಾರೆ.
ಒಟ್ಟಿನಲ್ಲಿ ಕಲುಷಿತ ನೀರು ಸೇವನೆಯೇ ವಾಂತಿ ಬೇದಿಗೆ ಕಾರಣ ಎನ್ನಲಾಗಿದ್ದು, ಇದರಿಂದ ವಾಂತಿಬೇಧಿ ನಿಯಂತ್ರಣಕ್ಕೆ ಬರುತ್ತಿಲ್ಲವೆಂದು ಗ್ರಾಮಸ್ಥರು ಭಯಭೀತರಾಗಿದ್ದಾರೆ. ಗ್ರಾಮದಲ್ಲಿ ಸೂತಕದ ಛಾಯೆ ಆವರಿಸಿದೆ. ಹೊರಗಿನಿಂದ ಜಾತ್ರಾ ಮಹೋತ್ಸವಕ್ಕೆ ಬರುವ ಭಕ್ತರು ದೇವರ ದರ್ಶನ ಪಡೆದು ಹೋಗುತ್ತಿದ್ದಾರೆ. ಕರೋನಾ ವೇಳೆ ಹೆದರದ ಗ್ರಾಮಸ್ಥರು ಜಾತ್ರೆ ವೇಳೆ ಸಂಕ್ರಾಮಿಕ ರೋಗಕ್ಕೆ ಹೆದರಿ ಕೆಲವರು ಗ್ರಾಮ ತೊರೆದಿದ್ದು ಮನೆಗಳೇ ಆಸ್ಪತ್ರೆಗಳಾಗಿ ಪರಿಣಮಿಸಿವೆ.ಆಶಾ ಕಾರ್ಯಕರ್ತೆಯರು ಮನೆ ಮನೆಗೂ ತೆರಳಿ ಸಂಪೂರ್ಣ ಮಾಹಿತಿ ಪಡೆಯುತ್ತಿದ್ದು, ಜಲಜೀವನ್ ಮಿಷನ್ ಸಂಪರ್ಕದ ಪ್ರತಿ ಮನೆಗೂ ತೆರಳಿ ಪರಿಶೀಲನೆ ನಡೆಸಿ ಸರಿಪಡಿಸುವ ಕಾರ್ಯ ನಡೆಯುತ್ತಿದೆ.
ಟ್ಯಾಂಕ್‌ನಲ್ಲಿ ಒಂದೂವರೆ ಅಡಿ ಪಾಚಿ : ಈ ಹಿನ್ನೆಲೆಯಲ್ಲಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ತಾತ್ಕಾಲಿಕ ಆಸ್ಪತ್ರೆ ತೆರೆದು ಅಸ್ವಸ್ಥರಾದ ಗ್ರಾಮಸ್ಥರಿಗೆ ಚಿಕಿತ್ಸೆ ನೀಡುವ ಎಲ್ಲ ವ್ಯವಸ್ಥೆ ಮಾಡಿದ್ದರು. ಸ್ಥಳಕ್ಕೆ ಸಹಕಾರ ಸಚಿವ ಕೆ.ಎನ್.ರಾಜಣ್ಣ ಬೇಟಿ ನೀಡಿ ಗ್ರಾಮಸ್ಥರಿಗೆ ಧೈರ್ಯ ತುಂಬಿದ್ದರು. ಗ್ರಾಮದಲ್ಲಿ 265 ಕುಟುಂಬಗಳಿದ್ದು, ಓವರ್ ಹೆಡ್ ಟ್ಯಾಂಕ್‌ನಿಂದ ಕುಡಿವ ನೀರು ಸರಬರಾಜು ಮಾಡುತ್ತಿದ್ದು, ಜಾತ್ರೆ ಹಿನ್ನಲೆಯಲ್ಲಿ ಮೇಲ್ನೋಟಕ್ಕೆ ಸ್ವಚ್ಚತೆ ಮಾಡಿದ್ದು, ಆದರೆ ಈ ಟ್ಯಾಂಕ್‌ನಲ್ಲಿ ಒಂದೂವೂರೆ ಅಡಿ ಪಾಚಿ ಕಟ್ಟಿದ್ದು ಟ್ಯಾಂಕ್ ಒಳಭಾಗ ಕ್ಲೀನ್ ಮಾಡದೆ ನೇರವಾಗಿ ಟ್ಯಾಂಕಿಗೆ ನೀರು ತುಂಬಿಸಿ, ಮನೆಗಳಿಗೆ ನೀರು ಬಿಟ್ಟಿದ್ದರು. ಈ ನೀರನ್ನು ಸೇವೆಸಿದ ಗ್ರಾಮಸ್ಥರು ಒಬ್ಬಬ್ಬರಾಗಿ ವಾಂತಿಬೇಧಿ ಕಾಣಿಸಿಕೊಂಡು ಅಸ್ವಸ್ಥರಾಗಿದ್ದಾರೆ.ಪ್ರಭಾರ ಪಿಡಿಒ, ವಾಟರ್‌ಮ್ಯಾನ್ ಅಮಾನತು: ಮೂವರು ಮೃತಪಟ್ಟ ಹಿನ್ನೆಲೆಯಲ್ಲಿ ಪ್ರಕರಣವನ್ನು ಗಂಭಿರವಾಗಿ ಪರಿಗಣಿಸಿರುವ ಜಿಲ್ಲಾಡಳಿತ ಘಟನೆಯ ಸಂಬಂಧ ಪ್ರಭಾರ ಪಿಡಿಒ ಮುನಿರಾಜು, ವಾಟರಮ್ಯಾನ್ ಎಸ್.ನಾಗರಾಜುರನ್ನು ಅಮಾನತು ಮಾಡಿ ಜಿಪಂ ಸಿಇಒ ಜಿ. ಪ್ರಭು ಆದೇಶಿಸಿದ್ದಾರೆ.