ಚಿರತೆ ದಾಳಿಗೆ ಮತ್ತೆ ಮೂರು ದನಕರುಗಳು ಬಲಿ

| Published : Mar 31 2024, 02:09 AM IST

ಸಾರಾಂಶ

ಎರಡು ವಾರಗಳ ಹಿಂದೆ ಕರ್ನಾಟಕ ವಿವಿ ಹಿಂಬಾಗದಲ್ಲಿ ಕಾಣಿಸಿಕೊಂಡಿದ್ದ ಫಾರ್ಮ್‌ನಲ್ಲಿ ಕಟ್ಟಿಹಾಕಿದ್ದ ಮೂರು ಜಾನುವಾರುಗಳನ್ನು ಬಲಿ ಪಡೆದಿದೆ.

ಕನ್ನಡಪ್ರಭ ವಾರ್ತೆ ಧಾರವಾಡ

ಚಾಲಾಕಿ ಚಿರತೆಯೊಂದು ಸಮೀಪದ ಮನಸೂರು ಗ್ರಾಮದ ದನಕರುಗಳು ಮೇಲೆ ಪದೇ ಪದೇ ದಾಳಿ ನಡೆಸುತ್ತಿದೆ. ಶುಕ್ರವಾರ ರಾತ್ರಿ ನಡೆಸಿದ ದಾಳಿಗೆ ಮೂರು ದನಕರುಗಳು ಬಲಿಯಾಗಿದ್ದು, ಗ್ರಾಮಸ್ಥರು ಮತ್ತಷ್ಟು ಆತಂಕಕ್ಕೆ ಒಳಗಾಗಿದ್ದಾರೆ.

ಎರಡು ವಾರಗಳ ಹಿಂದೆ ಕರ್ನಾಟಕ ವಿವಿ ಹಿಂಬಾಗದಲ್ಲಿ ಕಾಣಿಸಿಕೊಂಡಿದ್ದ ಚಿರತೆಯು ಮನಸೂರು ಗ್ರಾಮದ ರೈತರೊಬ್ಬರ ಆಕಳು ಕರುವನ್ನು ಕೊಂದು ಹಾಕಿತ್ತು. ಇದಾದ ಕೆಲವೇ ದಿನಗಳಲ್ಲಿ ಮತ್ತೀಗ ಅದೇ ಗ್ರಾಮದ ಶಾರದಾ ಚಾರಿಟೇಬಲ್‌ ಟ್ರಸ್ಟ್‌ನವರು ನಡೆಸುತ್ತಿರುವ ಫಾರ್ಮ್‌ನಲ್ಲಿ ಕಟ್ಟಿಹಾಕಿದ್ದ ಮೂರು ಜಾನುವಾರುಗಳನ್ನು ಬಲಿ ಪಡೆದಿದೆ. ಚಿರತೆ ಕಾಟದಿಂದ ಬೇಸತ್ತ ಗ್ರಾಮಸ್ಥರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಹಿಡಿ ಶಾಪ ಹಾಕುತ್ತಿದ್ದು, ಬೇಗ ಚಿರತೆ ಹಿಡಿಯಿರಿ ಇಲ್ಲದೇ ಹೋದಲ್ಲಿ ನಾವೇ ಅದನ್ನು ಹಿಡಿಯುತ್ತೇವೆ ಎಂದು ಮನಸೂರು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಮನಸೂರು ಸುತ್ತಲು ಗುಡ್ಡ ಹಾಗೂ ಕಾಡು ಪ್ರದೇಶವಿದೆ. ಕವಿವಿ ಹಿಂಭಾಗದಲ್ಲಿ ಕಾಣಿಸಿಕೊಂಡಿದ್ದ ಈ ಚಿರತೆ ಕಳೆದ ಮಾ.23 ರಂದು ಮನಸೂರಿನಲ್ಲಿ ಕಾಣಿಸಿಕೊಂಡು ಆಕಳ ಕರುವಿನ ಮೇಲೆ ದಾಳಿ ಮಾಡಿತ್ತು. ಇದಾದ ಬಳಿಕ ಅರಣ್ಯ ಇಲಾಖೆ ಸಿಬ್ಬಂದಿ ಚಿರತೆ ಸೆರೆಗಾಗಿ ಒಂದು ಬೋನು ಇಟ್ಟು ಕಾರ್ಯಾಚರಣೆ ನಡೆಸಿದ್ದರು. ಆದರೆ, ಚಿರತೆ ಮಾತ್ರ ಬೋನಿಗೆ ಬೀಳಲಿಲ್ಲ. ಇದೀಗ ಆ ಚಿರತೆ ಮತ್ತೆ ದನಕರುಗಳ ಮೇಲೆ ದಾಳಿ ನಡೆಸಿದ್ದು, ಗ್ರಾಮಸ್ಥರ ನಿದ್ದೆಗೆಸಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಚಿರತೆ ಹಿಡಿಯಲು ಸರಿಯಾದ ಕ್ರಮ ವಹಿಸಿಲ್ಲ ಎಂದು ಆರೋಪಿಸುತ್ತಿದ್ದಾರೆ.

