ಕುಕನೂರು ತಾಲೂಕಿನ ಮೂರು ಮೊರಾರ್ಜಿ ವಸತಿ ಶಾಲೆಗಳಿಗೆ ಪಿಯುಸಿ ಭಾಗ್ಯ

| Published : May 22 2024, 12:54 AM IST

ಕುಕನೂರು ತಾಲೂಕಿನ ಮೂರು ಮೊರಾರ್ಜಿ ವಸತಿ ಶಾಲೆಗಳಿಗೆ ಪಿಯುಸಿ ಭಾಗ್ಯ
Share this Article
  • FB
  • TW
  • Linkdin
  • Email

ಸಾರಾಂಶ

ತಾಲೂಕಿನ ಮೂರು ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಿಗೆ ಪಿಯುಸಿ ಭಾಗ್ಯ ಒದಗಿ ಬಂದಿದೆ. ಅಲ್ಲದೆ ಈ ಮೂರು ವಸತಿ ಶಾಲೆಗಳಲ್ಲಿ ಸಹ ವಿದ್ಯಾರ್ಥಿಗಳ ಸಂಖ್ಯೆ ದ್ವಿಗುಣಕ್ಕೆ ಸಹ ಸರ್ಕಾರ ಆದೇಶಿಸಿದೆ.

ವಿದ್ಯಾರ್ಥಿಗಳ ಸಂಖ್ಯೆ ಸಹ ದ್ವಿಗುಣ । ಮೂರು ವಸತಿ ಶಾಲೆಗಳಲ್ಲಿ ಬಹುಮಹಡಿ ಕಟ್ಟಡಕ್ಕೆ ತಲಾ ₹ 2 ಕೋಟಿ ಅನುದಾನ

ಕನ್ನಡಪ್ರಭ ವಾರ್ತೆ ಕುಕನೂರು

ತಾಲೂಕಿನ ಮೂರು ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಿಗೆ ಪಿಯುಸಿ ಭಾಗ್ಯ ಒದಗಿ ಬಂದಿದೆ. ಅಲ್ಲದೆ ಈ ಮೂರು ವಸತಿ ಶಾಲೆಗಳಲ್ಲಿ ಸಹ ವಿದ್ಯಾರ್ಥಿಗಳ ಸಂಖ್ಯೆ ದ್ವಿಗುಣಕ್ಕೆ ಸಹ ಸರ್ಕಾರ ಆದೇಶಿಸಿದೆ. ಈ ವರ್ಷದಿಂದ ತರಗತಿಗಳು ಸಹ ಆರಂಭವಾಗಿವೆ.

6ನೇ ತರಗತಿಯಿಂದ 10 ತರಗವತಿವರೆಗೆ ಇದ್ದ ವಸತಿ ಶಾಲೆಗಳನ್ನು ಪಿಯುಸಿವರೆಗೆ ಸಂಯೋಜಿಸಲಾಗಿದೆ. ಕುಕನೂರು ತಾಲೂಕಿನ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆ ಕುಕನೂರು, ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆ ಕುದರಮೋತಿ, ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆ ತಳಕಲ್‌ಗಳನ್ನು ಪಿಯುಸಿ ಕಾಲೇಜುಗಳನ್ನಾಗಿ ಸಂಯೋಜಿಸಲಾಗಿದೆ. ಪ್ರಸಕ್ತ ವರ್ಷದಿಂದ ಪಿಯುಸಿ ತರಗತಿಗಳನ್ನು ಕರ್ನಾಟಕ ಪದವಿಪೂರ್ವ ಶಿಕ್ಷಣ ಮಂಡಳಿ ಅಧೀನದಲ್ಲಿ ಆರಂಭಿಸಲಾಗಿದೆ. ಈಗಾಗಲೇ ವಸತಿ ಶಾಲೆಗಳಲ್ಲಿ ಪಿಯುಸಿ ತರಗತಿ ಪ್ರವೇಶಾತಿ ಸಹ ಪ್ರಾರಂಭವಾಗಿದೆ.

