ಸಮಾಜ ಸುಜ್ಞಾನದಲ್ಲಿ ನಡೆದರೆ ಸಾಮಾಜಿಕ ಸಾಮರಸ್ಯದೊಂದಿಗೆ ರಾಷ್ಟ್ರೀಯ ಸಾಂವಿಧಾನಿಕ ಪ್ರಗತಿಯ ಯಶಸ್ಸು ಕಾಣಲು ಸಾಧ್ಯವಿದ್ದು, ಬಾಲ್ಯದಲ್ಲಿಯೇ ಇಂತಹ ಉತ್ತಮ ಸಂಸ್ಕಾರಕ್ಕೆ ಪ್ರತಿ ಮನೆಗಳು ಮುಂದಾಗಬೇಕು ಎಂದು ಜೆಡಿಎಸ್ ತಾಲೂಕು ಅಧ್ಯಕ್ಷ ರಾಮನಗೌಡ ಪಾಟೀಲ ತಿಳಿಸಿದರು.
ಹಾನಗಲ್ಲ: ಸಮಾಜ ಸುಜ್ಞಾನದಲ್ಲಿ ನಡೆದರೆ ಸಾಮಾಜಿಕ ಸಾಮರಸ್ಯದೊಂದಿಗೆ ರಾಷ್ಟ್ರೀಯ ಸಾಂವಿಧಾನಿಕ ಪ್ರಗತಿಯ ಯಶಸ್ಸು ಕಾಣಲು ಸಾಧ್ಯವಿದ್ದು, ಬಾಲ್ಯದಲ್ಲಿಯೇ ಇಂತಹ ಉತ್ತಮ ಸಂಸ್ಕಾರಕ್ಕೆ ಪ್ರತಿ ಮನೆಗಳು ಮುಂದಾಗಬೇಕು ಎಂದು ಜೆಡಿಎಸ್ ತಾಲೂಕು ಅಧ್ಯಕ್ಷ ರಾಮನಗೌಡ ಪಾಟೀಲ ತಿಳಿಸಿದರು.
ಶುಕ್ರವಾರ ಅಕ್ಕಿಆಲೂರಿನ ಜ್ಞಾನ ಭಾರತಿ ವಿದ್ಯಾವರ್ಧಕ ಸಂಘದ ಕಾನ್ವೆಂಟ್ ಮಾದರಿ ಕನ್ನಡ ಹಿರಿಯ ಹಾಗೂ ಪ್ರೌಢಶಾಲೆಯ ಶಾಲಾ ಸಂಸತ್ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.ಪ್ರತಿ ಪ್ರಜೆಗೆ ಪ್ರಜಾಪ್ರಭುತ್ವದ ಅರಿವಿದ್ದರೆ ಮಾತ್ರ ದೇಶದ ಪ್ರಗತಿ ಸಾಂವಿಧಾನಿಕ ಸಂಗತಿಗಳ ಅನುಪಾಲನೆ ಸಾಧ್ಯ. ನಮ್ಮ ದೇಶದ ಬಗೆಗೆ ಶ್ರದ್ಧೆ ಭಕ್ತಿಯನ್ನು ಬೆಳೆಸುವಲ್ಲಿ ಶಾಲೆ ಕಾಲೇಜುಗಳು ಮೊದಲ ಆದ್ಯತೆಯಾಗಿ ಮುನ್ನಡೆಯಬೇಕು. ಗುರು ಹಿರಿಯರನ್ನು ಗೌರವಿಸುವ, ಪ್ರತಿಭೆಯನ್ನು ಪ್ರಜ್ವಲಗೊಳಿಸುವ ಶಿಕ್ಷಣ ಸಂಸ್ಥೆಗಳಿಂದ ಮಾತ್ರ ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಲು ಸಾಧ್ಯ. ಬಡ ಪ್ರತಿಭಾವಂತ ಮಕ್ಕಳನ್ನು ಶೈಕ್ಷಣಿಕವಾಗಿ ದತ್ತು