ಗಾಂಜಾ ಮಾರುತ್ತಿದ್ದ ಮೂವರು ವಿದ್ಯಾರ್ಥಿಗಳು ಪೊಲೀಸರ ಬಲೆಗೆ

| Published : Mar 23 2024, 01:03 AM IST

ಗಾಂಜಾ ಮಾರುತ್ತಿದ್ದ ಮೂವರು ವಿದ್ಯಾರ್ಥಿಗಳು ಪೊಲೀಸರ ಬಲೆಗೆ
Share this Article
  • FB
  • TW
  • Linkdin
  • Email

ಸಾರಾಂಶ

ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು ನಗರದ ಸಂಗಮ್ ವೃತ್ತದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಮೂವರು ಕಾಲೇಜ್ ವಿದ್ಯಾರ್ಥಿಗಳನ್ನು ಬಂಧಿಸಿ ಅವರಿಂದ ರು. 11,800 ಮೌಲ್ಯದ 118 ಗ್ರಾಂ ಗಾಂಜಾ ವಶಪಡಿಸಿಕೊಂಡಿದ್ದಾರೆ.

ರಾಣಿಬೆನ್ನೂರು: ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು ನಗರದ ಸಂಗಮ್ ವೃತ್ತದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಮೂವರು ಕಾಲೇಜ್ ವಿದ್ಯಾರ್ಥಿಗಳನ್ನು ಬಂಧಿಸಿ ಅವರಿಂದ ರು. 11,800 ಮೌಲ್ಯದ 118 ಗ್ರಾಂ ಗಾಂಜಾ ವಶಪಡಿಸಿಕೊಂಡಿದ್ದಾರೆ.

ನಗರದ ದೊಡ್ಡಪೇಟೆ ನಿವಾಸಿ ಸಂತೋಷ ಶಂಕ್ರಯ್ಯ ನೂರಂದೇವರಮಠ (21), ತಳವಾರ ಓಣಿಯ ಕಾರ್ತಿಕ ಕೃಷ್ಣಮೂರ್ತಿ ಹುಟ್ಟಿ (19) ಹಾಗೂ ಭುವನೇಶ್ವರ ಶ್ರೀನಿವಾಸ ಹುಟ್ಟಿ (19) ಬಂಧಿತ ವಿದ್ಯಾರ್ಥಿಗಳು.

ಇವರಿಂದ ರು. 11,800 ಮೌಲ್ಯದ 118 ಗ್ರಾಂ ಗಾಂಜಾ, ರು. 500 ಮೌಲ್ಯದ ತೂಕದ ಯಂತ್ರ, 16 ಸಣ್ಣ ಖಾಲಿ ಪೌಚ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.

