ಸಾರಾಂಶ
ನಕಲಿ ಸ್ಯಾಲರಿ ಸರ್ಟಿಫಿಕೇಟ್ ಸೇರಿದಂತೆ ಕೆಲವು ದಾಖಲಾತಿಗಳನ್ನು ಸೃಷ್ಟಿಸಿ ಬ್ಯಾಂಕಿನಿಂದ ಮೂವರು ಸಾಲ ಪಡೆದಿದ್ದು, ದಾಖಲಾತಿಗಳ ಪರಿಶೀಲನೆ ವೇಳೆ ಅವು ನಕಲಿ ಎಂದು ಗೊತ್ತಾಗಿದೆ.
ಕನ್ನಡಪ್ರಭ ವಾರ್ತೆ ಮೈಸೂರುಮೂವರು ನಕಲಿ ದಾಖಲೆಗಳನ್ನು ಸಲ್ಲಿಸಿ ಮೈಸೂರಿನ ಬೃಂದಾವನ ಬಡಾವಣೆಯ ಎಸ್ ಬಿಐ ಬ್ಯಾಂಕಿಗೆ 27.16 ಲಕ್ಷ ರೂ. ವಂಚಿಸಿದ್ದಾರೆ.
ಈ ಸಂಬಂಧ ಬ್ಯಾಂಕಿನ ವ್ಯವಸ್ಥಾಪಕಿ ಪ್ರತಿಭಾ ಅವರು ನೀಡಿದ ದೂರಿನ ಮೇರೆಗೆ ವಿವಿ ಪುರಂ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕವಾಗಿ 3 ಪ್ರಕರಣ ದಾಖಲಾಗಿದೆ. ನಕಲಿ ಸ್ಯಾಲರಿ ಸರ್ಟಿಫಿಕೇಟ್ ಸೇರಿದಂತೆ ಕೆಲವು ದಾಖಲಾತಿಗಳನ್ನು ಸೃಷ್ಟಿಸಿ ಬ್ಯಾಂಕಿನಿಂದ ಮೂವರು ಸಾಲ ಪಡೆದಿದ್ದು, ದಾಖಲಾತಿಗಳ ಪರಿಶೀಲನೆ ವೇಳೆ ಅವು ನಕಲಿ ಎಂದು ಗೊತ್ತಾಗಿದೆ. ಕೆ.ಆರ್. ನಗರ ಮೂಲದ ಮೇಘಾ ಎಂಬವರು ಮೈಸೂರು ಮಹಾನಗರ ಪಾಲಿಕೆ ಕಚೇರಿಯಲ್ಲಿ ಸಹಾಯಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಮಾಸಿಕ 34700 ಎಂದು ನಕಲಿ ವೇತನ ಪ್ರಮಾಣದೊಂದಿಗೆ ನಕಲಿ ದಾಖಲೆ ಸಲ್ಲಿಸಿ 9.16 ಲಕ್ಷ ರೂ. ಸಾಲ ಪಡೆದಿದ್ದಾರೆ. ಕ್ಯಾತಮಾರನಹಳ್ಳಿಯ ರವಿಕುಮಾರ್ ಎಂಬವರು ಖಾಸಗಿ ಕಂಪನಿಯಲ್ಲಿ ಟೀಮ್ ಲೀಡರ್ ಎಂದು 37800 ರೂ. ಮಾಸಿಕ ಸಂಬಳ ಬರುತ್ತಿರುವುದಾಗಿ ನಕಲಿ ಸ್ಯಾಲರಿ ಸರ್ಟಿಫಿಕೇಟ್, ಬ್ಯಾಂಕ್ ವಹಿವಾಟಿನ ದಾಖಲೆಗಳನ್ನು ಸಲ್ಲಿಸಿ 8 ಲಕ್ಷ ಸಾಲ ಪಡೆದಿದ್ದಾರೆ. ರಾಘವೇಂದ್ರನಗರದ ಪಿ. ದೀಪಕ್ ಎಂಬವರು ಖಾಸಗಿ ಕಂಪನಿ ಯಲ್ಲಿ ಸೇಲ್ಸ್ ಆಫೀಸರ್ ಎಂದು ಮಾಸಿಕ 22817 ರೂ. ವೇತನ ಎಂದು ಬ್ಯಾಂಕ್ ವಹಿವಾಟಿನ ನಕಲಿ ದಾಖಲೆ ಸೃಷ್ಟಿಸಿ 6 ಲಕ್ಷ ಸಾಲ ಪಡೆದು ವಂಚಿಸಿದ್ದಾರೆ.