ಸಾರಾಂಶ
- ನೇಪಾಳದಿಂದ ಬಂದು ಮನೆ ಕೆಲಸಕ್ಕೆ ಸೇರಿದ್ದರು । ಮಹಾರಾಷ್ಟ್ರದ ಪೊಲೀಸರ ಸಹಕಾರದಿಂದ ಆರೋಪಿಗಳ ಬಂಧನ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಮಾಜಿ ಶಿಕ್ಷಣ ಸಚಿವ ಗೋವಿಂದೇಗೌಡ ಅವರ ಪುತ್ರ ವೆಂಕಟೇಶ್ ಅವರ ಮನೆಯಲ್ಲಿ ಕಳ್ಳತನ ಮಾಡಿದ್ದ ಮೂವರು ಅಂತಾರಾಷ್ಟ್ರೀಯ ಮನೆಗಳ್ಳರನ್ನು ಘಟನೆ ನಡೆದು 24 ಗಂಟೆಗಳ ಒಳಗಾಗಿ ಮಹಾರಾಷ್ಟ್ರ ಪೊಲೀಸರ ಸಹಕಾರದೊಂದಿಗೆ ಬಂಧಿಸಿರುವ ಚಿಕ್ಕಮಗಳೂರು ಪೊಲೀಸರು ₹1.75 ಕೋಟಿ ಮೌಲ್ಯದ ಚಿನ್ನ ಹಾಗೂ ಬೆಳ್ಳಿ ಆಭರಣ ಮತ್ತು ಕೃತ್ಯಕ್ಕೆ ಬಳಸಿದ 2 ಕಾರುಗಳನ್ನು ವಶಕ್ಕೆ ಪಡೆದಿದ್ದಾರೆ.ಮಣಿಪುರ ಎಸ್ಟೇಟ್ ಮನೆಯಲ್ಲಿ ಕಳ್ಳತನ ಮಾಡಿದ್ದ ನೇಪಾಳ ದೇಶದ ಕೈಲಾಲಿ ಜಿಲ್ಲೆಯ ರಾಜೇಂದ್ರ ಶೇರ್ ಭಾಯ್, ಏಕೇಂದ್ರ ಕುಟಲ್ ಬದ್ವಾಲ್, ಕರಂ ಸಿಂಗ್ ಬಹದ್ದೂರು ಎಂಬುವರನ್ನು ಬಂಧಿಸಲಾಗಿದೆ. ಆರೋಪಿತರಿಂದ ₹1.50 ಕೋಟಿ ಮೌಲ್ಯದ ಚಿನ್ನ, ಒಂದು ಕೆಜಿ 200 ಗ್ರಾಂ ಬೆಳ್ಳಿ ಹಾಗೂ ಕೃತ್ಯಕ್ಕೆ ಬಳಸಿದ ₹25 ಲಕ್ಷ ಮೌಲ್ಯದ ಎರಡು ಕಾರುಗಳನ್ನು ವಶಕ್ಕೆ ಪಡೆಯಲಾಗಿದೆ.
ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಜಿಲ್ಲಾ ರಕ್ಷಣಾಧಿಕಾರಿ ಡಾ. ವಿಕ್ರಂ ಅಮಟೆ, ಕೊಪ್ಪ ತಾಲೂಕಿನ ಹರಂದೂರು ಗ್ರಾಮದ ಮಣಿಪುರ ಎಸ್ಟೇಟ್ ನಲ್ಲಿ ಕಳ್ಳತನ ನಡೆಸಿದ್ದ ಆರೋಪಿಗಳನ್ನು ಬಂಧಿಸಲಾಗಿದೆ. ಕೃತ್ಯದಲ್ಲಿ ಭಾಗಿಯಾಗಿದ್ದ ಇನ್ನೂ ಕೆಲವರು ತಲೆಮರೆಸಿಕೊಂಡಿದ್ದು ಅವರ ಬಂಧನಕ್ಕಾಗಿ ಕ್ರಮ ಕೈಗೊಳ್ಳ ಲಾಗಿದೆ ಎಂದು ಮಾಹಿತಿ ನೀಡಿದರು.ಮಣಿಪುರ ಎಸ್ಟೇಟ್ ಮಾಲೀಕ ವೆಂಕಟೇಶ್ ಮನೆಯಲ್ಲಿ ಆ. 21ರಂದು ಬೆಳಗಿನ ಜಾವ ₹6 ಲಕ್ಷ ನಗದು ಹಾಗೂ ₹37.50 ಲಕ್ಷ ಮೌಲ್ಯದ ಚಿನ್ನ, ಬೆಳ್ಳಿ ಆಭರಣಗಳ ಕಳುವು ಮಾಡಿರುವ ಸಂಬಂಧ ಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣಕ್ಕೆ ಸಂಬಂಧಪಟ್ಟಂತೆ ಕೊಪ್ಪ ಡಿವೈಎಸ್ಪಿ ಬಾಲಾಜಿ ಸಿಂಗ್ ಹಾಗೂ ಚಿಕ್ಕಮಗಳೂರು ಸಿಇಎನ್ ಡಿವೈಎಸ್ ಪಿ ತಿಪ್ಪೇಸ್ವಾಮಿ ನೇತೃತ್ವದಲ್ಲಿ ಎರಡು ತಂಡಗಳನ್ನು ರಚನೆ ಮಾಡಲಾಗಿತ್ತು. ಈ ತಂಡಗಳು ಪ್ರಕರಣ ನಡೆದ 24 ಗಂಟೆಗಳ ಒಳಗಾಗಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ ಎಂದರು.