ಸಾರಾಂಶ
ಈ ಹಿಂದೆ ಅಸೆಂಬ್ಲಿ ಚುನಾವಣೆಯಲ್ಲಿ ಹಿಂದು ಮುಖಂಡ ಅರುಣ್ ಕುಮಾರ್ ಪುತ್ತಿಲ ಅವರು ಬಿಜೆಪಿ ವಿರುದ್ಧ ಸ್ಪರ್ಧಿಸಿದ್ದರು. ಆಗ ಡಿ.ವಿ.ಸದಾನಂದ ಗೌಡ ಅವರನ್ನು ಪುತ್ತೂರಿಗೆ ಕರೆಸಿದ ಬಿಜೆಪಿ ಮುಖಂಡರು, ಅವರಿಂದ ಸುದ್ದಿಗೋಷ್ಠಿ ನಡೆಸಿದ್ದರು. ಆಗ ಡೀವಿ ಅವರು ಬಿಜೆಪಿ ನೀಡಿದ್ದ ಕೊಡುಗೆಗಳ ಬಗ್ಗೆ ಹಾಡಿ ಹೊಗಳಿದ್ದರು. ಅಲ್ಲದೆ, ತನ್ನ ಪಕ್ಷ ನಿಷ್ಠೆ ಬಗ್ಗೆ ಹೇಳಿಕೊಂಡಿದ್ದರು. ಅದರ ತುಣುಕು ಈಗ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಕನ್ನಡಪ್ರಭ ವಾರ್ತೆ ಮಂಗಳೂರು
ಅಧಿಕಾರಕ್ಕಾಗಿ ಪಕ್ಷದ ಬಗ್ಗೆ ಅಸಮಾಧಾನ ಹೊರಹಾಕಿದ ಹೊತ್ತಲ್ಲೇ ಈ ಹಿಂದೆ ಬಿಜೆಪಿ ಬಗ್ಗೆ ಮಾಜಿ ಮುಖ್ಯಮಂತ್ರಿ, ಹಾಲಿ ಸಂಸದ ಡಿ.ವಿ. ಸದಾನಂದ ಗೌಡ ಅವರು ಹಿಂದೆ ಪಕ್ಷವನ್ನು ಹೊಗಳಿದ್ದ ವಿಡಿಯೋ ಈಗ ವೈರಲ್ ಆಗಿದೆ. ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ವಂಚಿತ ಸದಾನಂದ ಗೌಡ ಅವರು ಪಕ್ಷದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದರು. ಇದೇ ವೇಳೆ ಈ ಹಿಂದೆ ಅಸೆಂಬ್ಲಿ ಚುನಾವಣೆಯಲ್ಲಿ ಹಿಂದು ಮುಖಂಡ ಅರುಣ್ ಕುಮಾರ್ ಪುತ್ತಿಲ ಅವರು ಬಿಜೆಪಿ ವಿರುದ್ಧ ಸ್ಪರ್ಧಿಸಿದ್ದರು. ಆಗ ಡಿ.ವಿ.ಸದಾನಂದ ಗೌಡ ಅವರನ್ನು ಪುತ್ತೂರಿಗೆ ಕರೆಸಿದ ಬಿಜೆಪಿ ಮುಖಂಡರು, ಅವರಿಂದ ಸುದ್ದಿಗೋಷ್ಠಿ ನಡೆಸಿದ್ದರು. ಆಗ ಡೀವಿ ಅವರು ಬಿಜೆಪಿ ನೀಡಿದ್ದ ಕೊಡುಗೆಗಳ ಬಗ್ಗೆ ಹಾಡಿ ಹೊಗಳಿದ್ದರು. ಅಲ್ಲದೆ, ತನ್ನ ಪಕ್ಷ ನಿಷ್ಠೆ ಬಗ್ಗೆ ಹೇಳಿಕೊಂಡಿದ್ದರು. ಅದರ ತುಣುಕು ಈಗ ಜಾಲತಾಣಗಳಲ್ಲಿ ವೈರಲ್ ಆಗಿದೆ. ‘ಇಲ್ಲಿಯವರೆಗೆ ಬಿಜೆಪಿ ಪಕ್ಷ ನನ್ನನ್ನ ಬೆಳೆಸಿದೆ, ಇನ್ನೂ ನಾನೇನು ಪಕ್ಷಕ್ಕೆ ಕೊಡಬೇಕು ಅದು ಮಾತ್ರ ಉಳಿದಿದೆ. ನಾನು ಪಕ್ಷದಿಂದ ಏನನ್ನು ಅಪೇಕ್ಷೆ ಮಾಡಬಾರದು. ಪಾರ್ಟಿಯ ಅಧ್ಯಕ್ಷ, ಎಂಎಲ್‌ಎ, ಎಂಪಿ, ವಿರೋಧ ಪಕ್ಷದ ನಾಯಕ, ಮುಖ್ಯಮಂತ್ರಿ, ರಾಷ್ಟ್ರೀಯ ಕಾರ್ಯದರ್ಶಿ, ರಾಷ್ಟ್ರೀಯ ಉಪಾಧ್ಯಕ್ಷನಾದೆ. ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಸಂಪುಟದಲ್ಲಿ 7 ವರ್ಷಗಳ ಕಾಲ ಸಂಸದನಾಗುವ ಅವಕಾಶ ನೀಡಿದೆ. ಇನ್ನೂ ನನಗೆ ಸಂತೋಷ ಬರಲಿಲ್ಲ ಅಂದ್ರೆ ನಾನು ಮನುಷ್ಯನಾ, ಪ್ರಾಣಿನಾ? ಎಂದು ಡೀವಿ ಹೇಳಿದ್ದರು. ಇದೇ ಹೇಳಿಕೆ ಈಗ ಜಾಲತಾಣದಲ್ಲಿ ಟ್ರೋಲ್ ಕೂಡ ಆಗುತ್ತಿದ್ದು, ಡೀವಿ ಅವರ ಅಧಿಕಾರ ಆಕಾಂಕ್ಷೆಯನ್ನು ವಿರೋಧಿಸಿ ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ.