ಸಾರಾಂಶ
ತಂತ್ರಜ್ಞಾನ ಕ್ಷೇತ್ರದ ಸ್ಟಾರ್ಟ್ ಅಪ್‌ಗಳಲ್ಲಿ ಬಂಡವಾಳ ಹೂಡಿಕೆ ಮಾಡಲು ಆಯೋಜಿಸಿರುವ ಪ್ರಸಕ್ತ ವರ್ಷದ ಜಾಗತಿಕ ಉದ್ದಿಮೆದಾರರ ಸಮಾವೇಶ ‘ಟೈ ಗ್ಲೋಬಲ್ ಸಮ್ಮಿಟ್-2024’ ಡಿಸೆಂಬರ್ 9ರಿಂದ 11ರವರೆಗೆ ಬೆಂಗಳೂರಿನಲ್ಲಿ ಮತ್ತು ಡಿ.12ರಂದು ಮೈಸೂರಿನಲ್ಲಿ ನಡೆಯಲಿದೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ತಂತ್ರಜ್ಞಾನ ಕ್ಷೇತ್ರದ ಸ್ಟಾರ್ಟ್ ಅಪ್‌ಗಳಲ್ಲಿ ಬಂಡವಾಳ ಹೂಡಿಕೆ ಮಾಡಲು ಆಯೋಜಿಸಿರುವ ಪ್ರಸಕ್ತ ವರ್ಷದ ಜಾಗತಿಕ ಉದ್ದಿಮೆದಾರರ ಸಮಾವೇಶ ‘ಟೈ ಗ್ಲೋಬಲ್ ಸಮ್ಮಿಟ್-2024’ ಡಿಸೆಂಬರ್ 9ರಿಂದ 11ರವರೆಗೆ ಬೆಂಗಳೂರಿನಲ್ಲಿ ಮತ್ತು ಡಿ.12ರಂದು ಮೈಸೂರಿನಲ್ಲಿ ನಡೆಯಲಿದೆ ಎಂದು ಸಾಫ್ಟ್‌ವೇರ್ ಟೆಕ್ನಾಲಜಿ ಪಾರ್ಕ್ ಆಫ್ ಇಂಡಿಯಾ (ಎಸ್‌ಟಿಪಿಐ) ಬೆಂಗಳೂರು ವಲಯ ನಿರ್ದೇಶಕ ಡಾ। ಸಂಜಯ್ ತ್ಯಾಗಿ ತಿಳಿಸಿದರು.ಬುಧವಾರ ಸುದ್ದಿಗೋಷ್ಠಿಯಲ್ಲಿ ಈ ಮಾಹಿತಿ ನೀಡಿದ ಅವರು, ತಂತ್ರಜ್ಞಾನ ಕ್ಷೇತ್ರದ ಸ್ಟಾರ್ಟ್ ಅಪ್‌ಗಳಲ್ಲಿ ಜಾಗತಿಕ ಉದ್ದಿಮೆದಾರರು ಹೂಡಿಕೆಗೆ ಆಕರ್ಷಿಸುವ ಮೂಲಕ ಉತ್ತೇಜನ ನೀಡುವುದು ಈ ಶೃಂಗದ ಉದ್ದೇಶವಾಗಿದೆ. ನವೀನ ವ್ಯಾಪಾರ ಮಾದರಿಗಳು, ಉತ್ತಮ ಮಾರುಕಟ್ಟೆ ಬೇಡಿಕೆ ಮತ್ತು ಐಪಿ ಆಧಾರದ ಮೇಲೆ ಉನ್ನತ ಸ್ಟಾರ್ಟ್-ಅಪ್‌ಗಳನ್ನು ಗುರುತಿಸಲಾಗುತ್ತದೆ. ಅವುಗಳಲ್ಲಿ ಬಂಡವಾಳ ಹೂಡುವ ಅವಕಾಶವನ್ನು ಶೃಂಗ ದೊರಕಿಸುತ್ತದೆ. ಜಾಗತಿಕ ಉದ್ದಿಮೆದಾರರಿಂದ ಸುಮಾರು ₹100 ಕೋಟಿ ಈಕ್ವಿಟಿ ಅನುದಾನ ದೊರೆಯುವ ವಿಶ್ವಾಸವಿದೆ ಎಂದು ಹೇಳಿದರು.
ಒಟ್ಟಾರೆ ಯುಎಸ್‌ನ 50 ದೊಡ್ಡ ಬಂಡವಾಳದಾರರ ಸೇರಿದಂತೆ ಸುಮಾರು 750 ಹೂಡಿಕೆದಾರರು ಈ ಸಮಾವೇಶದಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ. ಸಮಾವೇಶದಲ್ಲಿ ಭಾಗವಹಿಸುವ ಸ್ಟಾರ್ಟ್ ಅಪ್‌ಗಳಲ್ಲಿ ಟಾಪ್ 10 ಸ್ಟಾರ್ಟ್ ಅಪ್‌ಗಳನ್ನು ಗುರುತಿಸಿ ಮೌಲ್ಯಮಾಪನ ಮಾಡುತ್ತದೆ. ಟಾಪ್ ಮೂರು ಸ್ಟಾರ್ಟ್ ಅಪ್‌ಗಳಾಗಿ ಆಯ್ಕೆಯಾಗುವವರಿಗೆ ತಲಾ ₹50 ಲಕ್ಷ ಅನುದಾನದ ಜೊತೆಗೆ ಅವರ ಬೆಳವಣಿಗೆಗೆ ಮಾರ್ಗದರ್ಶನ ಕೂಡ ದೊರೆಯಲಿದೆ ಎಂದು ಟೈ ಬೆಂಗಳೂರಿನ ಕಾರ್ಯಕಾರಿ ನಿರ್ದೇಶಕಿ ರಿತು ಶರ್ಮಾ ವಿವರಿಸಿದರು.ಟಿಜಿಎಸ್ 100ನ ಅಧ್ಯಕ್ಷ ನವೀನ್ ಗುಪ್ತಾ, ಟೈ ಬೆಂಗಳೂರು ಮುಖ್ಯಸ್ಥ ಮದನ್ ಪದಕಿ ಉಪಸ್ಥಿತರಿದ್ದರು.