ಸಾರಾಂಶ
ಕಟಾವು ಮಾಡಿ ಒಣಗಲು ಹಾಕಿದ್ದ ಮೆಕ್ಕೆಜೋಳ, ಶೇಂಗಾ ಸೇರಿದಂತೆ ವಿವಿಧ ಬೆಳೆಗಳು ಹಾನಿಯಾಗಿ ರೈತರು ಸಂಕಷ್ಟ ಎದುರಿಸುವಂತಾಯಿತು.
ಹಾವೇರಿ: ನಗರ ಸೇರಿದಂತೆ ಜಿಲ್ಲೆಯ ವಿವಿಧ ಭಾಗದಲ್ಲಿ ಶನಿವಾರ ಸಂಜೆ ಮಿಂಚು, ಸಿಡಿಲು ಸಹಿತ ಭಾರೀ ಗಾಳಿಯೊಂದಿಗೆ ಸುಮಾರು ಒಂದು ಗಂಟೆ ಕಾಲ ಮಳೆ ಸುರಿಯಿತು.
ಸಂಜೆ ಏಕಾಏಕಿ ಬೀಸಿದ ಭಾರೀ ಗಾಳಿಗೆ ಮನೆಯ ಮೇಲೆ ಹೊದಿಸಲಾಗಿದ್ದ ತಗಡುಗಳು ಹಾರಿ ಹೋಗಿವೆ. ಅಲ್ಲಲ್ಲಿ ಮರಗಳು ಬಿದ್ದಿವೆ. ತಾಲೂಕಿನ ಕಳ್ಳಿಹಾಳ ಗ್ರಾಮದಲ್ಲಿ ಭಾರಿ ಗಾಳಿಯೊಂದಿಗೆ ಆಲಿಕಲ್ಲು ಸಹಿತ ಮಳೆಯಾಗಿದೆ. ಹಾವೇರಿ-ಗುತ್ತಲ ರಸ್ತೆಯ ಎಪಿಎಂಸಿ ಬಳಿ ಮನೆ ಮೇಲ್ಛಾವಣಿಗೆ ಹಾಕಿದ್ದ ತಗಡುಗಳು ಗಾಳಿಗೆ ಹಾರಿ ವಿದ್ಯುತ್ ತಂತಿಯ ಮೇಲೆ ಬಿದ್ದಿದೆ. ನಗರ ಜಿಲ್ಲಾ ಕ್ರೀಡಾಂಗಣದಲ್ಲಿ ಗಾಳಿಯ ರಭಸಕ್ಕೆ ಚುರ್ಚಿಗಳು ಚಿಲ್ಲಾಪಿಲ್ಲಿಯಾಗಿ ಬಿದ್ದಿದ್ದು, ಕ್ರೀಡಾಂಗಣದಲ್ಲಿ ನೀರು ನಿಂತಿದೆ. ಏಕಾಏಕಿ ಬಿಸಿದ ಭಾರೀ ಗಾಳಿಯಿಂದ ನಗರದ ಮಾರುಕಟ್ಟೆಯಲ್ಲಿ ಬೀದಿಬದಿಯ ವ್ಯಾಪಾರಸ್ಥರು ನೆರಳಿಗಾಗಿ ಅಳವಡಿಸಿಕೊಂಡಿದ್ದ ಛತ್ರಿಗಳು ಹಾರಿಹೋಗಿ ಸಮಸ್ಯೆ ಎದುರಿಸುವಂತಾಯಿತು. ರಭಸವಾಗಿ ಬಿಸಿದ ಗಾಳಿ, ಮಳೆಯಿಂದ ನಗರದಲ್ಲಿ ತಡರಾತ್ರಿವರೆಗೂ ವಿದ್ಯುತ್ ವ್ಯತ್ಯಯ ಉಂಟಾಯಿತು.ನಗರದ ಮಾರುಕಟ್ಟೆ ಸೇರಿದಂತೆ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಠಿಸಿದೆ. ಕಟಾವು ಮಾಡಿ ಒಣಗಲು ಹಾಕಿದ್ದ ಮೆಕ್ಕೆಜೋಳ, ಶೇಂಗಾ ಸೇರಿದಂತೆ ವಿವಿಧ ಬೆಳೆಗಳು ಹಾನಿಯಾಗಿ ರೈತರು ಸಂಕಷ್ಟ ಎದುರಿಸುವಂತಾಯಿತು. ಹಾನಗಲ್ಲ ತಾಲೂಕಿನಲ್ಲೂ ಸಾಧಾರಣ ಮಳೆಯಾಗಿದೆ.