ಗಂಗಾವತಿ ಬಳಿ ರೈಲಿಗೆ ಸಿಲುಕಿ ಮೂವರು ವಿದ್ಯಾರ್ಥಿಗಳ ದುರ್ಮರಣ

| Published : Jul 20 2024, 12:49 AM IST

ಗಂಗಾವತಿ ಬಳಿ ರೈಲಿಗೆ ಸಿಲುಕಿ ಮೂವರು ವಿದ್ಯಾರ್ಥಿಗಳ ದುರ್ಮರಣ
Share this Article
  • FB
  • TW
  • Linkdin
  • Email

ಸಾರಾಂಶ

ಗಂಗಾವತಿ ನಗರದ ಕನಕಗಿರಿ ರಸ್ತೆಯ ರೈಲ್ವೆ ಸೇತುವೆ ಬಳಿ ರೈಲು ಹಾಯ್ದು ಮೂವರು ವಿದ್ಯಾರ್ಥಿಗಳು ಮೃತಪಟ್ಟ ಘಟನೆ ಗುರುವಾರ ತಡರಾತ್ರಿ ನಡೆದಿದೆ. ಹುಬ್ಬಳ್ಳಿಯಿಂದ ಸಿಂಧನೂರಿಗೆ ಹೋಗುವ ರೈಲ್ವೆಗೆ ಸಿಲುಕಿ ಮೂವರು ಅಸು ನೀಗಿದ್ದಾರೆ.

ಗಂಗಾವತಿ: ನಗರದ ಕನಕಗಿರಿ ರಸ್ತೆಯ ರೈಲ್ವೆ ಸೇತುವೆ ಬಳಿ ರೈಲು ಹಾಯ್ದು ಮೂವರು ವಿದ್ಯಾರ್ಥಿಗಳು ಮೃತಪಟ್ಟ ಘಟನೆ ಗುರುವಾರ ತಡರಾತ್ರಿ ನಡೆದಿದೆ.

ಮೃತಪಟ್ಟ ವಿದ್ಯಾರ್ಥಿಗಳನ್ನು ಗಂಗಾವತಿಯ ಹಿರೇಜಂತಗಲ್ ವೆಂಕಟ್ ಭೀಮರಾಯಪ್ಪ (20), ಮೌನೇಶ ಶ್ರೀನಿವಾಸ ಬಯಲು ಪತ್ತಾರ (23), ಸುನೀಲ ತಿಮ್ಮಣ್ಣ ಹಸ್ಮಕಲ್ (23) ಎಂದು ಗುರುತಿಸಲಾಗಿದೆ. ಹುಬ್ಬಳ್ಳಿಯಿಂದ ಸಿಂಧನೂರಿಗೆ ಹೋಗುವ ರೈಲ್ವೆಗೆ ಸಿಲುಕಿ ಮೂವರು ಅಸು ನೀಗಿದ್ದಾರೆ. ಅವರು ಮದ್ಯಪಾನ ಮಾಡಿದ್ದರು ಎಂದು ಹೇಳಲಾಗಿದೆ. ಗದಗ ರೈಲ್ವೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಮೂವರು ವಿದ್ಯಾರ್ಥಿಗಳು ಜತೆಗೂಡಿ ಊಟ ಮಾಡಿ ಆನಂತರ ಕನಕಗಿರಿ ರೈಲ್ವೆ ಹಳಿ ಬಳಿ ಬೈಕ್‌ ಮೇಲೆ ಬಂದಿದ್ದಾರೆ. ಅಲ್ಲಿ ಮೈಮರೆತಿದ್ದ ವೇಳೆ ಹುಬ್ಬಳ್ಳಿ-ಸಿಂಧನೂರು ರೈಲು ಆಗಮಿಸಿದೆ. ರೈಲ್ವೆ ಸೇತುವೆಯಾಗಿದ್ದರಿಂದ ಇಕ್ಕಟ್ಟಾಗಿದ್ದು, ತಪ್ಪಿಸಿಕೊಳ್ಳಲು ಸಾಧ್ಯವಾಗಿಲ್ಲ. ಹೀಗಾಗಿ ರೈಲು ಮೂವರ ಮೇಲೆ ಹಾಯ್ದುಹೋಗಿದೆ. ಮೂವರ ದೇಹಗಳು ಛಿದ್ರಛಿದ್ರವಾಗಿ ಬಿದ್ದಿವೆ.

