ನಿವೃತ್ತ ಸಾರಿಗೆ ಅಧಿಕಾರಿ, ದೇವಸ್ಥಾನ ದೇವಸ್ಥಾನ ಸಮಿತಿ ಅಧ್ಯಕ್ಷ ತಿಮ್ಮರಾಯಪ್ಪ ಮಾತನಾಡಿ, ಹೊಸಹಳ್ಳಿ ಗ್ರಾಮದಲ್ಲಿ ಭವ್ಯ ದೇಗುಲಗಳು ನಿರ್ಮಾಣ ಮಾಡಬೇಕೆಂಬ ನಮ್ಮೆಲ್ಲರ ಸಂಕಲ್ಪ ನಿಮ್ಮೆಲ್ಲರ ಸಹಕಾರದೊಂದಿಗೆ ಸಾಕಾರಗೊಂಡಿದ್ದು, ನನ್ನ ಜೀವನದಲ್ಲಿ ಎಂದೂ ಮರೆಯಲು ಸಾಧ್ಯವಿಲ್ಲ. ಜನರ ನಂಬಿಕೆ, ವಿಶ್ವಾಸಕ್ಕೆ ಚ್ಯುತಿ ಬಾರದಂತೆ ಕೊಟ್ಟ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಿರುವ ತೃಪ್ತಿ ನನಗೆ ಇದೆ ಎಂದರು.
ಕನ್ನಡಪ್ರಭ ವಾರ್ತೆ ಶಿರಾ
ಮನುಷ್ಯನ ದುರ್ನಡತೆ, ದುರ್ಗುಣಗಳಿಗೆ ವಿಜ್ಞಾನದಿಂದ ಪರಿಹಾರಕ್ಕೆ ಸಾಧ್ಯವಾಗಿಲ್ಲ. ಆಧ್ಯಾತ್ಮಿಕತೆ ಮತ್ತು ಧರ್ಮದ ಮೂಲದಿಂದ ನಿವಾರಿಸಲು ಸಾಧ್ಯವಾಗಿದೆ. ಹೊಸಹಳ್ಳಿಯಂತಹ ಪುಟ್ಟ ಗ್ರಾಮದಲ್ಲಿ ಎಲ್ಲಾ ಮನಸ್ಸುಗಳು ಒಗ್ಗೂಡಿ ಇತಿಹಾಸ ಪ್ರಸಿದ್ಧ ಬೇಲೂರು- ಹಳೇಬೀಡು ಶಿಲಾ ವಿನ್ಯಾಸ ಮಾದರಿ ದೇಗುಲಗಳನ್ನು ನಿರ್ಮಾಣ ಮಾಡಿರುವುದು ಇಲ್ಲಿನ ಜನರ ಇಚ್ಛಾಶಕ್ತಿ ಹಾಗೂ ದೇವರ ಮೇಲಿನ ಭಕ್ತಿಗೆ ಸಾಕ್ಷಿಯಾಗಿದೆ ಎಂದು ಎಲೆರಾಂಪುರ ಕುಂಚಿಟಿಗ ಮಹಾ ಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಶ್ರೀ ಹನುಮಂತನಾಥ ಸ್ವಾಮೀಜಿ ಹೇಳಿದರು.ಅವರು ಶನಿವಾರ ತಾಲೂಕಿನ ಹುಲಿಕುಂಟೆ ಹೋಬಳಿಯ ಹೊಸಹಳ್ಳಿ ಗ್ರಾಮದಲ್ಲಿ ನೂತನವಾಗಿ ನಿರ್ಮಾಣವಾಗಿರುವ ಶ್ರೀ ವಿದ್ಯಾಗಣಪತಿ, ಶ್ರೀ ಆಂಜನೇಯ ಸ್ವಾಮಿ, ಶ್ರೀ ಭೈರಲಿಂಗೇಶ್ವರ ಸ್ವಾಮಿ ದೇವಸ್ಥಾನದಲ್ಲಿ ನಡೆದ ಮಂಡಲ ಪೂಜಾ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ ಮಾತನಾಡಿದರು. ಎಲ್ಲರೂ ಒಗ್ಗಟ್ಟಿನಿಂದ ದೇವಸ್ಥಾನಗಳನ್ನು ನಿರ್ಮಾಣ ಮಾಡಿದ್ದೀರಿ, ಅದೇ ರೀತಿ ತಂದೆ- ತಾಯಿ ಸೇವೆ ಮಾಡಿದರೆ, ಎಲ್ಲಾ ದೇವರುಗಳ ಸೇವೆ ಮಾಡಿದಷ್ಟೇ ಪುಣ್ಯ ಲಭಿಸಲಿದೆ. ಕಷ್ಟದಲ್ಲಿರುವವರಿಗೆ ಸಹಾಯ ಮಾಡುವಂತಹ ಮನೋಭಾವವನ್ನು ಎಲ್ಲರೂ ರೂಢಿಸಿಕೊಳ್ಳಬೇಕು. ನಮ್ಮ ಧಾರ್ಮಿಕ ಸಂಸ್ಕೃತಿ ಶ್ರೀಮಂತವಾಗಿದ್ದು, ನಾವು ನಡೆದುಕೊಳ್ಳುವ ರೀತಿ ಮೇಲೆ ಭಗವಂತ ಒಲಿಯಲಿದ್ದಾನೆ. ರಾಜ್ಯದಲ್ಲಿ ಅನ್ನದಾತ ಸಂಕಷ್ಟದಲ್ಲಿದ್ದು ಈ ಮೂರು ದೇವರುಗಳ ಕೃಪಾಕಟಾಕ್ಷದಿಂದ ಉತ್ತಮ ಮಳೆ- ಬೆಳೆಯಾಗಿ ನಾಡು ಸಂತೃಪ್ತಿ ಕಾಣಲಿ ಎಂದರು.
