ಕರಾವಳಿಯಲ್ಲಿ ಮುಂದುವರಿದ ಗುಡುಗು ಮಳೆ, 24ರ ವರೆಗೆ ಯೆಲ್ಲೋ ಅಲರ್ಟ್‌

| Published : May 22 2024, 12:45 AM IST

ಕರಾವಳಿಯಲ್ಲಿ ಮುಂದುವರಿದ ಗುಡುಗು ಮಳೆ, 24ರ ವರೆಗೆ ಯೆಲ್ಲೋ ಅಲರ್ಟ್‌
Share this Article
  • FB
  • TW
  • Linkdin
  • Email

ಸಾರಾಂಶ

ಬುಧವಾರ ಕೂಡ ಕರಾವಳಿ ಜಿಲ್ಲೆಯಲ್ಲಿ ಗುಡುಗು ಸಹಿತ ಭಾರಿ ಮಳೆಯಾಗುವ ಸಾಧ್ಯತೆಯಿದೆ. ಮೇ 23ರವರೆಗೆ ಕಡಲಿಗೆ ಇಳಿಯದಂತೆ ಮೀನುಗಾರರಿಗೆ ಜಿಲ್ಲಾಡಳಿತ ಎಚ್ಚರಿಕೆ ನೀಡಿದೆ.

ಕನ್ನಡಪ್ರಭ ವಾರ್ತೆ ಮಂಗಳೂರು

ಕರಾವಳಿಯಲ್ಲಿ ಮುಂಗಾರು ಪೂರ್ವ ಮಳೆ ಮುಂದುವರಿದಿದ್ದು, ಮಂಗಳವಾರವೂ ಅಪರಾಹ್ನ ಗುಡುಗು ಸಹಿತ ಮಳೆ ಕಾಣಿಸಿದೆ. ಭಾರತೀಯ ಹವಾಮಾನ ಇಲಾಖೆ ಮೇ 22ರಿಂದ 24ರ ವರೆಗೆ ಕರಾವಳಿಯಲ್ಲಿ ಯೆಲ್ಲೋ ಅಲರ್ಟ್‌ ಘೋಷಿಸಿದೆ.

ಸೋಮವಾರ ತಡರಾತ್ರಿ ಮಂಗಳೂರು ಸೇರಿದಂತೆ ದ.ಕ.ಜಿಲ್ಲೆಯ ಗ್ರಾಮೀಣ ಭಾಗಗಳಲ್ಲಿ ಭಾರಿ ಮಳೆ ಸುರಿದಿದೆ. ಮಂಗಳವಾರ ಬೆಳಗ್ಗೆ ಮೋಡ ಕವಿದ ವಾತಾವರಣವಿತ್ತು. ಮಧ್ಯಾಹ್ನ ಎಂದಿನಂತೆ ಬಿರುಬಿಸಿಲು ಕಂಡುಬಂದರೂ ಬಳಿಕ ದಟ್ಟಮೋಡಗಳು ಕಾಣಿಸಿಕೊಂಡು ಮಳೆ ಸುರಿದಿದೆ. ಸಂಜೆ ವೇಳೆಗೆ ಮಂಗಳೂರಲ್ಲೂ ಗುಡುಗು ಸಹಿತ ಅಲ್ಲಲ್ಲಿ ಸಾಧಾರಣ ಮಳೆಯಾಗಿದೆ.ಬುಧವಾರ ಕೂಡ ಕರಾವಳಿ ಜಿಲ್ಲೆಯಲ್ಲಿ ಗುಡುಗು ಸಹಿತ ಭಾರಿ ಮಳೆಯಾಗುವ ಸಾಧ್ಯತೆಯಿದೆ. ಮೇ 23ರವರೆಗೆ ಕಡಲಿಗೆ ಇಳಿಯದಂತೆ ಮೀನುಗಾರರಿಗೆ ಜಿಲ್ಲಾಡಳಿತ ಎಚ್ಚರಿಕೆ ನೀಡಿದೆ.

ತುಂಬೆಯಲ್ಲಿ ನೀರು ಸಂಗ್ರಹ ಏರಿಕೆ: ಮಂಗಳೂರಿಗೆ ನೀರು ಪೂರೈಸುವ ತುಂಬೆ ಹೊಸ ಡ್ಯಾಂನಲ್ಲಿ ಮಂಗಳವಾರ ನೀರಿನ ಸಂಗ್ರಹ ಪ್ರಮಾಣ 5.20 ಮೀಟರ್‌ಗೆ ಏರಿಕೆಯಾಗಿದೆ. ಸೋಮವಾರ 3.42 ಮೀಟರ್‌ ಇದ್ದ ನೀರಿನ ಪ್ರಮಾಣ ಒಂದೇ ದಿನದಲ್ಲಿ 1.78 ಮೀಟರ್‌ನಷ್ಟು ನೀರು ಸಂಗ್ರಹ ದಿಢೀರ್‌ ಏರಿಕೆಯಾಗಿದೆ. ಕಳೆದ ಎರಡು ದಿನಗಳಿಂದ ದ.ಕ.ಜಿಲ್ಲೆಯಾದ್ಯಂತ ಮಳೆಯಾಗುತ್ತಿದೆ. ಮುಖ್ಯವಾಗಿ ಘಟ್ಟ ಪ್ರದೇಶಗಳಲ್ಲಿ ಭಾರಿ ಮಳೆಯಾಗುತ್ತಿದೆ. ಧರ್ಮಸ್ಥಳ, ಬೆಳ್ತಂಗಡಿ, ಚಾರ್ಮಾಡಿಯ ತಪ್ಪಲು ಪ್ರದೇಶಗಳಲ್ಲಿ ನಿರಂತರ ಮಳೆಯ ಕಾರಣ ನದಿಯ ಅಲಲ್ಲಿ ನೀರಿನ ಹರಿವು ಆರಂಭವಾಗಿದೆ. ಇದೇ ವೇಳೆ ಬಂಟ್ವಾಳದಲ್ಲಿ ಎಎಂಆರ್‌ ಡ್ಯಾಂ ಭರ್ತಿಯಾಗಿದ್ದು, 1.45 ಮೀಟರ್‌ ನೀರು ಸೋಮವಾರದಿಂದ ತುಂಬೆ ಡ್ಯಾಂಗೆ ಪೂರೈಕೆ ಮಾಡಲಾಗಿದೆ. ಮಂಗಳವಾರ ಕೂಡ ಎಎಂಆರ್‌ ಡ್ಯಾಂನಲ್ಲಿ ನೀರಿನ ಸಂಗ್ರಹ ಭರ್ತಿಯಾಗಿಯೇ ಇದೆ.