ಎಸ್ಟೇಟ್ ನಲ್ಲಿ ಕೆಲಸ ಮಾಡಿಕೊಂಡಿದ್ದ ದಂಪತಿ ಸೇರಿ ಇನ್ನೂ 2 ತಂಡ ಕೃತ್ಯದಲ್ಲಿ ಭಾಗಿಯಾಗಿರುವ ಶಂಕೆ ಇದೆ. ಅವರ ಬಂಧನಕ್ಕೆ ಈಗಾಗಲೇ ಬಲೆ ಬೀಸಲಾಗಿದೆ. ನಮ್ಮ ಪೊಲೀಸ್ ತಂಡಗಳು ಉತ್ತರ ಭಾರತ ಸೇರಿದಂತೆ ವಿವಿಧೆಡೆ ಕಾರ್ಯಾಚರಣೆ ನಡೆಸುತ್ತಿದ್ದು ಎಲ್ಲಾ ಕಳ್ಳರನ್ನು ಬಂಧಿಸುವುದಾಗಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಹೆಚ್ಚುವರಿ ಜಿಲ್ಲಾ ರಕ್ಷಣಾಧಿಕಾರಿ ಜಯಕುಮಾರ್ ಉಪಸ್ಥಿತರಿದ್ದರು.- ಬಾಕ್ಸ್ ---ಮುದ್ದೆಯಲ್ಲಿ ನಿದ್ರೆ ಮಾತ್ರೆ ಬೆರೆಸಿ ಅತ್ತೆ ಕೊಲೆ ಮಾಡಿದ ಸೊಸೆಚಿಕ್ಕಮಗಳೂರು: ಅಕ್ರಮ ಸಂಬಂಧ ಹೊಂದಿದ್ದ ಸೊಸೆಯೊಬ್ಬಳು ಅತ್ತೆಗೆ ಮುದ್ದೆಯಲ್ಲಿ 20 ನಿದ್ರೆ ಮಾತ್ರೆಗಳನ್ನು ಬೆರೆಸಿ ಕೊಟ್ಟು ಕೊಲೆ ಮಾಡಿರುವ ಘಟನೆ ಅಜ್ಜಂಪುರ ಪೊಲೀಸ್ ಠಾಣಾ ವ್ಯಾಪ್ತಿಯ ಶಿವನಿ ಗ್ರಾಮದಲ್ಲಿ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸೊಸೆ ಹಾಗೂ ಆಕೆ ಪ್ರಿಯಕರನನ್ನು ಬಂಧಿಸಲಾಗಿದೆ ಎಂದು ಡಾ. ವಿಕ್ರಂ ಅಮಟೆ ತಿಳಿಸಿದರು.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಶಿವನಿ ಗ್ರಾಮದ ದೇವೀರಮ್ಮ (75) ಸೊಸೆಯಿಂದಲೇ ಕೊಲೆಯಾದ ಅತ್ತೆ. ಅಶ್ವಿನಿ (34) ಕೊಲೆ ಗೈದ ಸೊಸೆ. ಮೃತರ ಮಗಳು ನೀಡಿದ ದೂರು ಆಧರಿಸಿ ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದರು.ಗ್ರಾಮದ ಆಂಜನೇಯ ಎಂಬಾತನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಅಶ್ವಿನಿ ತನ್ನ ಅತ್ತೆಯ ಬೀರುವಿನಲ್ಲಿದ್ದ ಬಂಗಾರ ಹಾಗೂ ನಗದನ್ನು ಆತನಿಗೆ ನೀಡಿದ್ದರು. ಬೀರುವಿನಲ್ಲಿದ್ದ ಬಂಗಾರ-ನಗದು ಕಡಿಮೆಯಾಗುತ್ತಿರುವುದು ದೇವಿರಮ್ಮ ಅವರ ಗಮನಕ್ಕೆ ಬಂದಿತ್ತು. ಈ ವಿಷಯ ಹೊರ ಬಂದರೆ ಕಷ್ಟ ಎಂದು ಅಶ್ವಿನಿ ತನ್ನ ಪ್ರಿಯಕರನೊಂದಿಗೆ ಸೇರಿ ಆ. 10ರಂದು ರಾತ್ರಿ ಮುದ್ದೆಯಲ್ಲಿ ನಿದ್ರೆ ಮಾತ್ರೆ ಬೆರೆಸಿ ಕೊಟ್ಟು ಅತ್ತೆಯ ಕೊಲೆಗೆ ಯತ್ನಿಸಿದ್ದರು ಎಂದು ಮಾಹಿತಿ ನೀಡಿದರು.
