ರಾಮನಗರ: ಬಿಡದಿ ಪುರಸಭೆ ವ್ಯಾಪ್ತಿಯ ಕಲ್ಲುಗೋಪಹಳ್ಳಿ, ತಮ್ಮಣ್ಣನದೊಡ್ಡಿ ಗ್ರಾಮಗಳ ಸುತ್ತಮುತ್ತಲ ಪ್ರದೇಶದಲ್ಲಿ ಚಿರತೆ ಹಾವಳಿ ಹೆಚ್ಚಾಗಿದ್ದು, ಜನರು ಭಯಭೀತರಾಗಿದ್ದಾರೆ.
ಕಲ್ಲುಗೋಪಹಳ್ಳಿಯಲ್ಲಿ ಬೆಳಗಿನ ಜಾವದ ಸಮಯದಲ್ಲಿ ಮೂರು ಚಿರತೆ ಒಟ್ಟಾಗಿ ಗ್ರಾಮದಲ್ಲಿ ಪ್ರತ್ಯಕ್ಷವಾಗಿದ್ದು ಗ್ರಾಮದ ತುಂಬೆಲ್ಲಾ ರಸ್ತೆಗಳಲ್ಲಿ ಓಡಾಡಿರುವುದು ಸಿಸಿ ಟಿವಿ ಕ್ಯಾಮೆರಾ ಮಾತ್ರವಲ್ಲದೆ, ಗ್ರಾಮಸ್ಥರು ಮೊಬೈಲ್ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾರೆ. ಆಹಾರ ಹುಡುಕುತ್ತಾ ಬಂದಿರುವ ಚಿರತೆಗಳು ಗ್ರಾಮದಲ್ಲಿ ಮನೆಗಳ ಕಾಂಪೌಂಡ್ ಹಾಗೂ ಮನೆಯ ಮೇಲೇರಿ ಬೀದಿನಾಯಿ ಹಾಗೂ ಜಾನುವಾರುಗಳನ್ನು ಹುಡುಕಾಡಿವೆ.ಇನ್ನು ತಮ್ಮಣ್ಣನದೊಡ್ಡಿ ಗ್ರಾಮದ ರವಿ ಮನೆಗೆ ನುಗ್ಗಿದ ಚಿರತೆ ಒಂದು ಮೇಕೆಯನ್ನು ಕೊಂದು ರಕ್ತಕುಡಿದು ಮತ್ತೊಂದನ್ನು ಹೊತ್ತುಕೊಂಡು ಹೋಗಿದೆ. ಗ್ರಾಮದ ಹೊರವಲಯದಲ್ಲಿರುವ ಮುತ್ತುರಾಯಸ್ವಾಮಿ ದೇವಾಲಯದ ಆಸುಪಾಸಿನಲ್ಲಿ ಚಿರತೆಗಳು ಹಗಲಿನಲ್ಲಿಯೇ ಕಾಣಿಸಿಕೊಂಡು ಜನರಿಗೆ ಭಯ ಹುಟ್ಟಿಸಿವೆ. ಕೆಲವು ದಿನಗಳಿಂದ ಚಿರತೆ ಹಾವಳಿ ಹೆಚ್ಚಾಗಿದ್ದು ಗ್ರಾಮದಲ್ಲಿದ್ದ ಸಾಕುನಾಯಿಗಳನ್ನು ಚಿರತೆಗಳು ಹೊತ್ತುಹೋಗಿವೆ. ಇದರ ರುಚಿಯಲ್ಲೆ ಮತ್ತೆ ಗ್ರಾಮಕ್ಕೆ ಆಗಿಂದಾಗ್ಗೆ ಲಗ್ಗೆ ಇಡುತ್ತಲೆ ಬಂದಿವೆ.
