ಸಾರಾಂಶ
ಭಾರತ ಸೇವಾದಳ ಜಿಲ್ಲಾ ಸಮಿತಿಯಲ್ಲಿ ಹಣ ದುರುಪಯೋಗಪಡಿಸಿಕೊಂಡಿರುವ ಕೇಂದ್ರ ಸಮಿತಿ ಸದಸ್ಯ, ಕಾರ್ಯದರ್ಶಿ ಹಾಗೂ ಕೋಶಾಧ್ಯಕ್ಷರನ್ನು ವಜಾಗೊಳಿಸಿ ಆ ಸ್ಥಾನಗಳಿಗೆ ಬೇರೆಯವರನ್ನು ನೇಮಕ ಮಾಡಲಾಗಿದೆ ಎಂದು ಸಮಿತಿ ಜಿಲ್ಲಾಧ್ಯಕ್ಷ ಉಮೇಶ್ ಬಾಬು ತಿಳಿಸಿದರು.
ಕನ್ನಡಪ್ರಭ ವಾರ್ತೆ ರಾಮನಗರ
ಭಾರತ ಸೇವಾದಳ ಜಿಲ್ಲಾ ಸಮಿತಿಯಲ್ಲಿ ಹಣ ದುರುಪಯೋಗಪಡಿಸಿಕೊಂಡಿರುವ ಕೇಂದ್ರ ಸಮಿತಿ ಸದಸ್ಯ, ಕಾರ್ಯದರ್ಶಿ ಹಾಗೂ ಕೋಶಾಧ್ಯಕ್ಷರನ್ನು ವಜಾಗೊಳಿಸಿ ಆ ಸ್ಥಾನಗಳಿಗೆ ಬೇರೆಯವರನ್ನು ನೇಮಕ ಮಾಡಲಾಗಿದೆ ಎಂದು ಸಮಿತಿ ಜಿಲ್ಲಾಧ್ಯಕ್ಷ ಉಮೇಶ್ ಬಾಬು ತಿಳಿಸಿದರು.ನಗರದ ಪ್ರವಾಸಿ ಮಂದಿರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮಿತಿಯಲ್ಲಿ ಕೇಂದ್ರ ಸಮಿತಿ ಸದಸ್ಯರಾಗಿದ್ದ ರವಿಕುಮಾರ್ ಗೌಡ, ಕಾರ್ಯದರ್ಶಿ ವಸಂತ ಕುಮಾರ್ ಹಾಗೂ ಖಜಾಂಚಿ ಪಿ.ಆನಂದರಾಜು ಅವರನ್ನು ಹಣ ದುರುಪಯೋಗ ಆರೋಪದ ಹಿನ್ನೆಲೆಯಲ್ಲಿ ಸಮಿತಿಯ ಪದಾಧಿಕಾರಿಗಳ ಬಹುಮತದ ಆಧಾರದ ಮೇಲೆ ವಜಾ ಮಾಡಲಾಗಿದೆ ಎಂದರು.ಈಗ ಕೇಂದ್ರ ಸಮಿತಿ ನೂತನ ಸದಸ್ಯರನ್ನಾಗಿ ಶಿವಕುಮಾರಸ್ವಾಮಿ, ಕಾರ್ಯದರ್ಶಿಯನ್ನಾಗಿ ಲಕ್ಷ್ಮೀ ಮಂಜುನಾಥ್ ಹಾಗೂ ಖಜಾಂಚಿಯನ್ನಾಗಿ ಪಟೇಲ್ ಸಿ.ರಾಜು ಅವರನ್ನು ಸರ್ವಾನುಮತದ ಆಧಾರದ ಮೇಲೆ ನೇಮಕ ಮಾಡಲಾಗಿದೆ. ಸಮಿತಿ ಅಧ್ಯಕ್ಷರು ಒಳಗೊಂಡಂತೆ 15ರ ಪೈಕಿ 10 ಮಂದಿ ಪದಾಧಿಕಾರಿಗಳ ಬಹುಮತದ ಆಧಾರದ ಮೇಲೆ ಈ ನಿರ್ಣಯ ಕೈಗೊಳ್ಳಲಾಗಿದೆ ಎಂದು ಹೇಳಿದರು. ಸಮಿತಿಯಲ್ಲಿ ನಗದು ಪುಸ್ತಕ ಮತ್ತು ಬ್ಯಾಂಕ್ ಪುಸ್ತಕದಲ್ಲಿನ ಲೆಕ್ಕವನ್ನು ತಾಳೆ ಹಾಕಿದಾಗ ₹2 ಲಕ್ಷ ವ್ಯತ್ಯಾಸ ಕಂಡು ಬಂದಿತು. ಅದನ್ನು ಪರಿಶೀಲನೆ ಮಾಡಿದಾಗ ಆ ಹಣ ದುರುಪಯೋಗ ಆಗಿರುವುದು ಕಂಡು ಬಂದಿತು. ನಾಲ್ವರನ್ನು ಒಳಗೊಂಡ ಆಂತರಿಕ ಲೆಕ್ಕ ಪರಿಶೋಧನಾ ಸಮಿತಿ ನಡೆಸಿದ ತನಿಖೆಯಲ್ಲಿಯೂ ಹಣ ದುರುಪಯೋಗ ಆಗಿರುವುದು ಖಚಿತವಾಯಿತು. ಚುನಾವಣೆ ನಡೆಸಲು ₹30000 ರಿಂದ ₹35000 ಖರ್ಚು ಮಾಡಿರುವುದು, ಗಾಂಧಿ ಟೋಪಿ ಖರೀದಿಯಲ್ಲಿಯೂ ಅವ್ಯವಹಾರ ನಡೆಸಿರುವುದು. ಅಲ್ಲದೆ, ಅಧ್ಯಕ್ಷರ ಸಹಿಯನ್ನು ನಕಲು ಮಾಡಿ ರೆಜ್ಯುಲೇಷನ್ ಪಾಸ್ ಮಾಡಿರುವುದು, ಬಳಿಕ ಅದನ್ನು ಬಿಳಿ ಶಾಹಿ ಬಳಸಿ ಅಳಿಸಿದ್ದಾರೆ. ಇದನ್ನು ಹಿಂದಿನ ಸಭೆಯಲ್ಲಿ ಅವರೇ ಒಪ್ಪಿಕೊಂಡಿದ್ದಾರೆ. ಈ ರೀತಿ ಸೇವಾ ದಳದ ಆಶಯಕ್ಕೆ ಧಕ್ಕೆಯಾಗುವ ರೀತಿಯಲ್ಲಿ ಮೂವರು ಪದಾಧಿಕಾರಿಗಳು ನಡೆದುಕೊಂಡಿದ್ದಾರೆ ಎಂದು ಟೀಕಿಸಿದರು.ಸುದ್ದಿಗೋಷ್ಠಿಯಲ್ಲಿ ಶಿವಕುಮಾರಸ್ವಾಮಿ, ಎಸ್ .ಎಚ್. ಶಿವಕುಮಾರ್ , ಬಿ.ಆರ್. ಗೋಪಾಲಕೃಷ್ಣ, ರಾಣಿ, ಎಂ. ಸುಧಾ, ಶಾಂತಮ್ಮ, ಎ.ಎಸ್.. ಯೋಗೇಶ್ ಇದ್ದರು.ಶಿಕ್ಷಣ ಇಲಾಖೆಯ ಅಂಗ ಸಂಸ್ಥೆಯಾದ ಭಾರತ ಸೇವಾದಳಕ್ಕೆ ಮೊದಲು ಧನ ಸಹಾಯ ಬರುತ್ತಿರಲಿಲ್ಲ. ಕಳೆದ ಎರಡು ವರ್ಷಗಳಿಂದ ಪ್ರತಿ ವರ್ಷ ₹2 ಲಕ್ಷ ಅನುದಾನ ಬರುತ್ತಿದೆ. ಸಮಿತಿಯಲ್ಲಿ ಉನ್ನತ ಹುದ್ದೆಯಲ್ಲಿದ್ದವರೆ ಅನುದಾನ ದುರ್ಬಳಕೆ ಮಾಡಿಕೊಂಡಿದ್ದಾರೆ. ಅವರೆಲ್ಲರ ವಿರುದ್ಧ ಸಮಿತಿ ಕ್ರಮ ವಹಿಸಿದೆ.ಶಿವಕುಮಾರಸ್ವಾಮಿ, ಕೇಂದ್ರ ಸಮಿತಿ ನೂತನ ಸದಸ್ಯ ಭಾರತ ಸೇವಾದಳ