ಇಂದಿನಿಂದ ರೇಷನಿಂಗ್‌ ರದ್ದು

ತುಂಬೆ ಡ್ಯಾಂನಲ್ಲಿ ಸಾಕಷ್ಟು ಪ್ರಮಾಣದಲ್ಲಿ ನೀರಿನ ಸಂಗ್ರಹ ಇರುವುದರಿಂದ ಮಂಗಳೂರು ಮಹಾನಗರಕ್ಕೆ ನೀರು ಪೂರೈಕೆಯ ರೇಷನಿಂಗ್‌ ಮೇ 22ರಿಂದ ರದ್ದುಗೊಳಿಸಲು ಪಾಲಿಕೆ ಆಡಳಿತ ಚಿಂತಿಸಿದೆ.

ತುಂಬೆ ಡ್ಯಾಂನಲ್ಲಿ ನೀರಿನ ಕೊರತೆ ತಲೆದೋರಿದ ಕಾರಣ ಏಪ್ರಿಲ್‌ ಅಂತ್ಯದಲ್ಲಿ ಮಂಗಳೂರಿಗೆ ಎರಡು ದಿನಕ್ಕೊಮ್ಮೆ ನೀರು ಪೂರೈಕೆಗೆ ಜಿಲ್ಲಾಡಳಿತ ಸೂಚನೆ ನೀಡಿತ್ತು. ಇದೀಗ ಡ್ಯಾಂನಲ್ಲಿ ನೀರಿನ ಸಂಗ್ರಹ ಹೆಚ್ಚಳವಾಗಿರುವುದರಿಂದ ನೀರಿನ ರೇಷನಿಂಗ್‌ ಕೊನೆಗೊಳ್ಳಲಿದೆ ಎಂದು ಪಾಲಿಕೆ ಮೂಲಗಳು ತಿಳಿಸಿವೆ.

ಮಿತ್ತೂರು: ಚಲಿಸುತ್ತಿದ್ದ ಕಾರಿನ ಮೇಲೆ ಮರ ಬಿದ್ದು ಇಬ್ಬರಿಗೆ ಗಾಯಬಂಟ್ವಾಳ: ಸಂಜೆ ವೇಳೆ ಸುರಿದ ಭಾರಿ ಗಾಳಿ ಮಳೆಗೆ ರಸ್ತೆ ಬದಿಯಲ್ಲಿದ್ದ ದೊಡ್ಡ ಗಾತ್ರದ ಮರವೊಂದು ಚಲಿಸುತ್ತಿದ್ದ ಕಾರಿನ ಮೇಲೆ ಬಿದ್ದು ಇಬ್ಬರು ಗಾಯಗೊಂಡ ಘಟನೆ ಮಾಣಿ ಮೈಸೂರು- ರಸ್ತೆಯ ಮಿತ್ತೂರು ಸಮೀಪದ ಕುಕ್ಕರಬೆಟ್ಟು ಎಂಬಲ್ಲಿ ನಡೆದಿದೆ. ಕಾರಿನಲ್ಲಿದ್ದವರು ಮಂಗಳೂರು ಹಂಪನಕಟ್ಟೆ ‌ನಿವಾಸಿಗಳು ಎಂದು ಹೇಳಲಾಗಿದ್ದು, ಇವರ ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿಯಬೇಕಾಗಿದೆ. ಕಾರಿನಲ್ಲಿ ಒಟ್ಟು ನಾಲ್ಕು ಜನಪ್ರಯಾಣಿಕರಿದ್ದು, ಮೈಸೂರಿಗೆ ತೆರಳುತ್ತಿದ್ದರು ಎನ್ನಲಾಗಿದೆ. ಚಲಿಸುತ್ತಿದ್ದಾಗಲೇ ಮರ ಮುರಿದು ಬಿದ್ದ ಕಾರಣ ಕಾರು ಜಖಂಗೊಂಡಿದೆ. ಘಟನೆಯಿಂದ ಕೆಲಹೊತ್ತು ಸಂಚಾರದಲ್ಲಿ ಅಸ್ತವ್ಯಸ್ತಗೊಂಡಿತ್ತು. ಮರ ವಿದ್ಯುತ್ ಕಂಬದ ಮೇಲೆ ಬಿದ್ದು ಕಂಬ ಮುರಿದು ಬಿದ್ದಿದೆ ಹಾಗೂ ವಿದ್ಯುತ್ ತಂತಿಗಳು ಕಡಿದು ನಷ್ಟವುಂಟಾಗಿದೆ. ಸ್ಥಳೀಯರು ಕೂಡಲೇ ಗಾಯಳುಗಳನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ, ಮತ್ತು ಸಂಚಾರಕ್ಕೆ ಅಡಚಣೆಯಾಗಿದ್ದ ಮರವನ್ನು ತೆರವುಮಾಡಿದ್ದಾರೆ.