1ರಿಂದ 7ನೇ ತರಗತಿ ಪಾಠಕ್ಕೆ ಮೂರೇ ಕೊಠಡಿ

| Published : May 19 2024, 01:49 AM IST

ಸಾರಾಂಶ

ಬ್ಯಾಡರಹಳ್ಳಿ ಸರ್ಕಾರಿ ಶಾಲೆಗೆ ಕಟ್ಟಡ ಕೊರತೆಯಿದ್ದು, 125 ಮಕ್ಕಳು ವ್ಯಾಸಂಗ ಮಾಡುವ ಈ ಶಾಲೆಯಲ್ಲಿ ಶಿಥಿಲಾವಸ್ಥೆ ಸ್ಥಿತಿಯಲ್ಲಿ ಮತ್ತಾರು ಕೋಣೆಗಳು ಆತಂಕ ತಂದಿವೆ.

ರಮೇಶ್ ಬಿದರಕೆರೆ

ಕನ್ನಡಪ್ರಭ ವಾರ್ತೆ ಹಿರಿಯೂರು

125 ವಿದ್ಯಾರ್ಥಿಗಳು, ಮೂರೇ ಮೂರು ಕೊಠಡಿ. ಶಿಥಿಲಗೊಂಡು ಯಾವಾಗ ಬೇಕಾದರೂ ಬೀಳುವಂತಹ ಸ್ಥಿತಿಯಲ್ಲಿರುವ 6 ಕೊಠಡಿಗಳು. ಇದು ತಾಲೂಕಿನ ಬ್ಯಾಡರಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸದ್ಯದ ದುಸ್ಥಿತಿ.

ಬ್ಯಾಡರಹಳ್ಳಿಯ ಸರ್ಕಾರಿ ಶಾಲೆಯಲ್ಲಿ 6 ಜನ ಶಿಕ್ಷಕರಿದ್ದು, ಅಡುಗೆ ಕೋಣೆ, ಕುಡಿಯುವ ನೀರಿನ ವ್ಯವಸ್ಥೆ, ಶೌಚಾಲಯ ವ್ಯವಸ್ಥೆ ಎಲ್ಲವೂ ಇದ್ದು, ಈ ಶಾಲೆಯು ಕೊಠಡಿ ಸಮಸ್ಯೆ ಎದುರಿಸುತ್ತಿದೆ. ಒಂದರಿಂದ ಏಳನೇ ತರಗತಿಯವರೆಗಿನ ಸುಮಾರು 125 ಮಕ್ಕಳು ಇರುವ ಮೂರು ಕೊಠಡಿಗಳಲ್ಲೇ ಕುಳಿತು ಪಾಠ ಕೇಳು ವಂತಹ ಪರಿಸ್ಥಿತಿ ಇದೆ. ಲೋಕೋಪಯೋಗಿ ಇಲಾಖೆಯ ಅನುಷ್ಠಾನದಲ್ಲಿ 11 ಲಕ್ಷ ರು. ವೆಚ್ಚದಲ್ಲಿ ನಿರ್ಮಾಣವಾದ ಒಂದು ಹೊಸ ಕೊಠಡಿ ಇದೆ. ಶಾಲಾ ಆವರಣ ದಲ್ಲಿರುವ 11 ಕೊಠಡಿಗಳಲ್ಲಿ 6 ಕೊಠಡಿಗಳು ನೋಡಲಿಕ್ಕೂ ಆಗದಷ್ಟು ಅದ್ವಾನವಾಗಿದ್ದು, ಮೇಲಿನ ಹೆಂಚು, ಮರದ ತೀರು ಮುರಿದು ಬೀಳುತ್ತಿವೆ. ಕೊಠಡಿಯ ಒಳಗಡೆಯೆಲ್ಲಾ ಕಸದ ರಾಶಿ ಬಿದ್ದು ಪಾಳು ಬಿದ್ದಂತಾಗಿದೆ. ಉಳಿದ 5 ಕೊಠಡಿಗಳಲ್ಲಿ ಒಂದು ಆಫೀಸ್ ರೂಮ್, ಒಂದು ಸ್ಟೋರ್ ರೂಮ್ ಇದ್ದು, 3 ರೂಮ್ ಗಳು ಮಾತ್ರ ವಿದ್ಯಾರ್ಥಿಗಳಿಗೆ ವ್ಯಾಸಂಗಕ್ಕೆ ಉಪಯುಕ್ತವಾಗಿವೆ. ಶಾಲೆಯ ಮಕ್ಕಳು ಇವೇ 6 ಹಳೆಯ ಕೊಠಡಿಗಳ ಪಕ್ಕದಿಂದ ಇವುಗಳ ಹಿಂದೆ ಇರುವ ಶೌಚಾಲಯಕ್ಕೆ ಹೋಗಬೇಕು. ಮಳೆಗಾಲ ಶುರುವಾಗಿದ್ದು, ಶಿಥಿಲಗೊಂಡ ಕೊಠಡಿಗಳ ಗೋಡೆಗಳು ನೆನೆದಿದ್ದು ಯಾವಾಗ ಬೇಕಾದರೂ ಬೀಳಬಹುದು. ಗ್ರಾಮದ ಮುಖ್ಯರಸ್ತೆಗೆ ಆತುಕೊಂಡಂತಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ತುರ್ತು ಕೊಠಡಿಗಳ ಅವಶ್ಯಕತೆ ಇದ್ದು, ಸಂಬಂಧಪಟ್ಟವರು ಆದಷ್ಟು ಬೇಗ ಶಿಥಿಲಗೊಂಡ ಕೊಠಡಿ ಗಳನ್ನು ತೆರವು ಮಾಡಿ ಹೊಸ ಕೊಠಡಿಗಳ ನಿರ್ಮಾಣ ಮಾಡಿಕೊಡುವರೇ ಎಂದು ಅಲ್ಲಿನ ಪೋಷಕರು ಕಾಯುತ್ತಿದ್ದಾರೆ.