ವಿದ್ಯಾರ್ಥಿಗಳ ಸಂಖ್ಯೆ ದ್ವಿಗುಣ:ಕುಕನೂರು, ತಳಕಲ್ಲ, ಕುದರಿಮೋತಿ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳ ವಿದ್ಯಾರ್ಥಿಗಳ ಸಂಖ್ಯೆ ಸಹ ದ್ವಿಗುಣ ಆಗಿದೆ.

ಬಹುಮಹಡಿ ಕಟ್ಟಡಕ್ಕೆ ತಲಾ 2 ಕೋಟಿ ಅನುದಾನ:

ತಾಲೂಕಿನ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆ ಕುಕನೂರು, ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆ ಕುದರಮೋತಿ, ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆ ತಳಕಲಿನ ವಸತಿ ಶಾಲೆಯಲ್ಲಿ ವಿದ್ಯಾರ್ತಿಗಳ ವಸತಿ ನಿಲಯ ನಿರ್ಮಾಣಕ್ಕೆ ತಲಾ ಒಂದು ವಸತಿ ಶಾಲೆಗೆ ₹2 ಕೋಟಿಯನ್ನು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಮಂಜೂರು ಮಾಡಿದೆ. ವಸತಿ ನಿಲಯ ನಿರ್ಮಾಣಕ್ಕೆ ಈಗಾಗಲೇ ಸ್ಥಳ ಪರಿಶೀಲನೆ ಸಹ ಆಗಿದೆ.

ರಾಯರಡ್ಡಿ ಮುತುವರ್ಜಿ:ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಕುಕನೂರು ತಾಲೂಕಿನ ಈ ಮೂರು ವಸತಿ ಶಾಲೆಗಳನ್ನು ಪಿಯುಸಿ ಹಂತದವರೆಗೆ ಸಂಯೋಜಿಸಿ, ವಸತಿ ಶಾಲೆಯ ವಿದ್ಯಾರ್ಥಿಗಳ ಸಂಖ್ಯೆಯನ್ನು ಸಹ ದ್ವಿಗುಣ ಗೊಳಿಸಿ, ವಸತಿ ಶಾಲೆಗಳಲ್ಲಿ ನಿಲಯ ನಿರ್ಮಾಣಕ್ಕೆ ಒಂದು ವಸತಿ ಶಾಲೆಗೆ ₹2 ಕೋಟಿಯಂತೆ ಮೂರು ವಸತಿ ಶಾಲೆಗೆ ₹6 ಕೋಟಿ ಅನುದಾನ ಒದಗಿಸಿ ಶೈಕ್ಷಣಿಕ ಅಭಿವೃದ್ಧಿಗೆ ಕಾಳಜಿ ವಹಿಸಿದ್ದಾರೆ. ಕಳೆದ ವರ್ಷವೇ ವಸತಿ ಶಾಲೆಗಳ ಅಭಿವೃದ್ಧಿಗೆ ಸರ್ಕಾರದ ಮಟ್ಟದಲ್ಲಿ ಪ್ರಸ್ತಾವನೆ ಸಲ್ಲಿಸಿ ಕಾರ್ಯ ಕೈಗೊಂಡಿದ್ದಾರೆ.

ಯಲಬುರ್ಗಾ ಕ್ಷೇತ್ರದಲ್ಲಿ ಯಾವ ಮಗುವೂ ಸಹ ಶಿಕ್ಷಣದಿಂದ ವಂಚಿತವಾಗಬಾರದು. ಕ್ಷೇತ್ರ ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದಬೇಕು. ಆ ನಿಟ್ಟಿನಲ್ಲಿ ಮೂರು ವಸತಿ ಶಾಲೆಗಳಲ್ಲಿ ಪಿಯುಸಿ ತರಗತಿ ಆರಂಭವಾಗಿವೆ. ವಸತಿ ಶಾಲೆಗಳಿಗೆ ಬೇಕಾದ ಅಗತ್ಯ ಸೌಲಭ್ಯ ಸಹ ಕಲ್ಪಿಸಲಾಗುತ್ತಿದೆ ಎಂದು ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ತಿಳಿಸಿದ್ದಾರೆ.