ಸಾರಾಂಶ
ತಾಳಗುಪ್ಪ : ವಿಶ್ವವಿಖ್ಯಾತ ಜೋಗ ಜಲಪಾತ ವೀಕ್ಷಣೆ ಈಗ ಮತ್ತಷ್ಟು ದುಬಾರಿಯಾಗಿದೆ. ಸುಮಾರು 183.7 ಕೋಟಿ ರು.ಗಳ ವೆಚ್ಚದಲ್ಲಿ ಜಲಪಾತದ ಆವರಣವನ್ನು ಅಂತಾರಾಷ್ಟ್ರೀಯ ಮಟ್ಟದ ಪ್ರವಾಸಿ ತಾಣವನ್ನಾಗಿ ರೂಪಿಸಲು ಹೊರಟಿರುವ ಜೋಗ ನಿರ್ವಹಣಾ ಪ್ರಾಧಿಕಾರವು, ಮೂಲಸೌಕರ್ಯ ಪೂರ್ಣ ರೂಪುಗೊಳ್ಳುವ ಮೊದಲೇ ಹಿಂದಿದ್ದ ಪ್ರವೇಶ ಶುಲ್ಕವನ್ನು ಹೆಚ್ಚಿಸಿದ್ದು ಪ್ರವಾಸಿಗರು ಹಾಗೂ ಸ್ಥಳೀಯರು ಆಕ್ಷೇಪಕ್ಕೆ ಕಾರಣವಾಗಿದೆ.
ಪರಿಷ್ಕೃತ ಪ್ರವೇಶ ದರ ಎಷ್ಟಿದೆ? ಜಲಪಾತ ವೀಕ್ಷಣೆಗೆ ಈ ಹಿಂದೆ ಬಸ್ಸೊಂದಕ್ಕೆ 150 ರು. ಪ್ರವೇಶ ಶುಲ್ಕ ಇತ್ತು. ಈಗ ಇದನ್ನು 200 ರು.ಗೆ ಹೆಚ್ಚಿಸಲಾಗಿದೆ. ಟಿಟಿ, ಮಿನಿ ಬಸ್ ದರ 100ರಿಂದ 150ಕ್ಕೆ ಹೆಚ್ಚಳವಾಗಿದೆ. ಅದೇ ರೀತಿ ಆಟೋರಿಕ್ಷಾಗೆ 30 ರಿಂದ 40 ರು. ಬೈಕ್‌ಗೆ 20ರಿಂದ 30 ರು.ಗೆ ಹೆಚ್ಚಿಸಲಾಗಿದೆ. ಇನ್ನು ಪ್ರವಾಸಿಗರಿಗೆ ಈ ಹಿಂದೆ ಒಬ್ಬರಿಗೆ 10 ರು. ಪ್ರವೇಶ ದರವಿತ್ತು. ಈಗ ಅದನ್ನು 20 ರು.ಗೆ ಹೆಚ್ಚಿಸಲಾಗಿದೆ.
ವಿದೇಶ ಪ್ರವಾಸಿಗರಿಗೆ ಹಿಂದೆ ಇದ್ದ 560 ರು, ಪ್ರವೇಶ ದರಕ್ಕೆ100 ರು. ಹೆಚ್ಚಿಸಲಾಗಿದೆ. ಜೋಗ ವೀಕ್ಷಣೆಗೆ 6ರಿಂದ 16 ವರ್ಷದೊಳಗಿನ ಮಕ್ಕಳಿಗೆ 10 ರು.ಶುಲ್ಕವನ್ನು ನಿಗಧಿ ಮಾಡಲಾಗಿದೆ. ಕ್ಯಾಮೆರಾ ತೆಗೆದುಕೊಂಡು ಹೋದರೂ ಅದಕ್ಕೂ100 ರು.ಶುಲ್ಕವನ್ನು ನಿಗದಿಪಡಿಸಲಾಗಿದೆ. ಡ್ರೋನ್ ಕ್ಯಾಮೆರಾಗೆ 500 ರು. ಪ್ರವೇಶ ಶುಲ್ಕ ಪಾವತಿಸಬೇಕಿದೆ.
ವಿಕಲಚೇತನರು, ಸ್ವಾತಂತ್ರ್ಯ ಹೋರಾಟಗಾರರು, ಮಾಜಿ ಸೈನಿಕರು, ಪತ್ರಿಕಾ ವರದಿಗಾರರು, ಟಿವಿ ಮಾಧ್ಯಮದವರಿಗೆ ಉಚಿತ ಪ್ರವೇಶವಿದೆ.