ಸಾರಾಂಶ
- ಸರ್ಕಾರಿ ಆಸ್ಪತ್ರೆಯಲ್ಲಿ ತುರ್ತು ಸಭೆ । ಕಾಯಿಲೆ ಬಗ್ಗೆ ಜನಜಾಗೃತಿ ಮೂಡಿಸಲು ಆರೋಗ್ಯ ಅಧಿಕಾರಿಗಳಿಗೆ ಸೂಚನೆ
ಕನ್ನಡಪ್ರಭ ವಾರ್ತೆ, ಕೊಪ್ಪಕಳೆದ ಡಿಸೆಂಬರ್‌ನಿಂದ ಈವರೆಗೆ ಕೊಪ್ಪದಲ್ಲಿ ಮೂವರಲ್ಲಿ ಕೆಎಫ್‌ಡಿ ಕಾಣಿಸಿಕೊಂಡಿದ್ದು ಚಿಕಿತ್ಸೆ ನಂತರ ಗುಣಮುಖ ರಾಗಿರುವುದಾಗಿ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ ಎಂದು ಶಾಸಕ ಟಿ.ಡಿ.ರಾಜೇಗೌಡ ಹೇಳಿದರು.
ಭಾನುವಾರ ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ತುರ್ತು ಕೆಎಫ್‌ಡಿ ಸಭೆ ಕರೆದು ಮಾತನಾಡಿದ ಅವರು ಕೊಪ್ಪ ಸಾರ್ವಜನಿಕ ಆಸ್ಪತ್ರೆಯಲ್ಲಿ ಕೆಎಫ್‌ಡಿ ರೋಗಲಕ್ಷಣ ಗುರುತಿಸಿ ಚಿಕಿತ್ಸೆ ನೀಡಲು ವಾರ್ಡ್ ತೆರೆಯುವಂತೆ ಆರೋಗ್ಯಾಧಿಕಾರಿಗಳಿಗೆ ಸೂಚಿಸಿದ್ದೆ. ಅದರಂತೆ ವಾರ್ಡ್ ತೆರೆಯಲಾಗಿದೆ. ರಾಜ್ಯದಲ್ಲಿ ಕೆಎಫ್‌ಡಿ ಚಿಕಿತ್ಸೆಗೆ ಕಾರವಾರ ಮೆಡಿಕಲ್ ಕಾಲೇಜು, ಶಿವಮೊಗ್ಗದ ಮೆಡಿಕಲ್ ಆಸ್ಪತ್ರೆ, ಮಣಿಪಾಲದ ಕೆಎಂಸಿ ಆಸ್ಪತ್ರೆಗಳನ್ನು ಕೆಎಫ್‌ಡಿ ಮುಖ್ಯ ಚಿಕಿತ್ಸಾ ಕೇಂದ್ರ ಎಂದು ಗುರುತಿಸಲಾಗಿದೆ ಎಂದರು.ಸತ್ತ ಮಂಗಗಳ ಕಳೇಬರದ ಮೇಲೆ ಕುಳಿತ ಉಣ್ಣೆಗಳಿಂದ ಮಂಗನಕಾಯಿಲೆ ಬರುತ್ತದೆ. ಸತ್ತ ಮಂಗನಲ್ಲಿರುವ ಈ ಉಣ್ಣೆ ಕಾಡಿನಲ್ಲಿ ಉತ್ಪನ್ನ ತರಲು, ಜಾನುವಾರುಗಳನ್ನು ಮೇಯಿಸಲು ಹೋದ ವ್ಯಕ್ತಿಗಳಿಗೆ ಕಚ್ಚಿದಲ್ಲಿ ಮಂಗನ ಕಾಯಿಲೆ ಬರುತ್ತದೆ. ಇಂತಹ ಕೆಲಸ ಕಾರ್ಯಗಳಿಗೆ ಕಾಡಿಗೆ ಹೋಗುವಾಗ ಡೇಪಾ (ಆಇPಂ) ಎಣ್ಣೆಯನ್ನು ಮೈಗೆ ಸವರಿಕೊಂಡು ಹೋಗಬೇಕು. ಕಾಡಿನಿಂದ ಬಂದ ನಂತರ ಸ್ನಾನ ಮಾಡಿ ಮತ್ತೆ ಈ ಎಣ್ಣೆ ಸವರಿಕೊಳ್ಳುವುದರಿಂದ ಉಣ್ಣೆ ಮೈ ಮೇಲೆ ಕೂರದಂತೆ ತಡೆಯಬಹುದು. ಸಮೀಪದ ಕಾಡು ಮತ್ತು ಮನೆಯ ಸಮೀಪ ಸತ್ತ ಮಂಗಗಳ ಕಳೇಬರ ಕಂಡುಬಂದಲ್ಲಿ ಕೂಡಲೇ ಆರೋಗ್ಯ ಇಲಾಖೆ ಗಮನಕ್ಕೆ ತಂದಲ್ಲಿ ಮಂಗಗಳ ಕಳೇಬರವನ್ನು ಮರಣೋತ್ತರ ಪರೀಕ್ಷೆಗೊಳಪಡಿಸಿ ಮಂಗನ ಕಾಯಿಲೆ ಇರುವ ಲಕ್ಷಣಗಳನ್ನು ಪತ್ತೆ ಹಚ್ಚಲು ಸಹಾಯಕವಾಗುತ್ತದೆ.
