ಅಂಕೋಲಾ: ಕರಾವಳಿ ಭಾಗದಲ್ಲಿ ಉಂಟಾಗಿರುವ ಪ್ರಕ್ಷುಬ್ಧ ಸಮುದ್ರ ಹಾಗೂ ನದಿಯ ನೀರಿನ ಮಟ್ಟದಲ್ಲಾದ ದಿಢೀರ್ ಏರಿಳಿತ ಅಂಕೋಲಾ ತಾಲೂಕಿನ ಬೇಲೇಕೇರಿ ಮೀನುಗಾರಿಕಾ ಬಂದರಿನಲ್ಲಿ ಭಾರೀ ಅನಾಹುತಕ್ಕೆ ಕಾರಣವಾಗಿದೆ.
ನದಿ ಮತ್ತು ಸಮುದ್ರ ಸಂಗಮ ಪ್ರದೇಶದಲ್ಲಿ ಉಂಟಾದ ತೀವ್ರ ಅಲೆಗಳ ಅಬ್ಬರಕ್ಕೆ ಮೂರು ಪ್ರಮುಖ ಮೀನುಗಾರಿಕಾ ದೋಣಿಗಳು ನೀರಿನಲ್ಲಿ ಮುಳುಗಡೆಯಾಗಿದ್ದು, ಮೀನುಗಾರರ ಬದುಕಿನ ಬಂಡಿಯೇ ಕ್ಷಣಾರ್ಧದಲ್ಲಿ ಜಲಸಮಾಧಿಯಾಗಿದೆ.ಘಟನೆಯಲ್ಲಿ ಸ್ಥಳೀಯ ಮೀನುಗಾರರಾದ ಶ್ರೀಪಾದ್ ಬಾನಾವಳಿಕರ್, ರಾಮಚಂದ್ರ ಕುಡ್ತಳಕರ್ ಹಾಗೂ ನೀಲೇಶ್ ಜಾಂಬಳೇಕರ್ ಅವರಿಗೆ ಸೇರಿದ ಮೀನುಗಾರಿಕಾ ದೋಣಿಗಳು ಸಂಪೂರ್ಣ ಜಲಾವೃತಗೊಂಡಿವೆ.
ಭೀಕರ ಅಲೆಗಳ ಹೊಡೆತದಿಂದ ಬಂದರಿನಲ್ಲಿ ನಿಲ್ಲಿಸಲಾಗಿದ್ದ ದೋಣಿಗಳು ನಿಯಂತ್ರಣ ತಪ್ಪಿ ಒಂದಕ್ಕೊಂದು ಡಿಕ್ಕಿ ಹೊಡೆದು ನೀರಿನೊಳಗೆ ಮುಳುಗಿವೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಕೆಲವೇ ಕ್ಷಣಗಳಲ್ಲಿ ನಡೆದ ಈ ಘಟನೆ ಸ್ಥಳದಲ್ಲಿದ್ದ ಮೀನುಗಾರರನ್ನು ಬೆಚ್ಚಿಬೀಳುವಂತೆ ಮಾಡಿದ್ದು, ದೋಣಿಗಳನ್ನು ರಕ್ಷಿಸಲು ಮಾಡಿದ ಪ್ರಯತ್ನಗಳು ಫಲಕಾರಿಯಾಗಲಿಲ್ಲ.ದೋಣಿಗಳ ಜತೆಗೆ ಅವುಗಳಲ್ಲಿ ಅಳವಡಿಸಲಾಗಿದ್ದ ದುಬಾರಿ ಬೆಲೆಯ ಇಂಜಿನ್‌ಗಳು, ಮೀನುಗಾರಿಕೆಗೆ ಬಳಸುವ ಬಲೆಗಳು, ಹಗ್ಗಗಳು, ಜಿಪಿಎಸ್ ಸಾಧನಗಳು ಸೇರಿದಂತೆ ಜೀವನೋಪಾಯಕ್ಕೆ ಅಗತ್ಯವಾದ ಹಲವು ಉಪಕರಣಗಳು ನೀರಿನಲ್ಲಿ ಕೊಚ್ಚಿಹೋಗಿವೆ. ಇದರಿಂದ ಸಂತ್ರಸ್ತ ಮೀನುಗಾರರು ಲಕ್ಷಾಂತರ ರುಪಾಯಿಗಳ ಆರ್ಥಿಕ ನಷ್ಟ ಅನುಭವಿಸಿದ್ದಾರೆ.
