ಸಾರಾಂಶ
ಸಾರ್ವಜನಿಕ ರಸ್ತೆಯಲ್ಲಿ ಯಕ್ಷಗಾನ, ಭಜನೆ, ಉತ್ಸವಗಳನ್ನುಅಧಿಕೃತ ಪರವಾನಗಿ ಪಡೆದೇ ನಡೆಸಲಾಗುತ್ತಿದೆ. ಹಾಗಿರುವಾಗ ಯಾವುದೇ ಅನುಮತಿ ಪಡೆಯದೆ ರಸ್ತೆಯಲ್ಲೇ ನಮಾಜ್ ಮಾಡಿ ಸಾರ್ವಜನಿಕರಿಗೆ ತೊಂದರೆ ಮಾಡುವುದು ಎಷ್ಟು ಸರಿ? ಎಂದು ಶಾಸಕ ಡಾ. ಭರತ್ ಆಕ್ರೋಶ ವ್ಯಕ್ತಪಡಿಸಿದರು.
ಕನ್ನಡಪ್ರಭ ವಾರ್ತೆ ಮಂಗಳೂರು
ನಗರದ ಕಂಕನಾಡಿ ರಸ್ತೆಯಲ್ಲಿ ಅಧಿಕೃತ ಅನುಮತಿ ಪಡೆಯದೆ ನಮಾಜ್ ಮಾಡಿದ ವಿಚಾರದಲ್ಲಿ ದಾಖಲಾದ ಕೇಸಿಗೆ ‘ಬಿ’ ರಿಪೋರ್ಟ್ ಹಾಕುವ ಮೂಲಕ ರಾಜ್ಯ ಸರ್ಕಾರದ ತುಷ್ಟೀಕರಣ ನೀತಿ ಮತ್ತೆ ಬಹಿರಂಗವಾಗಿದೆ ಎಂದು ಮಂಗಳೂರು ಉತ್ತರ ಶಾಸಕ ಡಾ. ಭರತ್ ಶೆಟ್ಟಿ ಹೇಳಿದರು.ಮಂಗಳೂರಿನ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾರ್ವಜನಿಕ ರಸ್ತೆಯಲ್ಲಿ ಯಕ್ಷಗಾನ, ಭಜನೆ, ಉತ್ಸವಗಳನ್ನುಅಧಿಕೃತ ಪರವಾನಗಿ ಪಡೆದೇ ನಡೆಸಲಾಗುತ್ತಿದೆ. ಹಾಗಿರುವಾಗ ಯಾವುದೇ ಅನುಮತಿ ಪಡೆಯದೆ ರಸ್ತೆಯಲ್ಲೇ ನಮಾಜ್ ಮಾಡಿ ಸಾರ್ವಜನಿಕರಿಗೆ ತೊಂದರೆ ಮಾಡುವುದು ಎಷ್ಟು ಸರಿ? ಎಂದು ಶಾಸಕ ಡಾ. ಭರತ್ ಆಕ್ರೋಶ ವ್ಯಕ್ತಪಡಿಸಿದರು.ರಸ್ತೆಯಲ್ಲಿ ನಮಾಜ್ ಮಾಡಿದ್ದನ್ನು ಪ್ರಶ್ನಿಸಿದ ವಿಶ್ವಹಿಂದು ಪರಿಷತ್ ಮುಖಂಡ ಶರಣ್ ಪಂಪ್‌ವೆಲ್ ಮೇಲೆ ಪೊಲೀಸರು ಕೇಸು ಹಾಕುತ್ತಾರೆ, ಶಾಸಕರ ಮೇಲೂ ಕೇಸು ಹಾಕಿದ್ದಾರೆ. ಹೀಗಾದರೆ ನಾವು ಬಾಯಿಮುಚ್ಚಿ ಕುಳಿತುಕೊಳ್ಳಬೇಕೇ? ಕಾಂಗ್ರೆಸಿಗರು ಸಮಾಜದಲ್ಲಿ ವಿಷ ಬೀಜ ಬಿತ್ತುತ್ತಿದ್ದಾರೆ ಎಂದು ಅವರು ಆರೋಪಿಸಿದರು.
ಬಂಡಾಯ ಪರಿಸ್ಥಿತಿ:ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಎರಡು ಬಜೆಟ್ ಮಂಡನೆಯಾಗಿದೆ. ಶಾಸಕರಿಗೆ ಒಂದೇ ಒಂದು ಪೈಸೆ ಬಿಡುಗಡೆಯಾಗಿಲ್ಲ. ಇದರಿಂದ ಬೇಸತ್ತು ಕಾಂಗ್ರೆಸ್ ಶಾಸಕರೇ ಬಂಡಾಯ ಏಳುವ ಪರಿಸ್ಥಿತಿಯಲ್ಲಿದ್ದಾರೆ ಎಂದರು.ದ.ಕ. ಜಿಲ್ಲಾ ಬಿಜೆಪಿ ಉಪಾಧ್ಯಕ್ಷೆ ಪೂಜಾ ಪೈ, ವಿಧಾನ ಪರಿಷತ್ ಚುನಾವಣಾ ಪ್ರಭಾರಿ ವಿಕಾಸ್ ಪುತ್ತೂರು, ಮಂಗಳೂರು ದಕ್ಷಿಣ ಮಂಡಲ ಅಧ್ಯಕ್ಷ ರಮೇಶ್ ಕಂಡೆಟ್ಟು, ಮಾಧ್ಯಮ ಸಂಚಾಲಕ ಮನೋಹರ ಶೆಟ್ಟಿ, ಮಹಿಳಾ ಮೋರ್ಚಾ ಅಧ್ಯಕ್ಷೆ ಮಂಜುಳಾ ರಾವ್, ಗುರುಚರಣ್ ಇದ್ದರು.