ಸಾರಾಂಶ
ಕನ್ನಡಪ್ರಭ ವಾರ್ತೆ ಹೊಳಲ್ಕೆರೆ ಯೋಗ ಆಯುರ್ವೇದ ಮತ್ತು ಶಿಕ್ಷಣಕ್ಕೆ ನಾಡಿನಾದ್ಯಂತ ಹೆಸರಾದ ಹೊಳಲ್ಕೆರೆ ತಾಲೂಕು ಮಲ್ಲಾಡಿಹಳ್ಳಿ ಪರಮಪೂಜ್ಯ ಶ್ರೀರಾಘವೇಂದ್ರ ಸ್ವಾಮೀಜಿಯವರಿಂದ ಸ್ಥಾಪಿತವಾದ ಅನಾಥಸೇವಾಶ್ರಮದಲ್ಲಿ ತಿರುಕರಂಗ ಸಾಂಸ್ಕೃತಿಕ ವೇದಿಕೆಯಡಿಯಲ್ಲಿ ಪೂರ್ವಭಾವಿಯಾಗಿ ಒಂದು ತಿಂಗಳ ಕಾಲ ಮಕ್ಕಳ ನಾಟಕ ತರಬೇತಿ ಪ್ರಾರಂಭಗೊಂಡಿದೆ.
ಬರುವ ಜನವರಿ10, 11ಮತ್ತು 12ರಂದು 3 ನಾಟಕಗಳು ಪ್ರದರ್ಶನಗೊಳ್ಳಲಿವೆ ಎಂದು ಅನಾಥಸೇವಾಶ್ರಮದ ಉಪಾಧ್ಯಕ್ಷ ಹಾಗೂ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಸಾಹಿತಿ ರಾಘವೇಂದ್ರ ಪಾಟೀಲ ತಿಳಿಸಿದರು.ಬಿ.ವಿ.ಕಾರಂತರಿಂದ ಸ್ಪೂರ್ತಿ ಪಡೆದು ಡಾ.ಎಚ್.ಎಸ್.ವಿ. ವೆಂಕಟೇಶಮೂರ್ತಿಯವರು ಮಕ್ಕಳಿಗಾಗಿಯೇ ರಚಿಸಿದ ಅಳಿಲು ರಾಮಾಯಣ ನಾಟಕ ಮೂಲ ರಾಮಾಯಣ ಮಹಾಕಾವ್ಯದ ಈ ಉಪಕಥೆಯಲ್ಲಿ ಅಳಿಲು ಮರಿಯೊಂದು ಸಮುದ್ರಕ್ಕೆ ಸೇತುವೆ ಕಟ್ಟಲು ಕಪಿ ಸೇನೆ ಜೊತೆ ತಾನೂ ಕೈಲಾದ ಸೇವೆ ಸಲ್ಲಿಸಿ ರಾಮನಿಗೆ ಸಹಾಯ ಮಾಡಲು ಹೊರಟ ಕಥೆಯ ನಾಟಕ.
ಲಿಯೋ ಟಾಲ್ಸ್‌ಟಾಯ್ ಅವರ ಸಣ್ಣ ಕಥೆಯಾದಾರಿಸಿ ಡಾ.ಚಂದ್ರಶೇಖರ ಕಂಬಾರ ರಚಿಸಿದ ಬೆಪ್ಪತಕ್ಕಡಿ ಬೋಳೇಶಂಕರ ನಾಟಕವನ್ನು ಶಾಲಾ ವಿದ್ಯಾರ್ಥಿಗಳು ಅಭಿನಯಿಸಲಿಕ್ಕೆ ಅನುಕೂಲವಾಗುವಂತೆ ಬಹಳಷ್ಟು ಮಾರ್ಪಾಡು ಮಾಡಲಾಗಿದೆ. ತನ್ನ ಸುತ್ತಲಿನ ಜನರಿಂದ ಬೆಪ್ಪತಕ್ಕಡಿ ಎಂದು ಬೈಯಿಸಿಕೊಳ್ಳುವ ಅಪ್ಪಟ ಕಾಯಕ ಜೀವಿ, ಹಳ್ಳಿ ಹೈದನೊಬ್ಬನ ಕಥೆಯಿದು. ಸರಳ ಸುಂದರ ಬದುಕನ್ನು ಹೇಗೆ ಕಟ್ಟಿಕೊಳ್ಳಬೇಕು ಎಂಬುದನ್ನು ಕಲಿಸುವ ನಾಟಕ ಇದಾಗಿದೆ.ಈ ಎರಡೂ ನಾಟಕಗಳ ಸಂಗೀತ ಮತ್ತು ನಿರ್ದೇಶನವನ್ನು ಪ್ರಸಿದ್ಧ ರಂಗ ನಿರ್ದೇಶಕ ವೀರೇಶ್ ಎಂಪಿಎಂ ಮಾಡಲಿರುವರು. ತಿರುಕರಂಗ ಸಾಂಸ್ಕೃತಿಕ ವೇದಿಕೆ ಅನಾಥಸೇವಾಶ್ರಮ ಶಾಲಾ ಕಾಲೇಜುಗಳ ಮಕ್ಕಳು ಅಭಿನಯಿಸುವರು. ಜೊತೆಗೆ ದಿ.ವರ್ಚಯಸ್ ಬರ್ಗ್ಲರ್ ಮೂಲದ ಕೆ.ವಿ.ಅಕ್ಷರ ಕನ್ನಡಕ್ಕೆ ಅನುವಾದಿಸಿದ ಬೆಂಗಳೂರಿನ ರಂಗರಥ ತಂಡದಿಂದ ಅಭಿನಯಿಸಲ್ಪಡುವ ಪ್ರಸಿದ್ಧ ರಂಗ ನಿರ್ದೇಶಕಿ ಶ್ವೇತಾ ಶ್ರೀನಿವಾಸ್ ನಿರ್ದೇಶಿಸಿ ಅಭಿನಯಿಸುವ ಇದ್ದಾಗ ನಿಮ್ಮದು ಕದ್ದಾಗ ನಮ್ಮದು ಪ್ರದರ್ಶನಗೊಳ್ಳಲಿದೆ.
ಮೂರು ನಾಟಕಗಳ ಉತ್ಸವ ನಡೆಯಲಿದ್ದು, ನಾಡಿನ ರಾಜಕೀಯ ಧುರೀಣರು, ಸಾಹಿತಿಗಳು, ಸಮಾಜಸೇವಕರು ಮತ್ತು ನಾಟಕಾಭಿಮಾನಿಗಳು ಆಗಮಿಸಿಲಿರುವರು ಎಂದು ಅವರು ತಿಳಿಸಿದ್ದಾರೆ.