ಮೃತಪಟ್ಟವರಲ್ಲಿ ವೆಂಕಟ್ ಭೀಮರಾಯಪ್ಪ ವಿದ್ಯಾನಗರದ ವೈಜೆಆರ್ ಕಾಲೇಜಿನ ಬಿಕಾಂ ಎರಡನೇ ವರ್ಷದ ವಿದ್ಯಾರ್ಥಿ, ಮನೆಯಲ್ಲಿ ರಾತ್ರಿ 9 ಗಂಟೆಗೆ ಗೆಳಯರ ಜತೆ ಹೋಗುವುದಾಗಿ ಹೇಳಿದ್ದ. ಈತ ಜಂಪ್‌ರೋಪ್ (ಹಗ್ಗದ ಆಟ) ಹಾಗೂ ಕರಾಟೆಯಲ್ಲಿ ಆಂಧ್ರಪ್ರದೇಶ ಹಾಗೂ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ನಡೆದ ಸ್ಪರ್ಧೆಯಲ್ಲಿ ಪಾಲ್ಗೊಂಡು ಸಾಧನೆ ಮಾಡಿದ್ದಾನೆ. ತಾಯಿ, ಇಬ್ಬರು ತಂಗಿಯರು ಇದ್ದು, ಈಗ ಮನೆಯಲ್ಲಿ ಆಕ್ರಂದನ ಮುಗಿಲುಮುಟ್ಟಿದೆ.

ಮೌನೇಶ ಶ್ರೀನಿವಾಸ ಬಯಲು ಪತ್ತಾರ ನಗರದ ಕಿಲ್ಲಾ ಏರಿಯಾದ ನಿವಾಸಿ. ಕೊಲ್ಲಿ ನಾಗೇಶ್ವರರಾವ್‌ ಪ್ರಥಮ ದರ್ಜೆ ಕಾಲೇಜಿನಲ್ಲಿ ಬಿಕಾಂ ಅಂತಿಮ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದ, ತಂದೆ, ತಾಯಿಯೊಂದಿಗೆ ವಾಸವಾಗಿದ್ದ.

ಹಿರೇಜಂತಗಲ್ ಸುನೀಲ ತಿಮ್ಮಣ್ಣ (23) ಪದವಿ ಓದುತ್ತಿದ್ದು, ಮಸ್ಕಿ ತಾಲೂಕಿನ ಹಸ್ಮಕಲ್ ಗ್ರಾಮದವರಾಗಿದ್ದು, ಈತನ ತಂದೆ ತಿಮ್ಮಣ್ಣ ನಗರದ ಎನ್.ಆರ್. ಸೈಲ್ ಮಿಲ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ. ಪುತ್ರನ ವ್ಯಾಸಂಗಕ್ಕಾಗಿ ಗಂಗಾವತಿ ನಗರದಲ್ಲಿ ಮನೆ ಮಾಡಿದ್ದರು. ಸುನೀಲ್‌ ಶವವನ್ನು ಸ್ವಗ್ರಾಮ ಹಸ್ಮಕಲ್ ಗ್ರಾಮಕ್ಕೆ ತೆಗೆದುಕೊಂಡು ಹೋಗಲಾಯಿತು.

