ಸಾರಾಂಶ
ಕಾರವಾರದಲ್ಲಿ ಬಿರುಗಾಳಿ ಜೋರಾಗಿ ಬೀಸಿತಾದರೂ ಕೇವಲ ಒಂದು ನಿಮಿಷ ಮಾತ್ರ ಭರ್ರೆಂದು ಮಳೆ ಬಂದು ಮಾಯವಾಯಿತು.
ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಮಂಗಳವಾರ ಮಳೆಯಾಗಿದೆ. ಕೆಲವೆಡೆ ಗುಡುಗು, ಮಿಂಚಿನೊಂದಿಗೆ ಭಾರಿ ಮಳೆಯಾದರೆ ಕೆಲವೆಡೆ ಸಾಧಾರಣ ಮಳೆಯಾಗಿದೆ. ಇದರಿಂದ ಬಿಸಿಲ ಬೇಗುದಿಯಲ್ಲಿದ್ದ ಜನತೆಗೆ ತಂಪೆರೆದಂತಾಗಿದೆ.
ಜೋಯಿಡಾ, ಮುಂಡಗೋಡ, ಯಲ್ಲಾಪುರ, ದಾಂಡೇಲಿಗಳಲ್ಲಿ ಗುಡುಗು, ಮಿಂಚಿನ ಅಬ್ಬರದೊಂದಿಗೆ ಭಾರಿ ಮಳೆಯಾಗಿದೆ. ಶಿರಸಿಯಲ್ಲೂ ಭಾರಿ ಮಳೆಯಾಗಿದೆ. ಕೆಲವೆಡೆ ಅರ್ಧ ಗಂಟೆಗೂ ಹೆಚ್ಚು ಕಾಲ ಜೋರಾದ ಮಳೆ ಸುರಿದಿದೆ.ಕಾರವಾರದಲ್ಲಿ ಬಿರುಗಾಳಿ ಜೋರಾಗಿ ಬೀಸಿತಾದರೂ ಕೇವಲ ಒಂದು ನಿಮಿಷ ಮಾತ್ರ ಭರ್ರೆಂದು ಮಳೆ ಬಂದು ಮಾಯವಾಯಿತು. ಅಂಕೋಲಾ, ಕುಮಟಾ, ಹೊನ್ನಾವರ, ಭಟ್ಕಳದ ವಿವಿಧೆಡೆ ಸಾಧಾರಣ ಮಳೆಯಾಗಿದೆ.
20 ದಿನಗಳಿಗೂ ಹೆಚ್ಚು ಕಾಲ ಜಿಲ್ಲೆಯಾದ್ಯಂತ ಬಿಸಿಲಿನ ಝಳ,ಸೆಕೆಯಿಂದ ಜನತೆ ಬಸವಳಿದಿದ್ದರು. ಮಂಗಳವಾರ ಮಧ್ಯಾಹ್ನವಾಗುತ್ತಿದ್ದಂತೆ ಏಕಾಏಕಿ ಮೋಡ ಮುಸುಕಿದ ವಾತಾವರಣ ಉಂಟಾಗಿ ಬಿರುಗಾಳಿ, ಗುಡುಗು, ಮಿಂಚಿನೊಂದಿಗೆ ಮಳೆ ಸುರಿಯ ತೊಡಗಿತು. ಪಟ್ಟಣಗಳಲ್ಲಿದ್ದ ಜನತೆ ಅಂಗಡಿ, ಮಳಿಗೆಗಳಲ್ಲಿ ಆಶ್ರಯ ಪಡೆದರು.ಮಳೆ ಬರುತ್ತಿದ್ದಂತೆ ಸೆಕೆ ಮಾಯವಾಗಿ ಜಿಲ್ಲೆಯ ಎಲ್ಲೆಡೆ ತಂಪಾದ ವಾತಾವರಣ ಉಂಟಾಗಿದೆ.ತಾತ್ಕಾಲಿಕವಾಗಿಯಾದರೂ ಕೂಲ್ ಕೂಲ್ ಆಗಿರುವುದರಿಂದ ಜನತೆ ಸಮಾಧಾನದ ನಿಟ್ಟುಸಿರು ಬಿಡುತ್ತಿದ್ದಾರೆ.