ವೈ.ಜಿ.ಗುಡ್ಡ ಜಲಾಶಯದಲ್ಲಿ ಮುಳುಗಿ ಮೂವರ ದುರ್ಮರಣ

| Published : May 20 2025, 01:51 AM IST

ಸಾರಾಂಶ

ಮಾಗಡಿ: ತಾಲೂಕಿನ ವೈ.ಜಿ.ಗುಡ್ಡ ಜಲಾಶಯದದಲ್ಲಿ ಆಟವಾಡಲು ಹೋಗಿ ಮೂವರು ಯುವತಿಯರು ಮುಳುಗಿ ನೀರು ಪಾಲಾಗಿರುವ ಘಟನೆ ಸೋಮವಾರ ಸಂಭವಿಸಿದೆ.

ಮಾಗಡಿ: ತಾಲೂಕಿನ ವೈ.ಜಿ.ಗುಡ್ಡ ಜಲಾಶಯದದಲ್ಲಿ ಆಟವಾಡಲು ಹೋಗಿ ಮೂವರು ಯುವತಿಯರು ಮುಳುಗಿ ನೀರು ಪಾಲಾಗಿರುವ ಘಟನೆ ಸೋಮವಾರ ಸಂಭವಿಸಿದೆ.

ಬೆಂಗಳೂರಿನ ಎಲೆಕ್ಟ್ರಾನಿಕ್‌ ಸಿಟಿ ನಿವಾಸಿಗಳಾದ ರಾಘವಿ(22), ರಮ್ಯ(20) ಹಾಗೂ ಮಧು(25) ಮೃತ ಯುವತಿಯರು.

ವೈ.ಜಿ.ಗುಡ್ಡ ಕಾಲೋನಿಯ ಊರ ಹಬ್ಬಕ್ಕೆ ಸಂಬಂಧಿಕರ ಮನೆಗೆ ಬಂದಿದ್ದ ಯುವತಿಯರು. ಸೋಮವಾರ ಮಧ್ಯಾಹ್ನ ಮನೆಯಿಂದ ಏಳು ಜನ ಸ್ನೇಹಿತರು ಸಮೀಪದ ಜಲಾಶಯಕ್ಕೆ ಭೇಟಿ ನೀಡಿದ್ದರು. ನೀರಿನಲ್ಲಿ ಆಟವಾಡುತ್ತಿದ್ದ ಯುವತಿಯರ ಪೈಕಿ, ಒಬ್ಬರು ನೀರಿನ ಸೆಳೆತಕ್ಕೆ ಸಿಲುಕಿ ಮುಳುಗಿದ್ದಾರೆ. ಮುಳುಗುತ್ತಿದ್ದ ಯುವತಿಯನ್ನು ರಕ್ಷಿಸಲು ಉಳಿದಿಬ್ಬರು ಮುಂದಾಗಿದ್ದಾರೆ. ಆಗ ಅವರು ಸಹ ನೀರಿನ ಸೆಳೆತಕ್ಕೆ ಸಿಲುಕಿ ಮೃತಪಟ್ಟಿದ್ದಾರೆ. ಕಣ್ಣೆದುರಿಗೆ ಕುಟುಂಬದ ಯುವತಿಯರು ಮುಳುಗುತ್ತಿದ್ದನ್ನು ಕಂಡು ಸಂಬಂಧಿ ಸೋಮಶೇಖರ್ ನೀರಿಗೆ ಇಳಿದು ರಕ್ಷಣೆ ಮಾಡಿದ್ದು ಏಳು ಜನರ ಪೈಕಿ ಮೂವರು ಯುವತಿಯರು ಹೆಚ್ಚು ನೀರು ಕುಡಿದಿದ್ದರು. ದಡಕ್ಕೆ ತರುವಷ್ಟರಲ್ಲಿ ಸಾಕಷ್ಟು ಸಮಯವಾಗಿ ರಕ್ಷಿಸುವಲ್ಲಿ ವಿಫಲರಾದರು ಎಂದು ಪ್ರಾಣಾಪಾಯದಿಂದ ಪಾರಾದ ದಿವ್ಯ ತಿಳಿಸಿದ್ದಾರೆ.

ಮಾಗಡಿ ಸಾರ್ವಜನಿಕ ಆಸ್ಪತ್ರೆಗೆ ಮೂವರ ಮೃತದೇಹಗಳನ್ನು ರವಾನಿಸಲಾಯಿತು. ಘಟನೆ ಕುರಿತು ಮಾಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಸ್ಥಳಕ್ಕೆ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ರಾಮಚಂದ್ರಯ್ಯ ಹಾಗೂ ಇತರರು ಭೇಟಿ ನೀಡಿ ಪರಿಶೀಲಿಸಿದರು. ಗ್ರಾಮದಲ್ಲಿ ಸೂತದ ಛಾಯೆ ಆವರಿಸಿಕೊಂಡಿದ್ದು ಸಂಬಂಧಿಕರ ರೋಧನೆ ಮುಗಿಲುಮುಟ್ಟಿತ್ತು. ಮೃತ ರಮ್ಯಳಿಗೆ ಮದುವೆಯಾಗಿದ್ದು ಹೆಣ್ಣು ಮಗಳಿದ್ದಾಳೆ. ರಾಘವಿ ಮತ್ತು ಮಧು ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದರು. ಮೃತರೆಲ್ಲರು ಒಂದೇ ಕುಟುಂಬಸ್ಥರು ಎನ್ನಲಾಗಿದೆ.