ಸುಮಾರು ದಿನಗಳಿಂದ ಹಗಲು-ರಾತ್ರಿ ಮನೆ ಬಿಟ್ಟು ಹೊರ ಹೋಗದ ಸ್ಥಿತಿ ಉಂಟಾಗಿದೆ. ಮಕ್ಕಳು, ಮಹಿಳೆಯರು ತುಂಬ ಭಯ ಪಡುತ್ತಿದ್ದಾರೆ. ಚಿರತೆ ಹಿಡಿಯಲು ಇಷ್ಟು ವಿಳಂಬವೇಕೆ? ನಾವೆಲ್ಲ ಇಲ್ಲಿ ಆತಂಕದಲ್ಲಿದ್ದೇವೆ. ದನಕರು ಮಾತ್ರವಲ್ಲದೇ ನಮ್ಮ ಜೀವಕ್ಕೂ ಭಯ ಇದೆ ಎಂದು ಚಿರತೆ ದಾಳಿಗೆ ಕರುಗಳನ್ನು ಕಳೆದುಕೊಂಡ ಗ್ರಾಮದ ರಾಜೀವ ದೀಕ್ಷಿತ್ ಆತಂಕ ವ್ಯಕ್ತಪಡಿಸುತ್ತಾರೆ.

ಕಳೆದ ಹತ್ತು ದಿನಗಳಿಂದ ಚಿರತೆ ಹಾವಳಿ ಇದ್ದರೂ ಚಿರತೆ ಮಾತ್ರ ಇನ್ನೂ ಸೆರೆಯಾಗಿಲ್ಲ. ನಾವು ನಿರಂತರವಾಗಿ ಕಾರ್ಯಾಚರಣೆ ನಡೆಸುತ್ತಿದ್ದೇವೆ. ಈಗ ಮತ್ತೆ ಎರಡು ಬೋನು ತಂದು ಇಡುವ ಕೆಲಸ ಮಾಡುತ್ತೇವೆ. ಸಾರ್ವಜನಿಕರು ನಮಗೆ ಸಹಕಾರ ನೀಡಬೇಕು ಎಂದು ಅರಣ್ಯ ಇಲಾಖೆ ಉಪ ಅರಣ್ಯ ಸಂರಕ್ಷಣಾಧಿಕಾರಿ ವಿವೇಕ ಕವರಿ ಹೇಳುತ್ತಾರೆ.

ಸ್ಥಳಕ್ಕೆ ಜಿಪಂ ಸಿಇಒ ಭೇಟಿ

ಧಾರವಾಡ: ಮನಸೂರ ಗ್ರಾಮದಲ್ಲಿ ಹಸುಗಳ ಮೇಲೆ ಚಿರತೆ ದಾಳಿ ಮಾಡಿದ್ದರಿಂದ ಸ್ಥಳಕ್ಕೆ ಜಿಲ್ಲಾ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಸ್ವರೂಪಾ ಟಿ.ಕೆ. ಭೇಟಿ ನೀಡಿದರು. ಚಿರತೆಯನ್ನು ಸೆರೆ ಹಿಡಿಯಲು ಅರಣ್ಯ ಇಲಾಖೆ ಈಗಾಗಲೇ ಕ್ರಮ ಕೈಗೊಂಡಿದೆ. ರಾತ್ರಿ ಸಮಯದಲ್ಲಿ ಸಾರ್ವಜನಿಕರು ಯಾರು ಅನಗತ್ಯವಾಗಿ ಹೊರಗಡೆ ಓಡಾಡಬಾರದು. ರಾತ್ರಿ ಸಮಯದಲ್ಲಿ ಮನೆ ಹೊರಗಡೆ ಮಲಗದಂತೆ ಹಾಗೂ ದನಕರುಗಳನ್ನು ಹಾಗೆಯೇ ಬಿಡದೆ ಸುರಕ್ಷಿತ ಸ್ಥಳದಲ್ಲಿ ಕಟ್ಟುವಂತೆ ಜಿಪಂ ಸಿಇಒ ಸ್ವರೂಪಾ ಟಿ.ಕೆ. ತಿಳಿಸಿದರು.