ಸಾರಾಂಶ
ಡ್ರೆಪುಂಗ್ ಗೋಮಾಂಗ ಬೌದ್ಧ ಮಠದ ಬಳಿ ಭೂತ ದಹನ ಮಾಡುವ ಮೂಲಕ ಹಬಕ್ಕೆ ತೆರೆ ಎಳೆಯಲಾಯಿತು.
ಮುಂಡಗೋಡ: ಇಲ್ಲಿಯ ಟಿಬೇಟಿಯನ್ನರ ಹೊಸ ವರ್ಷ ಲೋಸಾರ ಹಬ್ಬದ ಕೊನೆಯ ದಿನವಾದ ಶನಿವಾರ ಟಿಬೇಟಿಯನ್ ಕಾಲನಿ ನಂ.೬ ಡ್ರೆಪುಂಗ್ ಗೋಮಾಂಗ ಬೌದ್ಧ ಮಠದ ಬಳಿ ಭೂತ ದಹನ ಮಾಡುವ ಮೂಲಕ ಹಬಕ್ಕೆ ತೆರೆ ಎಳೆಯಲಾಯಿತು.
ಲೋಸಾರ ಹಬ್ಬದ ಕೊನೆಯ ದಿನ ಭೂತ ಪ್ರೇತಗಳನ್ನು ಸಂತುಷ್ಠಗೊಳಿಸಲು ವಿವಿಧ ಬಟ್ಟೆ, ದವಸ ಧಾನ್ಯಗಳನ್ನು ಸುಡುವುದು ಸಂಪ್ರದಾಯವಾಗಿದೆ. ಅದೇ ರೀತಿ ಇಂದು ಕಾಲನಿಯ ಟಿಬೇಟಿಯನ್ನರೆಲ್ಲ ಒಂದು ಕಡೆ ಸಾಮೂಹಿಕವಾಗಿ ಸೇರಿ ವಿವಿಧ ಹಿಟ್ಟಿನಿಂದ ತಯಾರಿಸಲಾದ ಬೃಹತ್ ಭೂತದ ಗೊಂಬೆಗಳ ಮೆರವಣಿಗೆ ನಡೆಸಿದರು. ಬಳಿಕ ಟಿಬೇಟಿಯನ್ ಕಾಲನಿ ನಂ ೬ ಡ್ರೆಪುಂಗ್ ಗೋಮಾಂಗ ಬೌದ್ಧ ಮಠದ ಬಳಿ ಟಿಬೇಟಿಯನ್ ಸಂಪ್ರದಾಯದಂತೆ ಮೇಲಂ ಪೂಜಾ ವಿಧಿ ವಿಧಾನಗಳೊಂದಿಗೆ ಬಟ್ಟೆ, ದವಸ, ಧಾನ್ಯಗಳನ್ನು ಹಾಕಿ ದಹನ ಮಾಡಲಾಯಿತು.ಫೆಬ್ರವರಿ ೨೮ ರಿಂದ ಪ್ರಾರಂಭವಾದ ಲೋಸಾರ ಹಬ್ಬ ಸುಮಾರು ೧೫ ದಿನಗಳ ಬಳಿಕ ಕೊನೆಯ ದಿನದಂದು ಭೂತಪ್ರೇತಗಳಿಂದ ಯಾವುದೇ ತೊಂದರೆ ಬರದಿರಲು, ವಿಶ್ವ ಶಾಂತಿ ಹಾಗೂ ಲೋಕ ಕಲ್ಯಾಣಕ್ಕಾಗಿ ಈ ರೀತಿ ದವಸ ಧಾನ್ಯಗಳನ್ನು ಹಾಕಿ ಭೂತ ದಹನ ಮಾಡುವ ಮೂಲಕ ಹಬ್ಬವನ್ನು ಆಚರಿಸಲಾಗುತ್ತದೆ.
ಈ ಸಂದರ್ಭದಲ್ಲಿ ಟಿಬೇಟಿಯನ್ ಮುಖ್ಯಸ್ಥರು ಹಾಗೂ ಎಲ್ಲ ಬೌದ್ದ ಮಠಗಳ ಬೌದ್ದ ಬಿಕ್ಕುಗಳು ಉಪಸ್ಥಿತರಿದ್ದರು. ಈ ವೇಳೆ ಟಿಬೇಟಿಯನ್ ಕಾಲನಿ ಸಂಪೂರ್ಣ ಜನಜಂಗುಳಿಯಿಂದ ಕೂಡಿತ್ತು.ಈ ಹಿಂದೆ ಹಣವನ್ನು ಕೂಡ ಬೆಂಕಿಯಲ್ಲಿ ಹಾಕಿ ಸುಡಲಾಗುತ್ತಿತ್ತು. ಹಣವನ್ನು ಸುಡುವುದು ಭಾರತೀಯರಿಂದ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಕೆಲ ವರ್ಷಗಳಿಂದ ಹಣ ಸುಡುವುದನ್ನು ಕೈ ಬಿಡಲಾಗಿದ್ದು, ದವಸ ಧಾನ್ಯಗಳನ್ನು ಮಾತ್ರ ಸುಡಲಾಗುತ್ತದೆ.
ಟಿಬೇಟಿಯನ್ ಕಾಲನಿ ನಂ ೬ ಡ್ರೆಪುಂಗ್ ಗೋಮಾಂಗ ಬೌದ್ದ ಮಠದ ಬಳಿ ಭೂತ ದಹನ ಮಾಡುವ ಮೂಲಕ ಹಬಕ್ಕೆ ತೆರೆ ಎಳೆಯಲಾಯಿತು.