ಅಪಪ್ರಚಾರ ಮಾಡೋರ ಹೆಡೆಮುರಿ ಕಟ್ಟಿ, ಶಿಕ್ಷಿಸಿ

| Published : Aug 21 2025, 01:00 AM IST

ಸಾರಾಂಶ

ಶ್ರೀಕ್ಷೇತ್ರ ಧರ್ಮಸ್ಥಳ ಮತ್ತು ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರ ಬಗ್ಗೆ ಅಪಪ್ರಚಾರ ಮಾಡುತ್ತಿರುವವರ ವಿರುದ್ಧ ಪ್ರಕರಣ ದಾಖಲಿಸಿ, ಉನ್ನತಮಟ್ಟದ ತನಿಖೆ ನಡೆಸುವಂತೆ ಒತ್ತಾಯಿಸಿ ಶ್ರೀಕ್ಷೇತ್ರ ಧರ್ಮಸ್ಥಳ ಭಕ್ತವೃಂದದಿಂದ ನಗರದಲ್ಲಿ ಬುಧವಾರ ಪಕ್ಷಾತೀತವಾಗಿ ಬೃಹತ್ ಪ್ರತಿಭಟನೆ ನಡೆಸಲಾಯಿತು.

- ಭಕ್ತವೃಂದ ಒಕ್ಕೊರಲ ಒತ್ತಾಯ । ತಿಮ್ಮರೋಡಿ ಮತ್ತು ಟೀಂ, ಮುಸುಕುಧಾರಿ ವಿರುದ್ಧ ಉನ್ನತ ತನಿಖೆಗಾಗಿ ಬೃಹತ್‌ ಪ್ರತಿಭಟನೆ

- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಶ್ರೀಕ್ಷೇತ್ರ ಧರ್ಮಸ್ಥಳ ಮತ್ತು ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರ ಬಗ್ಗೆ ಅಪಪ್ರಚಾರ ಮಾಡುತ್ತಿರುವವರ ವಿರುದ್ಧ ಪ್ರಕರಣ ದಾಖಲಿಸಿ, ಉನ್ನತಮಟ್ಟದ ತನಿಖೆ ನಡೆಸುವಂತೆ ಒತ್ತಾಯಿಸಿ ಶ್ರೀಕ್ಷೇತ್ರ ಧರ್ಮಸ್ಥಳ ಭಕ್ತವೃಂದದಿಂದ ನಗರದಲ್ಲಿ ಬುಧವಾರ ಪಕ್ಷಾತೀತವಾಗಿ ಬೃಹತ್ ಪ್ರತಿಭಟನೆ ನಡೆಸಲಾಯಿತು.

ನಗರದ ಶ್ರೀ ಜಯದೇವ ವೃತ್ತದಿಂದ ಕಾಂಗ್ರೆಸ್, ಬಿಜೆಪಿ ಸೇರಿದಂತೆ ರಾಜಕೀಯ ಪಕ್ಷಗಳು, ರೈತಪರ ಸಂಘಟನೆಗಳು, ಶ್ರೀ ಕ್ಷೇತ್ರದ ಭಕ್ತರು, ಹಿಂದೂಪರ ಸಂಘಟನೆಗಳು, ಧರ್ಮಸ್ಥಳದ ಭಕ್ತರು, ಪುರುಷರು, ಮಹಿಳೆಯರು, ವಿದ್ಯಾರ್ಥಿ- ಯುವಜನರು ಪ್ರತಿಭಟನೆ ನಡೆಸಿದರು. ಗಾಂಧಿ ವೃತ್ತ, ಹಳೇ ಪಿ.ಬಿ. ರಸ್ತೆ ಮಾರ್ಗವಾಗಿ ಉಪ ವಿಭಾಗಾಧಿಕಾರಿ ಕಚೇರಿ ಬಳಿ ತೆರಳಿ, ಎಸಿ ಮುಖಾಂತರ ರಾಜ್ಯ ಸರ್ಕಾರಕ್ಕೆ ಮನವಿ ಅರ್ಪಿಸಿದರು.

