ಸಾಮಾನ್ಯ ಕುಟುಂಬದ ಹಿನ್ನೆಲೆಯಿಂದ ಬಂದಿರುವ ತಸ್ಮಿಯಾಬಾನು, ಓದಿನ ಬಗ್ಗೆ ಹೊಂದಿದ್ದ ಆಸಕ್ತಿ, ನಿರಂತರ ಪರಿಶ್ರಮ ಹಾಗೂ ಸಾಧಿಸುವ ಛಲದಿಂದ ಈ ಮಹತ್ವದ ಯಶಸ್ಸು ಸಾಧಿಸಿದ್ದಾರೆ.

ಬಳ್ಳಾರಿ: ನಗರದ ಕೌಲ್ ಬಜಾರ್ ಪ್ರದೇಶದ ಕಾರು ಟಿಂಕರಿಂಗ್‌ ಕಾರ್ಮಿಕ ಆರ್‌. ಬಾಷಾ ಹಾಗೂ ಆರ್. ಶಮೀಮ್ ಅವರ ಪುತ್ರಿ ಆರ್. ತಸ್ಮಿಯಾಬಾನು ಅವರು ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿಯ ಕೈಗಾರಿಕಾ ರಸಾಯನಶಾಸ್ತ್ರ ವಿಭಾಗದಲ್ಲಿ ಶೇ. 80ರಷ್ಟು ಅಂಕಗಳನ್ನು ಗಳಿಸುವ ಮೂಲಕ ಮೂರು ಚಿನ್ನದ ಪದಕಗಳಿಗೆ ಭಾಜನರಾಗಿದ್ದಾರೆ.

ಸಾಮಾನ್ಯ ಕುಟುಂಬದ ಹಿನ್ನೆಲೆಯಿಂದ ಬಂದಿರುವ ತಸ್ಮಿಯಾಬಾನು, ಓದಿನ ಬಗ್ಗೆ ಹೊಂದಿದ್ದ ಆಸಕ್ತಿ, ನಿರಂತರ ಪರಿಶ್ರಮ ಹಾಗೂ ಸಾಧಿಸುವ ಛಲದಿಂದ ಈ ಮಹತ್ವದ ಯಶಸ್ಸು ಸಾಧಿಸಿದ್ದಾರೆ. ಪೋಷಕರ ಪ್ರೋತ್ಸಾಹ ಮತ್ತು ಮಾರ್ಗದರ್ಶನವೂ ಅವರ ಶೈಕ್ಷಣಿಕ ಸಾಧನೆಗೆ ಪ್ರೇರಣೆಯಾಗಿದೆ. ಮಗಳ ಸಾಧನೆಗೆ ಕುಟುಂಬದ ಸದಸ್ಯರು, ಸಂಬಂಧಿಕರು ಹಾಗೂ ಕೌಲ್‌ ಬಜಾರ್‌ ನಿವಾಸಿಗಳು ಹರ್ಷ ವ್ಯಕ್ತಪಡಿಸಿದರು.

ಮಗಳು ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ ಮೂರು ಚಿನ್ನದ ಪದಕ ಸ್ವೀಕರಿಸುವ ಕ್ಷಣವನ್ನು ಕಂಡ ಪೋಷಕರು ಸಂತಸದಿಂದ ಕಣ್ತುಂಬಿಕೊಂಡರು. ಸತತ ಓದು ಹಾಗೂ ಉಪನ್ಯಾಸಕರ ಮಾರ್ಗದರ್ಶನದಿಂದ ನಾನು ಹೆಚ್ಚಿನ ಅಂಕಗಳನ್ನು ಪಡೆಯಲು ಸಾಧ್ಯವಾಯಿತು. ಪೋಷಕರು ಬಡತನದಲ್ಲೂ ನನ್ನ ಓದಿಗೆ ಯಾವುದೇ ಕೊರತೆ ಮಾಡದೆ ಪ್ರೋತ್ಸಾಹಿಸಿದರು. ಹೀಗಾಗಿ ಶೈಕ್ಷಣಿಕ ಸಾಧನೆ ಮಾಡಲು ಸಾಧ್ಯವಾಯಿತು ಎಂದು ಹೇಳಿದರು. ಕಾರ್ಮಿಕ ಕುಟುಂಬದ ಮಗಳ ಈ ಸಾಧನೆ ಇತರ ವಿದ್ಯಾರ್ಥಿಗಳಿಗೂ ಸ್ಫೂರ್ತಿಯಾಗಿದೆ.