ನಗರದ ಕಾಲೇಜೊಂದರಲ್ಲಿ ಅಧ್ಯಯನ ಮಾಡುತ್ತಿರುವ ಮೂವರು ವಿದ್ಯಾರ್ಥಿಗಳು ಸಂಗಮ್ ವೃತ್ತದ ಬಳಿ ಗಾಂಜಾ ಮಾರಾಟ ಮಾಡುತ್ತಿದ್ದರು. ದಾಳಿಯಲ್ಲಿ ಹಾವೇರಿ ಸಿಇಎನ್ ಕ್ರೈಂ ಠಾಣೆ ಪಿಎಸ್‌ಐ ಎಂ.ಎಫ್. ದುರಗಪ್ಪನವರ ಹಾಗೂ ತಂಡದವರು ಪಾಲ್ಗೊಂಡಿದ್ದರು. ಈ ಕುರಿತು ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಕಲಿ ಅಂಕಪಟ್ಟಿ ನೀಡಿ ಸರ್ಕಾರಿ ನೌಕರಿ, ದೂರು: ನಕಲಿ ಅಂಕಪಟ್ಟಿ ಹಾಗೂ ಪದವಿ ಪ್ರಮಾಣ ಪತ್ರ ನೀಡಿ ಸಹಕಾರ ಸಂಘಗಳ ಲೆಕ್ಕ ಪರಿಶೋಧನಾ ಇಲಾಖೆಯಲ್ಲಿ ಪ್ರಥಮ ದರ್ಜೆ ಸಹಾಯಕ ಹುದ್ದೆ ಗಿಟ್ಟಿಸಿಕೊಂಡ ನೌಕರನ ಮೇಲೆ ಹಾವೇರಿ ಸ್ಥಳೀಯ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಾಣಿಬೆನ್ನೂರ ನಗರದ ಸಹಕಾರ ಸಂಘಗಳ ಲೆಕ್ಕ ಪರಿಶೋಧನಾ ಸಹಾಯಕ ನಿರ್ದೇಶಕರ ಕಚೇರಿಯ ಪ್ರಥಮ ದರ್ಜೆ ಸಹಾಯಕ ಮಹೇಶ ಉಳುವಪ್ಪ ಸೋಮಣ್ಣನವರ (೪೫) ಎಂಬುವರ ವಿರುದ್ಧ ದೂರು ದಾಖಲಾಗಿದೆ.ಈ ಕುರಿತು ಇಲಾಖೆಯ ಉಪನಿರ್ದೇಶಕರಾದ ವಿದ್ಯಾ ಹೊನಶೆಟ್ಟಿ ಪೊಲೀಸರಿಗೆ ದೂರು ನೀಡಿದ್ದಾರೆ. ಆರೋಪಿಯು ಇಲಾಖೆಯಲ್ಲಿ ಪ್ರಥಮ ದರ್ಜೆ ಸಹಾಯಕ ಹುದ್ದೆ ಗಿಟ್ಟಿಸಿಕೊಳ್ಳಲು ಉತ್ತರ ಪ್ರದೇಶದ ಮೀರತ್‌ನ ಚೌಧರಿ ಚರಣಸಿಂಗ್ ವಿಶ್ವ ವಿದ್ಯಾಲಯದದಿಂದ ಬಿ.ಕಾಂ. ಪದವಿ ಪಡೆದಿರುವ ಕುರಿತು ನಕಲಿ ಅಂಕಪಟ್ಟಿ ಹಾಗೂ ಪದವಿ ಪ್ರಮಾಣ ಪತ್ರ ಸೃಷ್ಟಿಸಿಕೊಂಡು ಸರ್ಕಾರಕ್ಕೆ ನೀಡಿ ಮೋಸ ಮಾಡಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ನೀತಿ ಸಂಹಿತೆ ಉಲ್ಲಂಘನೆ, ದೂರು ದಾಖಲು: ಪರವಾನಗಿ ಪಡೆಯದೆ ಬೈಕ್ ರ‍್ಯಾಲಿ ಮಾಡಿ ಪಕ್ಷದ ಬಾವುಟ ಹಾಗೂ ಶಾಲು ಬಳಕೆ ಮಾಡಿದ ಆರೋಪದಡಿ ಹಾವೇರಿ-ಗದಗ ಲೋಕಸಭೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ ವಿರುದ್ಧ ಹಾವೇರಿ ಶಹರ ಠಾಣೆಯಲ್ಲಿ ದೂರು ದಾಖಲಾಗಿದೆ.

ಚುನಾವಣಾಧಿಕಾರಿ ವಸೀಂಅಕ್ರಂ ಮಿರ್ಚಿ ದೂರು ನೀಡಿದ್ದು, ಆರೋಪಿಯು ಚುನಾವಣಾ ಆಯೋಗದಿಂದ ಪರವಾನಗಿ ಪಡೆದುಕೊಳ್ಳದೆ ಕೆಇಬಿಯಿಂದ ಸಿದ್ದರಾಮೇಶ್ವರ ಕಲ್ಯಾಣ ಮಂಟಪದವರೆಗೆ ಬೈಕ್ ರ‍್ಯಾಲಿ ಮಾಡಿದ್ದಾರೆ. ಅದರಲ್ಲಿ ಪಾಲ್ಗೊಂಡ ಪಕ್ಷದ ಮುಖಂಡರು, ಕಾರ್ಯಕರ್ತರಿಗೆ ಬಾವುಟ, ಕೊರಳಿಗೆ ಶಾಲು ನೀಡಿದ್ದಾರೆ.ಈ ಹಿನ್ನೆಲೆಯಲ್ಲಿ ಅವರಿಂದ ೨ ಸಾವಿರ ರು. ಮೌಲ್ಯದ ೮೦ ಕಾಂಗ್ರೆಸ್ ಪಕ್ಷದ ಬಾವುಟ, ೬೦ ಕೊರಳಿಗೆ ಹಾಕುವ ಶಾಲು ವಶಪಡಿಸಿಕೊಳ್ಳಲಾಗಿದೆ ಎಂದು ದೂರಿನಲ್ಲಿ ವಿವರಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.