ಈ ದೋಣಿಗಳೇ ಕುಟುಂಬದ ಬದುಕಿನ ಆಧಾರವಾಗಿದ್ದವು. ಪ್ರತಿದಿನ ಸಮುದ್ರಕ್ಕಿಳಿದು ಮೀನು ಹಿಡಿದು ಕುಟುಂಬವನ್ನು ಸಾಕುತ್ತಿದ್ದ ಮೀನುಗಾರರಿಗೆ ಈಗ ಬದುಕಿನ ದಾರಿ ಕಾಣದಂತಾಗಿದೆ. ವರ್ಷಗಳ ಕಾಲ ಕಷ್ಟಪಟ್ಟು ಕಟ್ಟಿಕೊಂಡಿದ್ದ ಆಸ್ತಿಯೇ ಕಣ್ಣೆದುರೇ ನೀರಿನಲ್ಲಿ ಮುಳುಗುತ್ತಿರುವ ದೃಶ್ಯ ಕಂಡ ಕುಟುಂಬಸ್ಥರು ಹಾಗೂ ಸ್ಥಳೀಯರು ಭಾವುಕರಾಗಿದ್ದಾರೆ.
ಕರಾವಳಿಯಲ್ಲಿ ಮುಂದುವರಿದಿರುವ ಅಲೆಗಳ ಅಬ್ಬರದಿಂದ ಇತರ ದೋಣಿಗಳ ಸುರಕ್ಷತೆ ಕುರಿತೂ ಆತಂಕ ವ್ಯಕ್ತವಾಗಿದ್ದು, ಮೀನುಗಾರರು ತಮ್ಮ ದೋಣಿಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲು ಹರಸಾಹಸ ಪಡುತ್ತಿದ್ದಾರೆ.
ಸಂತ್ರಸ್ತ ಕುಟುಂಬಗಳಿಗೆ ಸರ್ಕಾರ ತಕ್ಷಣ ವಿಶೇಷ ಪರಿಹಾರ ಘೋಷಿಸಿ, ಹಾನಿಗೊಳಗಾದ ದೋಣಿಗಳು ಹಾಗೂ ಮೀನುಗಾರಿಕಾ ಸಲಕರಣೆಗಳ ನಷ್ಟವನ್ನು ಸಮಗ್ರವಾಗಿ ಮೌಲ್ಯಮಾಪನ ಮಾಡಿ ಪರಿಹಾರ ನೀಡಬೇಕು ಎಂದು ಸ್ಥಳೀಯ ಮೀನುಗಾರರು ಹಾಗೂ ಸಾರ್ವಜನಿಕರು ಒತ್ತಾಯಿಸಿದ್ದಾರೆ. ಜತೆಗೆ ಇಂತಹ ಘಟನೆಗಳು ಮರುಕಳಿಸದಂತೆ ಬಂದರು ಪ್ರದೇಶದಲ್ಲಿ ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು, ಮುನ್ನೆಚ್ಚರಿಕೆ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಬೇಕು ಎಂಬ ಆಗ್ರಹವೂ ಕೇಳಿಬಂದಿದೆ.ಸ್ಥಳಕ್ಕೆ ತಾಲೂಕಾಡಳಿತ, ಮೀನುಗಾರಿಕೆ ಇಲಾಖೆ ಹಾಗೂ ಬಂದರು ಇಲಾಖೆ, ಬೇಲೆಕೇರಿ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು ಭೇಟಿ ನೀಡಿ ಪರಿಸ್ಥಿತಿಯನ್ನು ಪರಿಶೀಲಿಸಿದ್ದಾರೆ.
ಹಾನಿಯ ವಿವರಗಳನ್ನು ಸಂಗ್ರಹಿಸುವ ಕಾರ್ಯ ಮುಂದುವರಿದಿದೆ. ಸಮುದ್ರದ ಅಬ್ಬರ ಸದ್ಯಕ್ಕೂ ಕಡಿಮೆಯಾಗದಿರುವುದರಿಂದ ಕರಾವಳಿ ಭಾಗದ ಮೀನುಗಾರರು ಎಚ್ಚರಿಕೆಯಿಂದ ಇರಬೇಕೆಂದು ಅಧಿಕಾರಿಗಳು ಸೂಚಿಸಿದ್ದಾರೆ.