ತೆಗೆದುಕೊಳ್ಳುವ ಮೂಲಕ ಅಂತ ಮಕ್ಕಳ ಶಿಕ್ಷಣಕ್ಕೆ ನೆರವಾಗಬೇಕು ಎಂದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಂಸ್ಥೆಯ ಅಧ್ಯಕ್ಷ ಲಕ್ಷ್ಮಣ ಶೇಷಗಿರಿ, ಪ್ರತಿಭಾವಂತರಿಗೆ ಈಗ ಉತ್ತಮ ಅವಕಾಶಗಳು ತೆರೆದುಕೊಳ್ಳುತ್ತಿವೆ. ಕಾಲಹರಣವಿಲ್ಲದೆ ಸಮಯವನ್ನು ದುಡಿಸಿಕೊಳ್ಳುವ ಮೂಲಕ ವಿದ್ಯಾರ್ಥಿಗಳು ಜ್ಞಾನಾರ್ಜನೆಗೆ ಮುಂದಾಗಬೇಕು. ಪ್ರಜಾಪ್ರಭುತ್ವ ಗೆಲ್ಲಬೇಕಾದರೆ ಪ್ರಜೆಗಳು ರಾಷ್ಟ್ರೀಯ ಹಿತವನ್ನಿಟ್ಟುಕೊಂಡು ತಮ್ಮ ನಿಲುವುಗಳನ್ನು ಪ್ರಚುರಪಡಿಸಬೇಕು. ದೇಶದ ಹಿತವೇ ನಮ್ಮ ಹಿತವೆಂದು ನಮ್ಮ ನಡೆನುಡಿಗಳು ಸಂಪನ್ನಗೊಂಡರೆ ಮಾತ್ರ ಪ್ರಜಾಪ್ರಭುತ್ವ ಗೆಲ್ಲಲು ಸಾಧ್ಯ ಎಂದರು.ಚುನಾವಣೆ ಮೂಲಕ ವಿದ್ಯಾರ್ಥಿ ಸಂಸತ್‌ನ ಪ್ರೌಢವಿಭಾಗಕ್ಕೆ ಪ್ರಧಾನಿಯಾದ ದೀಕ್ಷಾ ಹಣ್ಣಿ, ಪ್ರಾಥಮಿಕ ವಿಭಾಗಕ್ಕೆ ಆಯ್ಕೆಯಾದ ತನುಶ್ರೀ ಹುಣಸೀಕಟ್ಟಿ ಮಾತನಾಡಿದರು. ಸಂಸ್ಥೆಯ ಕಾರ್ಯದರ್ಶಿ ಕೆ.ಎಸ್. ಕುಂಬಾರ, ಕೋಶಾಧ್ಯಕ್ಷ ಆರ್.ಜಿ. ಗುಡಿಕೇರಿ, ನಿರ್ದೇಶಕ ಕೆ.ವಿ. ಆಲದಕಟ್ಟಿ, ಸಾಹಿತಿ ಮಾರುತಿ ಶಿಡ್ಲಾಪೂರ, ಮಾರುತಿ ಪೇಟಕರ, ಸಿದ್ದು ಕೊಂಡೋಜಿ, ಮುಖ್ಯೋಪಾಧ್ಯಾಯರಾದ ವಿ.ಎಂ. ಕಬ್ಬಿಣಕಂತಿಮಠ, ಆರ್.ಬಿ. ಚನ್ನಾಪುರಮಠ, ಜ್ಯೋತಿ ಚಕ್ರಸಾಲಿ ವೇದಿಕೆಯಲ್ಲಿದ್ದರು.
ಶೈಲಜಾ ಬಿದರಕೊಪ್ಪ ಸ್ವಾಗತಿಸಿದರು. ಅಧ್ಯಕ್ಷ ಎಲ್.ಕೆ. ಶೇಷಗಿರಿ ಪ್ರತಿಜ್ಞಾವಿಧಿ ಬೋಧಿಸಿದರು. ಬಿ.ಬಿ. ನೆಲ್ಲಿಕೊಪ್ಪ ಕಾರ್ಯಕ್ರಮ ನಿರೂಪಿಸಿದರು. ರಾಧಾ ಬಡಿಗೇರ ವಂದಿಸಿದರು.