ವಿಧಾನಪರಿಷತ್ ಸದಸ್ಯ ಚಿದಾನಂದ ಎಂ. ಗೌಡ ಮಾತನಾಡಿ, ಹೊಸಹಳ್ಳಿ ಗ್ರಾಮದಲ್ಲಿ ದೇವಸ್ಥಾನ ನಿರ್ಮಾಣ ಮಾಡಬೇಕೆಂಬ ನಮ್ಮ ಸಂಕಲ್ಪಕ್ಕೆ ಬಲ ನೀಡಿ ಆರ್ಥಿಕ ಶಕ್ತಿ ಕೊಟ್ಟು, ದೇವಸ್ಥಾನಗಳನ್ನು ನಿರ್ಮಾಣ ಮಾಡಲು ಸಹಕರಿಸಿ, ೪೭ ದಿನಗಳ ಕಾಲ ವಿಶೇಷ ಪೂಜಾ ಕಾರ್ಯಗಳನ್ನು ನೆರವೇರಿಸಿದ ಎಲ್ಲರಿಗೂ ಹೃದಯ ತುಂಬಿದ ಕೃತಜ್ಞತೆಗಳು. ಒಗ್ಗಟ್ಟು, ಸ್ನೇಹ, ಪ್ರೀತಿ, ವಿಶ್ವಾಸದಿಂದ ಹಳ್ಳಿಗಳಲ್ಲಿ ಜೀವನ ಕಟ್ಟಿಕೊಂಡಾಗ ಬದುಕು ಸಾರ್ಥಕತೆ ಕಾಣುತ್ತದೆ ಎಂದರು.ನಿವೃತ್ತ ಸಾರಿಗೆ ಅಧಿಕಾರಿ, ದೇವಸ್ಥಾನ ದೇವಸ್ಥಾನ ಸಮಿತಿ ಅಧ್ಯಕ್ಷ ತಿಮ್ಮರಾಯಪ್ಪ ಮಾತನಾಡಿ, ಹೊಸಹಳ್ಳಿ ಗ್ರಾಮದಲ್ಲಿ ಭವ್ಯ ದೇಗುಲಗಳು ನಿರ್ಮಾಣ ಮಾಡಬೇಕೆಂಬ ನಮ್ಮೆಲ್ಲರ ಸಂಕಲ್ಪ ನಿಮ್ಮೆಲ್ಲರ ಸಹಕಾರದೊಂದಿಗೆ ಸಾಕಾರಗೊಂಡಿದ್ದು, ನನ್ನ ಜೀವನದಲ್ಲಿ ಎಂದೂ ಮರೆಯಲು ಸಾಧ್ಯವಿಲ್ಲ. ಜನರ ನಂಬಿಕೆ, ವಿಶ್ವಾಸಕ್ಕೆ ಚ್ಯುತಿ ಬಾರದಂತೆ ಕೊಟ್ಟ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಿರುವ ತೃಪ್ತಿ ನನಗೆ ಇದೆ ಎಂದರು.
ನಿವೃತ್ತ ಸಾರಿಗೆ ಅಧಿಕಾರಿ ತಿಮ್ಮರಾಯಪ್ಪ, ಹೊಸಹಳ್ಳಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ರಾಮಚಂದ್ರಪ್ಪ, ಮುಖಂಡರಾದ ಲಕ್ಷ್ಮಣ್, ಕಾಂತರಾಜು, ನಾಗರಾಜು, ಹನುಮಂತರಾಯಪ್ಪ, ಸಣ್ಣನಿಂಗಪ್ಪ, ಸಿದ್ದಲಿಂಗಪ್ಪ, ಜಯಣ್ಣ, ರಾಮಕೃಷ್ಣಪ್ಪ, ಶ್ರೀ ಅಂಬಾದೇವಿ ದೇವಸ್ಥಾನ ಪ್ರಧಾನ ಅರ್ಚಕ ಶಶಿಧರ, ಚಂದ್ರಶೇಖರ್, ಕೆ.ಜಯಣ್ಣ, ಎಚ್. ಡಿ .ರಂಗನಾಥ್, ಮಲ್ಲಿಕಾರ್ಜುನ,ಎಚ್.ಎಸ್. ಚಂದ್ರಶೇಖರ್, ವೈ.ತಿಪ್ಪೇಸ್ವಾಮಿ, ಪ್ರಜಾವಾಣಿ ದೇವರಾಜು, ಸಣ್ಣ ಜೋಗಣ್ಣ, ಪುಟ್ಟ ಲಿಂಗಪ್ಪ, ನಿಂಗಣ್ಣ, ಪುಷ್ಪ ಚಿದಾನಂದ ಎಂ ಗೌಡ, ಪುಷ್ವ ತಿಮ್ಮರಾಯಪ್ಪ ಸೇರಿ ದೇವಸ್ಥಾನದ ಅಣ್ಣ ತಮ್ಮಂದಿರು, ನೆಂಟರು, ಗ್ರಾಮಸ್ಥರು, ಕೈವಾಡಸ್ತರು ಹಾಜರಿದ್ದರು.