ಮುದ್ದೆಯೊಂದಿಗೆ ನಿದ್ರೆ ಮಾತ್ರೆ ಸೇವಿಸಿದ ದೇವಿರಮ್ಮಗೆ ತಡರಾತ್ರಿ ವಾಂತಿಯಾಗಿದ್ದರಿಂದ ಅಶ್ವಿನಿ ಅತ್ತೆಯನ್ನು ಸ್ಥಳೀಯ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ಬಳಿಕ ಬೇರೆ ಆಸ್ಪತ್ರೆಗೆ ಕರೆದೊಯ್ಯುವು ದಾಗಿ ದಾವಣಗೆರೆಗೆ ತೆರಳಲು ಸಹ ವಿಳಂಬ ಮಾಡಿದ್ದರಿಂದ ದೇವಿರಮ್ಮ ದಾವಣಗೆರೆ ತೆರಳುವ ಮಾರ್ಗ ಮಧ್ಯೆ ಮೃತಪಟ್ಟಿದ್ದರು. ಅಶ್ವಿನಿ ತನ್ನ ಅತ್ತೆ ವಯೋ ಸಹಜ ಅನಾರೋಗ್ಯದಿಂದ ಮೃತಪಟ್ಟಿದ್ದಾರೆ ಎಂದು ಸಂಬಂಧಿಕರ ಬಳಿ ಹೇಳಿ ಆ. 11ರಂದು ದೇವಿರಮ್ಮ ಅಂತ್ಯ ಸಂಸ್ಕಾರ ಮಾಡಿದ್ದರು.ಮೃತರ ಮಗಳು ತನ್ನ ತಾಯಿ ಬಿರುವಿನಲ್ಲಿದ್ದ ₹20 ಲಕ್ಷ ಮೌಲ್ಯದ ಚಿನ್ನಾಭರಣ, ₹65 ಸಾವಿರ ನಗದು ಕಳವಾಗಿರುವ ಬಗ್ಗೆ ಅಜ್ಜಂಪುರ ಠಾಣೆಯಲ್ಲಿ ಆ. 20ರಂದು ದೂರು ದಾಖಲಿಸಿದ್ದರು. ಪ್ರಕರಣದ ತನಿಖೆ ವೇಳೆ ಅಶ್ವಿನಿಯೇ ತನ್ನ ಪ್ರಿಯಕರ ಆಂಜನೇಯನೊಂದಿಗೆ ಸೇರಿ ಕೊಲೆ ಮಾಡಿರುವುದು ಬೆಳಕಿಗೆ ಬಂದಿದೆ ಎಂದರು.