ಗ್ರಾಮದಲ್ಲಿ ಚಿರತೆ ಕಾಣಿಸಿಕೊಂಡರುವ ಹಿನ್ನೆಲೆಯಲ್ಲಿ ಕತ್ತಲಾಗುತ್ತಿದ್ದಂತೆ ಮಹಿಳೆಯರು ಮಕ್ಕಳಾದಿಯಾಗಿ ಯಾರೂ ಮನೆಯಿಂದ ಹೊರಬರಲು ಭೀತಿ ಹುಟ್ಟಿಸಿವೆ. ಅಲ್ಲದೆ ಮನೆಗಳ ಮುಂದೆ ಜಾನುವಾರು, ಮೇಕೆ, ಕುರಿಗಳನ್ನ ಕಟ್ಟಿಹಾಕಲು ಭಯಪಡುವಂತಾಗಿದೆ. ಗ್ರಾಮದಲ್ಲಿ ಹಗಲು ರಾತ್ರಿಯೆನ್ನದೆ ರಾಜಾರೋಷವಾಗಿ ಓಡಾಡುತ್ತಾ ಆತಂಕ ಸೃಷ್ಟಿಸಿವೆ.ಗ್ರಾಮೀಣ ಪ್ರದೇಶದಲ್ಲಿರುವ ಸಣ್ಣ-ಪುಟ್ಟ ಗುಡ್ಡೆಗಳ ಪೊದೆಗಳಲ್ಲಿ ವಾಸಿಸುತ್ತಿರುವ ಚಿರತೆಗಳು ಆಹಾರಕ್ಕಾಗಿ ಸಾಕು ಪ್ರಾಣಿಗಳನ್ನು ಟಾರ್ಗೆಟ್ ಮಾಡಿಕೊಂಡಿವೆ. ಕತ್ತಲಾಗುತ್ತಿದ್ದಂತೆ ನಾಡಿನ ಕಡೆಗೆ ದಾಳಿಯಿಟ್ಟು ಬೀದಿನಾಯಿ, ಕುರಿ, ಮೇಕೆ, ದನಕರುಗಳು ಸೇರಿದಂತೆ ಜಾನುವಾರುಗಳನ್ನು ಹೊತ್ತೊಯ್ಯುತ್ತಿವೆ.
ಕಷ್ಟ ಕಾಲದಲ್ಲಿ ನೆರವಿಗೆ ಬರಲೆಂದು ಜೋಪಾನದಿಂದ ಸಾಕುತ್ತಿರುವ ಜಾನುವಾರುಗಳು ಚಿರತೆ ಬಾಯಿಗೆ ಸಿಲುಕುತ್ತಿವೆ. ಇದರಿಂದ ರೈತನಿಗೆ ಭಾರಿ ಪ್ರಮಾಣದ ನಷ್ಟ ಉಂಟಾಗುತ್ತಿದೆ. ಕೂಡಲೇ
ಚಿರತೆಗಳನ್ನು ಸೆರೆಹಿಡಿಯಬೇಕೆಂದು ಗ್ರಾಮಸ್ಥರು ಅರಣ್ಯ ಇಲಾಖೆ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.
ಬಾಕ್ಸ್ ............ಕಲ್ಲುಗೋಪಹಳ್ಳಿ ಮತ್ತು ತಮ್ಮಣ್ಣನದೊಡ್ಡಿ ಭಾಗದಲ್ಲಿ ಕೆಲವು ದಿನಗಳಿಂದ ಚಿರತೆ ಕಾಣಿಸಿಕೊಂಡಿರುವ ಬಗ್ಗೆ ಕೇಳಿಬಂದಿವೆ. ಈ ಚಿರತೆಗಳು ಹುಲ್ತಾರ್ ಅರಣ್ಯ ಪ್ರದೇಶದಿಂದ ಆಹಾರ ಹುಡುಕುತ್ತಾ ಬಂದಿರಬಹುದು. ಮಾಹಿತಿ ಬಂದ ಹಿನ್ನೆಲೆಯಲ್ಲಿ ಕಲ್ಲುಗೋಪಹಳ್ಳಿ ಬಳಿ ಈಗಾಗಲೇ ಬೋನು ಇರಿಸಲಾಗಿದೆ. ಆದರೆ, ಚಿರತೆ ಬೋನಿನತ್ತ ಸುಳಿದಿಲ್ಲ. ತಮ್ಮಣ್ಣನದೊಡ್ಡಿ ಸಮೀಪವೂ ಮತ್ತೊಂದು ಬೋನು ಇರಿಸಲು ಇಲಾಖಾಧಿಕಾರಿಗಳ ಗಮನ ಸೆಳೆಯಲಾಗುವುದು.
-ಭೈರವ, ವಲಯ ಅರಣ್ಯಾಧಿಕಾರಿ, ಬಿಡದಿ23ಕೆಆರ್ ಎನ್ 7,8.ಜೆಪಿಜಿ
ಕಲ್ಲುಗೋಪಹಳ್ಳಿ ಗ್ರಾಮದಲ್ಲಿ ಚಿರತೆ ಓಡಾಡುತ್ತಿರುವುದನ್ನು ಗ್ರಾಮಸ್ಥರೊಬ್ಬರು ಮೊಬೈಲ್ ಕ್ಯಾಮೆರಾದಲ್ಲಿ ಸೆರೆ ಹಿಡಿದಿರುವುದು.