ಸಾರಾಂಶ
ಕೊಪ್ಪಳ: ಪಕ್ಷದಲ್ಲಿ ಇದ್ದುಕೊಂಡೇ ಪಕ್ಷ ವಿರೋಧಿ ಚಟುವಟಿಕೆ ಮಾಡುವವರನ್ನು ಕುತ್ತಿಗೆ ಹಿಡಿದು ಆಚೆ ಹಾಕಬೇಕು ಎಂದು ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಹೇಳಿರುವುದು ಕಾಂಗ್ರೆಸ್ ಪಾಳೆಯದಲ್ಲಿ ನಾನಾ ಚರ್ಚೆ ಹುಟ್ಟು ಹಾಕಿದೆ.ನಗರದ ಕಾಂಗ್ರೆಸ್ ಕಾರ್ಯಾಲಯದಲ್ಲಿ ವೀಕ್ಷಕರ ಆಂತರಿಕ ಸಭೆಯಲ್ಲಿ ಮಾತನಾಡಿರುವ ಅನ್ಸಾರಿ ಅವರ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.ಪಕ್ಷದಲ್ಲಿಯೇ ಇರುತ್ತಾರೆ. ಆದರೆ, ಪಕ್ಷದ ವಿರೋಧಿ ಕೆಲಸ ಮಾಡುತ್ತಿರುತ್ತಾರೆ. ಪಕ್ಷದಲ್ಲಿಯೇ ಇದ್ದುಕೊಂಡು ಒಡೆಯುವ ಕೆಲಸ ಮಾಡುತ್ತಿರುತ್ತಾರೆ. ಇಂಥವರನ್ನು ಮುಲಾಜಿಲ್ಲದೆ ಕಿತ್ತು ಹಾಕಬೇಕು. ಇಂಥವರಿಂದಲೇ ಪಕ್ಷ ಸೋಲಾಗಲು ಕಾರಣವಾಗುತ್ತದೆ ಎಂದರು.ಸ್ವಪಕ್ಷೀಯರೇ ಬೇರೆ ಪಕ್ಷದವರೊಂದಿಗೆ ಕೈಜೋಡಿಸಿ, ಡೀಲ್ ಮಾಡುತ್ತಾರೆ. ಇದಕ್ಕೆ ಅವಕಾಶ ನೀಡಿದ್ದರಿಂದಲೇ ಸೋಲಾಗುತ್ತದೆ. ಹೀಗಾಗಿ ಪಕ್ಷ ಕಟ್ಟಲು ಇಂಥವರನ್ನು ಮೊದಲು ಆಚೆ ಹಾಕಬೇಕು. ಅವರು ಎಷ್ಟೇ ದೊಡ್ಡವರು ಇರಲಿ, ಮುಲಾಜಿಲ್ಲದೇ ಕ್ರಮ ವಹಿಸಬೇಕು ಎಂದು ಆಗ್ರಹಿಸಿದ್ದಾರೆ.ನನಗೂ ಸಾಕಷ್ಟು ಅನುಭವ ಇದೆ. ನಾನು 1989ರಿಂದ ರಾಜಕಾರಣದಲ್ಲಿ ಇದ್ದೇನೆ. ಯಾರ‍್ಯಾರು ಏನೇನು ಎನ್ನುವುದು ಗೊತ್ತಿದೆ ಮತ್ತು ಏನೇನು ಮಾಡುತ್ತಿದ್ದಾರೆ ಎನ್ನುವುದೂ ಗೊತ್ತಾಗುತ್ತದೆ ಎಂದು ಮಾರ್ಮಿಕವಾಗಿ ನುಡಿದರು. ಇದರಿಂದ ನನಗೆ ನೋವು ಸಹ ಆಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ತಮಗೆ ಆಗಿರುವ ಅನ್ಯಾಯವನ್ನು ಪರೋಕ್ಷವಾಗಿ ಹೇಳಿಕೊಂಡಂತೆ ಇತ್ತು. ಕಳೆದ ಚುನಾವಣೆಯಲ್ಲಿ ಕೆಲವರು ಇಕ್ಬಾಲ್ ಅನ್ಸಾರಿ ವಿರುದ್ಧ ಸಿಡಿದು, ಬೇರೊಂದು ಪಕ್ಷದವರೊಂದಿಗೆ ಕೈಜೋಡಿಸಿರುವ ಕುರಿತು ಯಾರ ಹೆಸರನ್ನು ಹೇಳದೆ ತಮ್ಮ ನೋವು ತೋಡಿಕೊಂಡಿದ್ದಾರೆ ಎಂದೇ ಹೇಳಲಾಗುತ್ತದೆ.