ಎಕ್ಸ್‌ಪ್ರೆಸ್ ಕೆನಾಲ್ ವಿರೋಧಿಸಿ ನಾಳೆ ತುರುವೇಕೆರೆ ಬಂದ್

| Published : Jun 24 2024, 01:39 AM IST

ಎಕ್ಸ್‌ಪ್ರೆಸ್ ಕೆನಾಲ್ ವಿರೋಧಿಸಿ ನಾಳೆ ತುರುವೇಕೆರೆ ಬಂದ್
Share this Article
  • FB
  • TW
  • Linkdin
  • Email

ಸಾರಾಂಶ

ಭೂಮಿಯ ಒಳಗಡೆ ಸುಮಾರು ೧೨ ಅಡಿ ವ್ಯಾಸದ ಪೈಪನ್ನು ಹಾಕಿ ನೀರನ್ನು ಹರಿಸುವ ಯೋಜನೆ ಜಾರಿಗೆ ಬಂದರೆ ಜಿಲ್ಲೆಯ ರೈತರಿಗೆ ಮರಣ ಶಾಸನ ಬರೆದಂತೆ. ಜಿಲ್ಲೆಗೆ ನಿಗದಿಪಡಿಸಿದ ೨೩ ಟಿಎಂಸಿ ನೀರನ್ನು ಹೊರತುಪಡಿಸಿ ಇತರೆ ಭಾಗಗಳಿಗೆ ತೆಗೆದುಕೊಂಡು ಹೋಗಲು ಸಮಸ್ಯೆ ಇಲ್ಲ. ಆದರೆ ಹೆಚ್ಚುವರಿ ನೀರು ಬಿಡುಗಡೆ ಮಾಡದೇ ಜಿಲ್ಲೆಗೆ ನಿಗದಿಪಡಿಸಿರುವ ನೀರನ್ನೇ ಹರಿಸಲು ಪ್ರಯತ್ನಿಸಿದರೆ ಹೋರಾಟ ಅನಿವಾರ್ಯವಾಗಲಿದೆ.

ಕನ್ನಡಪ್ರಭ ವಾರ್ತೆ ತುರುವೇಕೆರೆ

ತುಮಕೂರು ಜಿಲ್ಲೆಯ ಮೂಲಕ ಮಾಗಡಿ, ರಾಮನಗರ ಸೇರಿ ಇತರೆ ಪ್ರದೇಶಗಳಿಗೆ ಹೇಮಾವತಿ ನೀರನ್ನು ಕೊಂಡೊಯ್ಯುವ ಎಕ್ಸ್‌ಪ್ರೆಸ್ ಕೆನಾಲ್ ಕಾಮಗಾರಿಯನ್ನು ವಿರೋಧಿಸಿ ಜೂ ೨೫ರ ಮಂಗಳವಾರದಂದು ತುಮಕೂರು ಜಿಲ್ಲಾ ಬಂದ್ ಗೆ ಕರೆ ನೀಡಿರುವ ಹಿನ್ನೆಲೆಯಲ್ಲಿ ತುರುವೇಕೆರೆ ತಾಲೂಕಿನಲ್ಲೂ ಸ್ವಯಂ ಪ್ರೇರಿತ ಬಂದ್ ನಡೆಸಲು ಹಲವಾರು ಸಂಘಸಂಸ್ಥೆಯ ಪ್ರತಿನಿಧಿಗಳು ತೀರ್ಮಾನಿಸಿದ್ದಾರೆ.

ಇಲ್ಲಿಯ ಖಾಸಗಿ ವಸತಿ ಗೃಹದಲ್ಲಿ ನಡೆದ ಪ್ರತಿನಿಧಿಗಳ ಸಭೆಯಲ್ಲಿ ಜೂ ೨೫ ರ ಮಂಗಳವಾರದಂದು ಬೆಳಗ್ಗೆ ೬ ರಿಂದ ಸಾಯಂಕಾಲ ೬ ರವರೆಗೆ ಬಂದ್ ನಡೆಸಲು ನಿರ್ಧರಿಸಲಾಯಿತು. ೨೩ ಟಿಎಂಸಿ ಹೇಮಾವತಿ ನೀರು ಜಿಲ್ಲೆಗೆ ನಿಗದಿಪಡಿಸಲಾಗಿದೆ. ಇಷ್ಟು ದಿನಗಳವರೆಗೂ ಜಿಲ್ಲೆಗೆ ನಿಗದಿತ ನೀರು ಬಿಡದೇ ಅನ್ಯಾಯವಾಗಿತ್ತು. ಕಳೆದ ಒಂದೆರೆಡು ವರ್ಷಗಳಿಂದ ನಿಗದಿತ ಪ್ರಮಾಣದಲ್ಲಿ ನೀರನ್ನು ಬಿಡಲಾಗುತ್ತಿದೆ. ಈ ಹೊತ್ತಿಗಾಗಲೇ ಮಾಗಡಿ ಸೇರಿ ವಿವಿಧ ಪ್ರದೇಶಗಳಿಗೆ ನೀರು ಹರಿಸಲು ತೀರ್ಮಾನಿಸಿರುವುದು ಖಂಡನೀಯ ಎಂದು ಸಂಘಟನೆಯ ಪದಾಧಿಕಾರಿಗಳು ಆಕ್ಷೇಪ ವ್ಯಕ್ತಪಡಿಸಿದರು.

