ಸಾರಾಂಶ
ಕನ್ನಡಪ್ರಭ ವಾರ್ತೆ ಮಂಗಳೂರುದ.ಕ. ಲೋಕಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ ಕೂಡ ಈ ಬಾರಿ ಬಿಜೆಪಿಯಂತೆ ಹೊಸ ಮುಖವನ್ನು ಕಣಕ್ಕೆ ಇಳಿಸಲು ತೀರ್ಮಾನಿಸಿದೆ. ಕಾಂಗ್ರೆಸ್ ಅಭ್ಯರ್ಥಿಯಾಗಿ ಪದ್ಮರಾಜ್ ಆರ್. ಅವರ ಹೆಸರು ಅಂತಿಮಗೊಳಿಸಿರುವ ಬಗ್ಗೆ ಪಕ್ಷದ ಉನ್ನತ ಮೂಲಗಳು ಮಾಹಿತಿ ನೀಡಿವೆ.
ಒಂದೆರಡು ದಿನಗಳಲ್ಲಿ ಪ್ರಕಟವಾಗುವ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿಯಲ್ಲಿ ಪದ್ಮರಾಜ್ ಹೆಸರು ಘೋಷಣೆಯಾಗುವ ಸಾಧ್ಯತೆ ಹೇಳಲಾಗಿದೆ.ಹಿರಿಯ ಕಾಂಗ್ರೆಸ್ ಮುಖಂಡ, ಕೇಂದ್ರ ಮಾಜಿ ಸಚಿವ ಜನಾರ್ದನ ಪೂಜಾರಿ ಅವರ ಪರಮಾಪ್ತರಾಗಿರುವ ಪದ್ಮರಾಜ್ ಅವರು ವೃತ್ತಿಯಲ್ಲಿ ವಕೀಲರು. ಬಿಲ್ಲವ ಸಮಾಜದ ಪ್ರಭಾವಿ ಮುಖಂಡರಾದ ಪದ್ಮರಾಜ್, ಕುದ್ರೋಳಿ ಶ್ರೀಗೋಕರ್ಣನಾಥ ಕ್ಷೇತ್ರದ ಆಡಳಿತ ಮಂಡಳಿಯಲ್ಲಿ ಕೋಶಾಧಿಕಾರಿಯಾಗಿದ್ದಾರೆ.ಕಳೆದ ವಿಧಾನಸಭಾ ಚುನಾವಣೆ ಹೊತ್ತಲ್ಲಿ ಕಾಂಗ್ರೆಸ್ ಸೇರಿದ್ದ ಪದ್ಮರಾಜ್ ಈಗ ಎಐಸಿಸಿ ಕಾರ್ಯದರ್ಶಿಯಾಗಿದ್ದಾರೆ. ಆಗ ಮಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಟಿಕೆಟ್‌ಗೆ ಭಾರಿ ಪ್ರಯತ್ನ ನಡೆಸಿದ್ದರು. ಈ ಬಾರಿ ಲೋಕಸಭಾ ಚುನಾವಣೆಗೆ ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಕೂಡ ಟಿಕೆಟ್‌ಗೆ ಯತ್ನಿಸಿದ್ದಾರೆ. ಆದರೆ ಬಿಜೆಪಿ ಅಭ್ಯರ್ಥಿ ಘೋಷಣೆ ಬೆನ್ನಲ್ಲೇ ಪದ್ಮರಾಜ್‌ರತ್ತ ಹೈಕಮಾಂಡ್ ಒಲವು ವ್ಯಕ್ತಪಡಿಸಿದೆ ಎಂದು ಹೇಳಲಾಗಿದೆ.
ಬಿಜೆಪಿಯಿಂದ ನಿವೃತ್ತ ಯೋಧ, ಕ್ಯಾಪ್ಟನ್ ಬ್ರಿಜೇಶ್ ಚೌಟ ಕಣಕ್ಕೆ ಇಳಿದಿದ್ದು, ಹೀಗಾಗಿ ವೃತ್ತಿಯಲ್ಲಿ ವಕೀಲರಾಗಿರುವ ಪದ್ಮರಾಜ್ ಅವರನ್ನು ಕಣಕ್ಕಿಳಿಸಲು ಕಾಂಗ್ರೆಸ್ ಯೋಜನೆ ರೂಪಿಸಿದೆ ಎನ್ನಲಾಗಿದೆ. ಬಿಜೆಪಿಯ ಬಂಟ ಅಭ್ಯರ್ಥಿಗೆ ಪ್ರಭಾವಿ ಬಿಲ್ಲವ ಮುಖಂಡನ ಮೂಲಕ ಠಕ್ಕರ್ ನೀಡಲು ಕಾಂಗ್ರೆಸ್ ತಂತ್ರ ರೂಪಿಸಿದೆ.ಉಡುಪಿಯಲ್ಲಿ ಬಂಟ ಜಯಪ್ರಕಾಶ್ ಹೆಗ್ಡೆ ಅವರನ್ನು ಕಣಕ್ಕಿಳಿಸಿ, ದ.ಕ. ಜಿಲ್ಲೆಯಲ್ಲಿ ಬಿಲ್ಲವ ಸಮುದಾಯದ ಪದ್ಮರಾಜ್‌ಗೆ ಟಿಕೆಟ್ ನೀಡುವ ಲೆಕ್ಕಾಚಾರವನ್ನು ಹೈಕಮಾಂಡ್ ಹೊಂದಿರುವ ಬಗ್ಗೆ ಮೂಲಗಳು ಹೇಳುತ್ತಿವೆ. ದ.ಕ.ಜಿಲ್ಲೆಯಲ್ಲಿ ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಅಲ್ಲದೆ, ರಮಾನಾಥ ರೈ ಕೂಡ ಟಿಕೆಟ್ ಆಕಾಂಕ್ಷಿಯಾಗಿದ್ದರು.