ನಮ್ಮ ಊರಿನ ಶಾಲೆಯ ಕಟ್ಟಡಗಳು ತೀರಾ ಹಳೆಯವಾಗಿದ್ದು, ಯಾವ ಸಂದರ್ಭದಲ್ಲಿ ಬೇಕಾದರೂ ಕುಸಿಯಬಹುದು ಎಂಬಂತೆ 6 ಕೊಠಡಿಗಳಿವೆ. 125 ಮಕ್ಕಳ ಭವಿಷ್ಯ ರೂಪಿಸುವ ಶಾಲೆಗೆ ಅಗತ್ಯವಾದಷ್ಟು ಕೊಠಡಿಗಳ ಕೊರತೆ ಇರುವುದು ದುರಂತದ ಸಂಗತಿ. ಈಗಾಗಲೇ ಸಂಬಂಧಪಟ್ಟವರಿಗೆ ಈ ಬಗ್ಗೆ ಮಾಹಿತಿ ನೀಡಲಾಗಿದ್ದು, ಮಕ್ಕಳ ಹಿತದೃಷ್ಟಿಯಿಂದ ಆದಷ್ಟು ಬೇಗ ನೂತನ ಕೊಠಡಿ ನಿರ್ಮಾಣ ಮಾಡಬೇಕು.

- ಓಬಳೇಶ್, ಗ್ರಾಮಸ್ಥ

ಕೋಟ್‌: 2

ನಮ್ಮಲ್ಲಿ ಸದ್ಯಕ್ಕೆ ಶಿಕ್ಷಕರ ಕೊರತೆ ಇಲ್ಲ. ಕುಡಿಯುವ ನೀರು, ಶೌಚಾಲಯ ವ್ಯವಸ್ಥೆ ಇದೆ. ಆದರೆ ಕೊಠಡಿಗಳ ಅವಶ್ಯಕತೆ ಇದೆ. ಹಳೆಯ ಕಟ್ಟಡಗಳಲ್ಲಿ ಒಂದೆರಡನ್ನು ಹಳೆಯ ವಿದ್ಯಾರ್ಥಿಗಳ ಸಹಕಾರದಿಂದ ನವೀಕರಣ ಮಾಡುವ ಪ್ರಯತ್ನ ಮಾಡಲಾಯಿತು. ಆದರೆ ಅವು ಬಹಳಷ್ಟು ಹಳೆಯವಾಗಿವೆ. ಒಂದು ಹೊಸ ಕೊಠಡಿ ಈಗಾಗಲೇ ನಿರ್ಮಿಸಿಕೊಟ್ಟಿದ್ದು, ಅನುದಾನದ ಲಭ್ಯತೆಯ ಆಧಾರದ ಮೇಲೆ ಉಳಿದ ಕೊಠಡಿ ಮಂಜೂರು ಮಾಡಲಾಗುವುದು ಎಂದಿದ್ದಾರೆ.

- ಉಷಾ, ಮುಖ್ಯ ಶಿಕ್ಷಕಿ

ಕೋಟ್‌: 3

ಬ್ಯಾಡರಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಕೊಠಡಿ ಕೊರತೆ ಇದೆಯೆಂದು ಮಾಹಿತಿ ಇದ್ದು ಈಗಾಗಲೇ ಶಿಥಿಲಗೊಂಡ ಕಟ್ಟಡಗಳನ್ನು ತೆರವು ಮಾಡಿ ರಿಪೇರಿ ಮಾಡಬಹುದಾದವನ್ನು ನವೀಕರಿಸಲು ಪ್ರಸ್ತಾವನೆ ಸಲ್ಲಿಸಲಾಗಿದೆ.ಗ್ರಾಮ ಪಂಚಾಯ್ತಿಯ ಅನುದಾನದಲ್ಲಿ ಚಿಕ್ಕ ಪುಟ್ಟ ರಿಪೇರಿ ಮಾಡಿಕೊಳ್ಳುವ ಅವಕಾಶವಿದೆ. ಇದೀಗ ಸಂಪೂರ್ಣ ಹಾಳಾದ ಹಳೆಯ ಕಟ್ಟಡಗಳ ತೆರವಿಗೆ ಆದಷ್ಟು ಬೇಗ ಕ್ರಮ ತೆಗೆದುಕೊಳ್ಳಲಾಗುವುದು.

- ಸಿಎಂ ತಿಪ್ಪೇಸ್ವಾಮಿ, ಕ್ಷೇತ್ರ ಶಿಕ್ಷಣಾಧಿಕಾರಿ, ಹಿರಿಯೂರು.

ಚಿತ್ರ 1,2: ಬ್ಯಾಡರಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿನ ಶಿಥಿಲಗೊಂಡ ಕೊಠಡಿಗಳ ಹೊರ ಮತ್ತು ಒಳನೋಟ,

ಚಿತ್ರ 3: ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಬ್ಯಾಡರಹಳ್ಳಿ.