ಮರಣ ಶಾಸನ:

ಮುಖಂಡ ಎಚ್.ಆರ್.ರಾಮೇಗೌಡ ಮಾತನಾಡಿ, ಭೂಮಿಯ ಒಳಗಡೆ ಸುಮಾರು ೧೨ ಅಡಿ ವ್ಯಾಸದ ಪೈಪನ್ನು ಹಾಕಿ ನೀರನ್ನು ಹರಿಸುವ ಯೋಜನೆ ಜಾರಿಗೆ ಬಂದರೆ ಜಿಲ್ಲೆಯ ರೈತರಿಗೆ ಮರಣ ಶಾಸನ ಬರೆದಂತೆ. ಜಿಲ್ಲೆಗೆ ನಿಗದಿಪಡಿಸಿದ ೨೩ ಟಿಎಂಸಿ ನೀರನ್ನು ಹೊರತುಪಡಿಸಿ ಇತರೆ ಭಾಗಗಳಿಗೆ ತೆಗೆದುಕೊಂಡು ಹೋಗಲು ಸಮಸ್ಯೆ ಇಲ್ಲ. ಆದರೆ ಹೆಚ್ಚುವರಿ ನೀರು ಬಿಡುಗಡೆ ಮಾಡದೇ ಜಿಲ್ಲೆಗೆ ನಿಗದಿಪಡಿಸಿರುವ ನೀರನ್ನೇ ಹರಿಸಲು ಪ್ರಯತ್ನಿಸಿದರೆ ಹೋರಾಟ ಅನಿವಾರ್ಯವಾಗಲಿದೆ ಎಂದು ಹೇಳಿದರು.

ಸ್ವಯಂ ಪ್ರೇರಿತ ಬಂದ್:

ವಕೀಲ ಪಿ.ಎಚ್.ಧನಪಾಲ್ ಸಭೆಯಲ್ಲಿ ಮಾತನಾಡಿ, ಪಟ್ಟಣ ಸೇರಿ ತಾಲೂಕಿನ ನಾಲ್ಕು ಹೋಬಳಿಗಳಲ್ಲೂ ಜನರು ಬಂದ್ ಮಾಡಬೇಕು. ಇದು ರೈತರ ಅಳಿವು ಉಳಿವಿನ ಪ್ರಶ್ನೆಯಾಗಿದೆ. ಪಕ್ಷಭೇಧ ಮರೆತು ರೈತರೊಂದಿಗೆ ಸಾರ್ವಜನಿಕರೂ ಸಹ ಈ ಬಂದ್ ಗೆ ಕೈ ಜೋಡಿಸಬೇಕೆಂದು ಮನವಿ ಮಾಡಿಕೊಂಡರು.ಸಭೆಯಲ್ಲಿ ಪಟ್ಟಣ ಪಂಚಾಯ್ತಿ ಸದಸ್ಯರಾದ ಟಿ.ಆರ್.ಸುರೇಶ್, ಮಧು, ಚಿದಾನಂದ್, ಪಟ್ಟಣ ವ್ಯಾಪಾರಿಗಳ ಸಂಘದ ಅಧ್ಯಕ್ಷ ಟಿ.ಆರ್.ಮಲ್ಲಿಕಾರ್ಜುನ್, ವೀರಶೈವ ಲಿಂಗಾಯಿತ ಸಂಘಟನೆ, ಲಯನ್ಸ್ ಕ್ಲಬ್, ಪಾರ್ವತಿ ಮಹಿಳಾ ಸಮಾಜ, ದಲಿತ ಸಂಘಟನೆ, ಬೀದಿ ಬದಿ ವ್ಯಾಪಾರಿಗಳ ಸಂಘ, ಕಟ್ಟಡ ಕಾಮಿಕರ ಸಂಘ, ಸಿಐಟಿಯು ಸೇರಿ ವಿವಿಧ ಸಂಘಟನೆಯ ಪದಾಧಿಕಾರಿಗಳು ಭಾಗವಹಿಸಿದ್ದರು.