ಕಾಯಿಲೆ ಲಕ್ಷಣಗಳು ಕಾಣಿಸಿಕೊಂಡ ತಕ್ಷಣ ನಿರ್ಲಕ್ಷ್ಯ ವಹಿಸದೆ ಚಿಕಿತ್ಸೆ ಪಡೆದುಕೊಳ್ಳುವ ಮೂಲಕ ಪ್ರಾಣ ಉಳಿಸಿ ಕೊಳ್ಳಬಹುದಾಗಿದೆ. ರೋಗಲಕ್ಷಣದ ಬಗ್ಗೆ ಕರಪತ್ರಗಳನ್ನು ಮುದ್ರಿಸಿ ಪ್ರತೀ ಗ್ರಾಪಂ ವ್ಯಾಪ್ತಿಯಲ್ಲೂ ಹಂಚುವ ಮೂಲಕ ಕೆಎಫ್‌ಡಿ ಬಗ್ಗೆ ಜಾಗೃತಿ ಮೂಡಿಸಬೇಕು ಎಂದ ಅವರು ಪ್ರತೀ ಜಿಲ್ಲೆಗಳಲ್ಲೂ ಕೆಎಫ್‌ಡಿ ಮಾದರಿ ಪರೀಕ್ಷಾ ಕೇಂದ್ರಗಳನ್ನು ತೆರೆಯುವಂತೆ ಸರ್ಕಾರದ ಗಮನ ಸೆಳೆಯಲಾಗುವುದು ಎಂದರು.ತಾಲೂಕು ಆರೋಗ್ಯಾಧಿಕಾರಿ ಮಹೇಂದ್ರ ಕಿರಿಟಿ ಮಾತನಾಡಿ ಈವರೆಗೆ 7 ಜನರ ರಕ್ತ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿತ್ತು. ಅದರಲ್ಲಿ ಮೂವರಿಗೆ ಕೆಎಫ್‌ಡಿ ಇರುವ ಬಗ್ಗೆ ತಿಳಿದು ಚಿಕಿತ್ಸೆ ನೀಡಲಾಗಿದೆ. ಅವರು ಗುಣಮುಖ ರಾಗಿದ್ದಾರೆ. ಕೊಪ್ಪ ಆಸ್ಪತ್ರೆಯಲ್ಲಿ ಜ್ವರ ಕಾಣಿಸಿಕೊಂಡವರ ರಕ್ತ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗುತ್ತಿದೆ. ರೋಗಲಕ್ಷಣ ಗಳು ಕಂಡುಬಂದಲ್ಲಿ ಕೂಡಲೇ ಆಸ್ಪತ್ರೆಗೆ ಬಂದು ಪರೀಕ್ಷಿಸಿಕೊಳ್ಳುವಂತೆ ತಿಳಿಸಿದ ಅವರು ರೋಗಲಕ್ಷಣದ ಬಗ್ಗೆ ವಿವರಣೆ ನೀಡಿದರು.
ಆಸ್ಪತ್ರೆ ವೈದ್ಯಾಧಿಕಾರಿ ಡಾ.ಸಂದೀಪ್, ಆರೋಗ್ಯ ಶಿಕ್ಷಣಾಧಿಕಾರಿ ಸುಧಾಕರ್, ಜಿಪಂ ಮಾಜಿ ಉಪಾಧ್ಯಕ್ಷ ಅಸಗೋಡು ನಾಗೇಶ್, ನಿಲುವಾಗಿಲು ಗ್ರಾಪಂ ಅಧ್ಯಕ್ಷ ಕೆ.ಟಿ.ಮಿತ್ರ, ಪಪಂ ಸದಸ್ಯ ವಿಜಯ್ ಕುಮಾರ್ ಮತ್ತು ಆರೋಗ್ಯ ಸಿಬ್ಬಂದಿ ಸಭೆಯಲ್ಲಿದ್ದರು.