ಸಾರಾಂಶ
ಕನ್ನಡಪ್ರಭ ವಾರ್ತೆ ಹಾಸನ
ನಗರದ ಮಲೆನಾಡು ತಾಂತ್ರಿಕ ಶಿಕ್ಷಣ ಸಮಿತಿ(ಎಂಟಿಇಎಸ್)ಯ ಮೂವರು ನಿರ್ದೇಶಕರು ಸಂಸ್ಥೆಯ ಕಾನೂನು ಉಲ್ಲಂಘಿಸಿರುವ ಬಗ್ಗೆ ಸದಸ್ಯರಿಂದ ದೂರುಗಳು ಬಂದ ಹಿನ್ನೆಲೆಯಲ್ಲಿ ನಿರ್ದೇಶಕರಾದ ಡಾ. ಅರವಿಂದ್, ಎಸ್.ಜಿ. ಶ್ರೀಧರ್ ಹಾಗೂ ಜಿ.ಆರ್. ಶ್ರೀನಿವಾಸ್ ಅವರನ್ನು ಅಮಾನತು ಮಾಡಲಾಗಿದೆ ಎಂದು ಸಂಘದ ಅಧ್ಯಕ್ಷರಾದ ಆರ್.ಟಿ. ದೇವೇಗೌಡರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಸಂಸ್ಥೆಯ ನಿಯಮದ ಪ್ರಕಾರ ಸಂಸ್ಥೆಯ ನಿರ್ದೇಶಕರುಗಳು ಯಾರೂ ಸಂಸ್ಥೆಗೆ ಸೇರಿದ ಕಟ್ಟಡದ ಬಾಡಿಗೆದರರು ಹಾಗೂ ಫಲಾನುಭವಿಗಳಾಗಿರಬಾದೆಂಬ ಸ್ಪಷ್ಟ ನಿಯಮವಿದೆ. ಈ ನಿಯಮ ಉಲ್ಲಂಘನೆಯಾಗುತ್ತಿದೆ ಎಂದು ಸಂಘದ ಸದಸ್ಯರು ದೂರು ನೀಡಿದ ಹಿನ್ನೆಲೆಯಲ್ಲಿ ಪರಿಶೀಲನೆ ನಡೆಸಿದ ವೇಳೆ ನಗರದ ಸಿ.ಟಿ.ಬಸ್ ನಿಲ್ದಾಣದ ಮುಂಭಾಗವಿರುವ ಸಂಸ್ಥೆಗೆ ಸೇರಿದ ವಿದ್ಯಾ ಭವನ ಕಟ್ಟಡದಲ್ಲಿ ನಿರ್ದೇಶಕರಾದ ಡಾ. ಅರವಿಂದ್ ಅವರು ಕೊಠಡಿಯನ್ನು ಬಾಡಿಗೆ ಪಡದು ಅದನ್ನು ಬೇರೆಯವರಿಗೆ ಹೆಚ್ಚಿನ ಹಣಕ್ಕೆ ಬಾಡಿಗೆ ನೀಡಿರುವುದು ಸಾಬೀತಾಗಿದೆ. ಅಂತೆಯೇ ಇದೇ ಕಟ್ಟಡದಲ್ಲಿ ಜಿ.ಆರ್. ಶ್ರೀನಿವಾಸ್ ಅವರು ಜಿರ್‌ಆರ್ ಎಂಬ ಹೋಟೆಲ್ ಉದ್ಯಮ ನಡೆಸುತ್ತಿದ್ದು, ಸಂಸ್ಥೆಗೆ ಕಟ್ಟಬೇಕಾದ ೧ ಕೋಟಿಗೂ ಹೆಚ್ಚು ಬಾಡಿಗೆಯನ್ನು ಬಾಕಿ ಉಳಿಸಿಕೊಂಡಿರುತ್ತಾರೆ. ಹಾಗೂ ಎಸ್.ಜಿ.ಶ್ರೀಧರ್ ಅವರು ಇದೇ ಕಟ್ಟಡದಲ್ಲಿ ಬಾಡಿಗೆದಾರರಾದ ಎಸ್.ವಿ.ಗುಂಡುರಾವ್ ಅಂಡ್ ಕೋ ಸಂಸ್ಥೆಯ ಪಾಲುದಾರರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಸಂಘದ ಸದಸ್ಯರ ದೂರನ್ನು ಗಂಭೀರವಾಗಿ ಪರಿಗಣಿಸಿ ಸಂಸ್ಥೆಯ ನಿಯಮಗಳು ಉಲ್ಲಂಘನೆಯಾಗಿರುವುದು ಮೇಲ್ನೋಟಕ್ಕೆ ಕಂಡು ಬಂದ ಹಿನ್ನೆಲೆಯಲ್ಲಿ ಮುಂದಿನ ಆದೇಶದ ವರೆಗೂ ಈ ಮೂವರನ್ನು ಅಮಾನತು ಮಾಡಲಾಗಿದ್ದು, ಈ ಅಮಾನತಿನ ಅವಧಿಯಲ್ಲಿ ಸೋಮವಾರ ನಡೆಯುವ ಕಾರ್ಯಕಾರಿ ಸಮಿತಿ ಸಭೆ ಸೇರಿದಂತೆ ಸಂಸ್ಥೆಯ ಯಾವುದೇ ಸಭೆ ಸಮಾರಂಭಗಳಲ್ಲಿ ಭಾಗವಹಿಸದಂತೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.