ಈ ಹಿನ್ನೆಲೆಯಲ್ಲಿ ದೇವಿರಮ್ಮ ಶವವನ್ನು ಹೊರ ತೆಗೆದು ಎಫ್ ಎಸ್ ಎಲ್ ಪರೀಕ್ಷೆಗೆ ಕಳುಹಿಸಲಾಗುತ್ತದೆ. ಇನ್ನು ದೇವಿರಮ್ಮ ಬೀರುವಿನಿಂದ ಅಶ್ವಿನಿ ಚಿನ್ನಾಭರಣ ಕದ್ದು ಆಂಜನೇಯನಿಗೆ ನೀಡಿದ್ದು, ಈ ಬಂಗಾರದ ಆಭರಣಗಳನ್ನು ಆತ ಕೆಲ ಬ್ಯಾಂಕ್ ನಲ್ಲಿ ಇಟ್ಟಿರುವುದು ತನಿಖೆ ವೇಳೆ ಗೊತ್ತಾಗಿದೆ. ಸೋಮವಾರ ಚಿನ್ನಾಭರಣ ವಶಕ್ಕೆ ಪಡೆಯಲಾಗುವುದು ಎಂದು ವಿವರಿಸಿದರು.-- ಬಾಕ್ಸ್ --ದನಗಳ್ಳರ ಬಂಧನಇತ್ತೀಚಿನ ದಿನಗಳಲ್ಲಿ ಐಷಾರಾಮಿ ಕಾರುಗಳಲ್ಲಿ ಬಂದು ದನಗಳ್ಳತನ ಮಾಡುತ್ತಿದ್ದ ಪ್ರಕರಣಗಳು ಹೆಚ್ಚಾದ ಹಿನ್ನೆಲೆಯಲ್ಲಿ ಈ ಕಳ್ಳರ ಬಂಧನಕ್ಕೆ ರಚಿಸಲಾಗಿದ್ದ ವಿಶೇಷ ಪೊಲೀಸ್ ತಂಡ ಐವರನ್ನು ಬಂಧಿಸಿದೆ ಎಂದು ಡಾ. ವಿಕ್ರಂ ಅಮಟೆ ತಿಳಿಸಿದರು.ಆ. 10ರಂದು ಕಳಸ ಪಿಎಸ್ಐ ಬಲಿಗೆ ಚೆಕ್ ಪೋಸ್ಟ್ ಬಳಿ ಕ್ಸೈಲೋ ಕಾರಿನಲ್ಲಿ ನಾಲ್ಕು ದನಗಳನ್ನು ತುಂಬಿಕೊಂಡು ಹೋಗುತ್ತಿರುವ ಬಗ್ಗೆ ಮಾಹಿತಿ ಬಂದ ಮೇರೆಗೆ ಸ್ಥಳಕ್ಕಾಗಮಿಸಿ ವಾಹನ ತಡೆಯಲು ಯತ್ನಿಸಿದಾಗ ಕಾರನ್ನು ನಿಲ್ಲಿಸದೆ ಆರೋಪಿಗಳು ವೇಗವಾಗಿ ಹೋಗಿದ್ದರು. ಪೊಲೀಸರು ಕಾರನ್ನು ಹಿಂಬಾಲಿಸಿದಾಗ ದನ ಗಳ್ಳರು ಕಾರನ್ನು ಸ್ವಲ್ಪ ದೂರ ದಲ್ಲಿಯೇ ಬಿಟ್ಟು ಓಡಿ ಹೋಗಿದ್ದರು.
ಕಾರಿನಲ್ಲಿದ್ದ 4 ದನಗಳನ್ನು ರಕ್ಷಿಸಿದ ಪೊಲೀಸರು ಕಾರಿನಲ್ಲಿದ್ದ 3 ಮೊಬೈಲ್ ಗಳನ್ನು ವಶಕ್ಕೆ ಪಡೆದು ತನಿಖೆ ಆರಂಭಿಸಿ ಭದ್ರಾವತಿ ತಾಲೂಕಿನ 5ಅಂತರ ಜಿಲ್ಲಾ ದನಗಳ್ಳರನ್ನು ಬಂಧಿಸಿದ್ದಾರೆ ಎಂದರು.ಭದ್ರಾವತಿ ತಾಲೂಕಿನ ಸಲ್ಮಾನ್ ಖಾನ್, ಸಾಹಿಲ್, ಸೈಯದ್ ತೌಫಿಕ್, ಅಬ್ದುಲ್ ಅಜೀಜ್, ಅಬ್ದುಲ್ ಜಾವೇದ್ ಎಂಬುವರನ್ನು ಬಂಧಿಸಲಾಗಿದೆ. ಇವರು ಚಿಕ್ಕಮಗಳೂರು, ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ, ಹಾವೇರಿ ಜಿಲ್ಲೆಗಳಲ್ಲಿ ದನಗಳ್ಳತ ಮಾಡಿರುವುದು ತನಿಖೆ ವೇಳೆ ಬೆಳಕಿಗೆ ಬಂದಿದೆ ಎಂದು ಮಾಹಿತಿ ನೀಡಿದರು.
ಪೋಟೋ ಫೈಲ್ ನೇಮ್ 23 ಕೆಸಿಕೆಎಂ 1ಕೊಪ್ಪ ತಾಲೂಕಿನ ಹರಂದೂರು ಗ್ರಾಮದಲ್ಲಿ ಮನೆಗಳ್ಳತನ ನಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ನೇಪಾಳದ ಮೂವರನ್ನು ಬಂಧಿಸಿರುವುದು.---------------------------------------------