ದೂರು ದಾಖಲು: ರೈಲಿಗೆ ಸಿಲುಕಿ ಮೂವರು ಮೃತಪಟ್ಟ ಘಟನೆಗೆ ಸಂಬಂಧಿಸಿದಂತೆ ಗದಗ ರೈಲ್ವೆ ಸ್ಟೇಷನ್‌ನಲ್ಲಿ ಎಫ್ಐಆರ್‌ ದಾಖಲಾಗಿದೆ. ಘಟನೆ ನಡೆದ ಸಂದರ್ಭದಲ್ಲಿ ರೈಲ್ವೆ ಹಳಿ ಬಳಿ ಮದ್ಯದ ಬಾಟಲಿಗಳು ಮತ್ತು ತಿಂಡಿ ತಿನಿಸುಗಳು, ನೀರಿನ ಬಾಟಲಿಗಳು ಪತ್ತೆಯಾಗಿವೆ ಎಂದು ಎಆಐಆರ್‌ನಲ್ಲಿ ದಾಖಲಾಗಿದೆ ಎಂದು ಗದಗ ಪೊಲೀಸರು ತಿಳಿಸಿದ್ದಾರೆ.

ವಿದ್ಯಾರ್ಥಿಗಳ ಸಾವು: ಕಾಲೇಜಿನಲ್ಲಿ ಶ್ರದ್ಧಾಂಜಲಿ

ನಗರದಲ್ಲಿ ರೈಲಿಗೆ ಸಿಲುಕಿ ಮೃತಪಟ್ಟ ಕೊಲ್ಲಿನಾಗೇಶ್ವರರಾವ್‌ ಸರ್ಕಾರಿ ಪ್ರಥಮ ಕಾಲೇಜಿನ ವಿದ್ಯಾರ್ಥಿ ಮೌನೇಶ ಪತ್ತಾರ ಅವರಿಗೆ ಎರಡು ನಿಮಿಷ ಕಾಲೇಜಿನಲ್ಲಿ ಮೌನಾಚರಣೆ ಮಾಡಿ ಶ್ರದ್ಧಾಂಜಲಿ ಅರ್ಪಿಸಲಾಯಿತು.ಗುರುವಾರ ತಡರಾತ್ರಿ ರೈಲುಗೆ ಸಿಲುಕಿ ಮೃತಪಟ್ಟ ಮೂವರು ವಿದ್ಯಾರ್ಥಿಗಳಲ್ಲಿ ಒಬ್ಬರಾದ ಕೊಲ್ಲಿ ನಾಗೇಶ್ವರರಾವ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಬಿಕಾಂ ಅಂತಿಮ ವರ್ಷದ ವಿದ್ಯಾರ್ಥಿ ಮೌನೇಶ ಶ್ರೀನಿವಾಸ ಬಯಲು ಪತ್ತಾರ ನಿಧನಕ್ಕೆ ಕಾಲೇಜಿನಲ್ಲಿ ಪ್ರಾಚಾರ್ಯರು, ಉಪನ್ಯಾಸಕರು, ವಿದ್ಯಾರ್ಥಿಗಳು ಎರಡು ನಿಮಿಷ ಮೌನಾಚರಣೆ ಮಾಡಿ ಶಾಂತಿ ಕೋರಿದರು.ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಚಾರ್ಯರಾದ ಡಾ. ಜಾಜಿ ದೇವೇಂದ್ರಪ್ಪ ಮಾತನಾಡಿ, ಜೀವ ಅಮೂಲ್ಯವಾಗಿದ್ದು, ಅದನ್ನು ಸುರಕ್ಷಿತವಾಗಿ, ಆರೋಗ್ಯಕರವಾಗಿ ಇಟ್ಟುಕೊಳ್ಳಬೇಕು. ಮಕ್ಕಳ ಭವಿಷ್ಯದ ಮೇಲೆ ಪಾಲಕರು ಅವಲಂಬಿತರಾಗಿರುತ್ತಾರೆ. ಕಾರಣ ವಿದ್ಯಾರ್ಥಿಗಳು ಕಾನೂನುಬಾಹಿರ ಚಟುವಟಿಕೆಗೆ ಆಸ್ಪದ ನೀಡದೆ ಶಿಕ್ಷಣದ ಕಡೆಗೆ ಗಮನಹರಿಸಬೇಕು ಎಂದರು.

ಮೂವರು ವಿದ್ಯಾರ್ಥಿಗಳಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.