ಮುಖಂಡರು ಮಾತನಾಡಿ, ಶವಗಳ ಹುಡುಕಾಟದ ಪ್ರಕರಣದ ಹಿಂದಿರುವ ಕಾಣದ ಕೈಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹರಡುತ್ತಿರುವ ಮಹೇಶ ಶೆಟ್ಟಿ ತಿಮರೋಡಿ, ಗಿರೀಶ ಮಟ್ಟಣ್ಣವರ್, ಎಂ.ಡಿ. ಸಮೀರ್, ಸಂತೋಷ ಶೆಟ್ಟಿ, ಟಿ.ಜಯಂತ್, ಅಜಯ್ ಅಂಚನ್ ಇತರರನ್ನೂ ತನಿಖೆಗೊಳಪಡಿಸಬೇಕು. ಮುಸುಕುಧಾರಿ ಅನಾಮಿಕ ವ್ಯಕ್ತಿ ಸೂಚಿಸಿದ್ದಂತಹ ಸ್ಥಳಗಳಲ್ಲೆಲ್ಲಾ ಅಗೆದರೂ ಅಸ್ಥಿಪಂಜರಗಳು ಸಿಕ್ಕಿಲ್ಲ. ಈ ಹಿನ್ನೆಲೆ ಆತನ ವಿರುದ್ಧವೂ ಎಸ್ಐಟಿ ಸ್ವಯಂಪ್ರೇರಿತ ದೂರು ದಾಖಲಿಸಿ, ತನಿಖೆ ಮಾಡಿ, ಮಂಪರು ಪರೀಕ್ಷೆಗೊಳಪಡಿಸಬೇಕು ಎಂದು ಆಗ್ರಹಿಸಿದರು.

ಧರ್ಮಸ್ಥಳವು ಎಂಟು ಶತಮಾನಗಳ ಇತಿಹಾಸ ಹೊಂದಿದೆ. ಪವಿತ್ರ ಧಾರ್ಮಿಕ, ಶ್ರದ್ಧಾ ಕೇಂದ್ರವಾಗಿದೆ. ದಕ್ಷಿಣ ಕಾಶಿ ಅಂತಲೇ ನಾಮಾಂಕಿತ ಕ್ಷೇತ್ರಕ್ಕೆ ತಮಿಳುನಾಡು, ಆಂಧ್ರ, ಕೇರಳ, ಮಹಾರಾಷ್ಟ್ರ, ಗೋವಾದಿಂದ ಮೊದಲಿನಿಂದಲೂ ಭಕ್ತರು ದರ್ಶನಕ್ಕೆ ಬರುತ್ತಾರೆ. ನಿತ್ಯವೂ 50 ಸಾವಿರದಿಂದ 1 ಲಕ್ಷದಷ್ಟು ಭಕ್ತರು ಬಂದು ಹೋಗುವ ಪುಣ್ಯಕ್ಷೇತ್ರದ ಕುರಿತಂತೆ ಅಪಪ್ರಚಾರ ಇನ್ನು ಸಹಿಸುವುದಕ್ಕೆ ಸಾಧ್ಯವೇ ಇಲ್ಲ ಎಂದು ಎಚ್ಚರಿಸಿದರು.

ಕೀಳುಮಟ್ಟದ ಭಾಷೆ ಬಳಸಿ, ವೀಡಿಯೋ, ಎಐ ತಂತ್ರಜ್ಞಾನದಿಂದ ಸುಳ್ಳನ್ನೇ ಸತ್ಯವೆಂಬಂತೆ ತೋರಿಸುವ ಕೆಲಸ ಕೆಲ ಸಾಮಾಜಿಕ ಮಾಧ್ಯಮಗಳಿಂದ ಆಗುತ್ತಿದೆ. ಇದರಿಂದ ಕೋಟ್ಯಾಂತರ ಭಕ್ತರ ಭಾವನೆಗಳಿಗೆ ಧಕ್ಕೆಯಾಗುತ್ತಿದೆ. ಮುಂದಿನ ದಿನಗಳಲ್ಲಿ ಸಮಾಜದಲ್ಲಿ ಉದ್ವಿಗ್ನತೆ, ಶಾಂತಿಭಂಗಕ್ಕೂ ಇದು ಕಾರಣವಾಗಬಹುದು. ಅನಾಮಿಕ ಮುಸುಕುದಾರಿ ನೀಡಿದ ದೂರಿನ ಆಧಾರದಲ್ಲಿ ರಾಜ್ಯ ಸರ್ಕಾರ ಎಸ್ಐಟಿ ರಚಿಸಿದ್ದು, ತನಿಖೆ ಮಾಡಿಸಿದ್ದನ್ನು ಸ್ವಾಗತಿಸುತ್ತೇವೆ ಎಂದು ತಿಳಿಸಿದರು.

ತಿಮ್ಮರೋಡಿ, ಮಟ್ಟಣ್ಣವರ್, ಸಮೀರ, ಜಯಂತ, ಸಂತೋಷ, ಅಂಚನ್ ಸೇರಿದಂತೆ ಇತರರು ತಮ್ಮ ಮೊಬೈಲ್ ನಲ್ಲಿ ಸಾಕ್ಷಿಗಳಿವೆಯೆಂದು ವೇದಿಕೆ, ಸಾಮಾಜಿಕ ಜಾಲತಾಣಗಳಲ್ಲಿ ಘಂಟಾಘೋಷವಾಗಿ ಹೇಳುತ್ತಿದ್ದಾರೆ. ಕುಮಾರಿ ಸೌಜನ್ಯಾಗೆ ನ್ಯಾಯ ದೊರಕಿಸುವ ನಿಟ್ಟಿನಲ್ಲಿ ಷಡ್ಯಂತ್ರ, ಅಪಪ್ರಚಾರದ ಹಾದಿ ತುಳಿದಿದ್ದಾರೆ. ಇವರ ಹಿನ್ನೆಲೆ ಏನು, ಯಾಕೆಂಬ ಬಗ್ಗೆಯೂ ತನಿಖೆಯಾಗಬೇಕು. ಮುಸುಕುಧಾರಿಯನ್ನೂ ತನಿಖೆಗೊಳಪಡಿಸಿ, ಸತ್ಯ ಬಯಲಿಗೆ ಎಳೆಯಬೇಕು ಎಂದು ಒತ್ತಾಯಿಸಿದರು.

ದೂಡಾ ಅಧ್ಯಕ್ಷ ದಿನೇಶ ಕೆ. ಶೆಟ್ಟಿ, ಮಾಜಿ ಮೇಯರ್ ಎಸ್.ಟಿ. ವೀರೇಶ, ಮಾಜಿ ಉಪ ಮೇಯರ್ ಸೋಗಿ ಶಾಂತಕುಮಾರ, ಎಸ್.ಟಿ. ಕುಸುಮ ಶ್ರೇಷ್ಠಿ, ಅಣಬೇರು ಮಂಜುನಾಥ, ಅಣಜಿ ಚಂದ್ರಶೇಖರ, ಜಿಗಳಿ ಪ್ರಕಾಶ, ಜಯಪ್ರಕಾಶ ಮಾಗಿ, ಮಂಜುನಾಥ ಪಾಟೀಲ, ಗೌತಮ್ ಜೈನ್‌, ಚೇತನಾ ಬಾಯಿ, ಹಿಂದು-ಮುಸ್ಲಿಂ ಸೇರಿದಂತೆ ಜಾತ್ಯತೀತ, ಪಕ್ಷಾತೀತವಾಗಿ ಅಪಾರ ಸಂಖ್ಯೆಯಲ್ಲಿ ಮಹಿಳೆಯರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

- - -

-20ಕೆಡಿವಿಜಿ3, 4, 5: ದಾವಣಗೆರೆಯಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಭಕ್ತರು, ಕಾಂಗ್ರೆಸ್, ಬಿಜೆಪಿ ಮುಖಂಡರು, ರೈತ ಸಂಘಟನೆಗಳು, ಹಿಂದು-ಮುಸ್ಲಿಮರು ಪಕ್ಷಾತೀತ, ಜಾತ್ಯತೀತವಾಗಿ ಪಾಲ್ಗೊಂಡು ಪ್ರತಿಭಟನೆ ನಡೆಸಿದರು. -20ಕೆಡಿವಿಜಿ6, 7: ಸಾಮಾಜಿಕ ಜಾಲತಾಣಗಳಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ, ಧರ್ಮಾಧಿಕಾರಿ ವಿರುದ್ಧ ಅಪಪ್ರಚಾರ ಖಂಡಿಸಿ ಧರ್ಮಸ್ಥಳ ಭಕ್ತರು, ಕಾಂಗ್ರೆಸ್, ಬಿಜೆಪಿ ಮುಖಂಡರು ಪಕ್ಷಾತೀತ ಹೋರಾಟದ ನೇತೃತ್ವ ವಹಿಸಿ ಪ್ರತಿಭಟಿಸಿದರು.