ಕುರಿಗಾಹಿಗಳಿಬ್ಬರ ಮೇಲೆ ಹುಲಿ ದಾಳಿ

| Published : Feb 13 2024, 12:47 AM IST

ಸಾರಾಂಶ

ಕುರಿ ಮೇಯಿಸುತ್ತಿದ್ದವರ ಮೇಲೆ ಹುಲಿ ದಾಳಿ ನಡೆಸಿ ಗಾಯಗೊಂಡಿರುವ ಘಟನೆ ತಾಲೂಕಿನ ಶಿವಪುರ ಗ್ರಾಮದ ಬಳಿ ಸೋಮವಾರ ಮಧ್ಯಾಹ್ನ ನಡೆದಿದೆ

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ ಕುರಿ ಮೇಯಿಸುತ್ತಿದ್ದವರ ಮೇಲೆ ಹುಲಿ ದಾಳಿ ನಡೆಸಿ ಗಾಯಗೊಂಡಿರುವ ಘಟನೆ ತಾಲೂಕಿನ ಶಿವಪುರ ಗ್ರಾಮದ ಬಳಿ ಸೋಮವಾರ ಮಧ್ಯಾಹ್ನ ನಡೆದಿದೆ. ಗ್ರಾಮದ ಶಿವಯ್ಯಶೆಟ್ಟಿ, ಜವರಯ್ಯ ಗ್ರಾಮದ ಬಳಿ ಕುರಿಗಳನ್ನು ಮೇಯಿಸುತ್ತಿದ್ದ ವೇಳೆ ಹುಲಿ ಕುರಿಯ ಮೇಲೆ ದಾಳಿ ನಡೆಸಿದೆ. ಕುರಿ ಮೇಲೆ ಎರಗಿದ್ದನ್ನು ಶಿವಯ್ಯಶೆಟ್ಟಿ ಹಾಗೂ ಜವರಯ್ಯ ಹುಲಿಯತ್ತ ನೋಡುತ್ತಿದ್ದಾಗ ಹುಲಿ ಬಂದು ಇಬ್ಬರನ್ನು ಗಾಯಗೊಳಿಸಿದೆ.ಕುರಿ ಮೇಯಿಸುತ್ತಿದ್ದ ಇಬ್ಬರಲ್ಲಿ ಒಬ್ಬರ ಬೆನ್ನಿಗೆ ಗಾಯವಾದರೆ ಮತ್ತೋರ್ವನಿಗೆ ಕಾಲಿನ ಬಳಿ ಗಾಯಗೊಳಿಸಿದೆ. ಕೂಡಲೇ ಗಾಯಗೊಂಡ ಇಬ್ಬರನ್ನು ಗುಂಡ್ಲುಪೇಟೆ ಸಾರ್ವಜನಿಕ ಆಸ್ಪತ್ರೆಗೆ ದಾಖಲು ಮಾಡಿ ಪ್ರಥಮ ಚಿಕಿತ್ಸೆ ಬಳಿಕ ಹೆಚ್ಚಿನ ಚಿಕಿತ್ಸೆಗೆ ಮೈಸೂರಿನ ಆಸ್ಪತ್ರೆಗೆ ಕಳುಹಿಸಲಾಗಿದೆ ಎಂದು ಆರ್‌ಎಫ್‌ಒ ಮಂಜುನಾಥ್‌ ಹೇಳಿದ್ದಾರೆ. ಹುಲಿ ದಾಳಿಗೆ ಗಾಯಗೊಂಡಿರುವ ಶಿವಯ್ಯಶೆಟ್ಟಿ ಹಾಗೂ ಜವರಯ್ಯ ಪ್ರಾಣಾಪಾಯರಿಂದ ಪಾರಾಗಿದ್ದಾರೆ.

ಇತ್ತ ಕಾಡಿನಿಂದ ನಾಡಿನೊಳಗೆ ಕಾಡು ಪ್ರಾಣಿಗಳು ಬರುತ್ತಿದ್ದು ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದೊಳಗೆ ಹಾಗೂ ಹೊರ ಭಾಗದಲ್ಲಿ ರೆಸಾರ್ಟ್‌ ಹಾಗೂ ಹೋಂಸ್ಟೇಗಳು ನಿರ್ಮಾಣವಾಗಿರುವ ಕಾರಣ ಜಿಲ್ಲಾಡಳಿತ ಕೂಡಲೇ ರೆಸಾರ್ಟ್‌ ಹಾಗೂ ಹೋಂ ಸ್ಟೇಗಳನ್ನು ತೆರವುಗೊಳಿಸಬೇಕು ಎಂದು ಜಿಲ್ಲಾ ರೈತಸಂಘದ ಕಾರ್ಯಾಧ್ಯಕ್ಷ ಶಿವಪುರ ಗ್ರಾಪಂ ಅಧ್ಯಕ್ಷ ಮಹದೇವಪ್ಪ ಆಗ್ರಹಿಸಿದ್ದಾರೆ. ಕನ್ನಡಪ್ರಭದೊಂದಿಗೆ ಮಾತನಾಡಿ ಬಂಡೀಪುರದ ಒಳಗೆ ಹಾಗೂ ಹೊರಗೆ ಇರುವ ರೆಸಾರ್ಟ್‌,ಹೋಂ ಸ್ಟೇಗಳನ್ನು ಕೂಡಲೇ ಮುಚ್ಚಿಸುವ ಜೊತೆಗೆ ಕಾಡಂಚಿನ ಬಳಿಯ ಗಣಿಗಾರಿಕೆಗೂ ತಡೆ ಹಾಕಿದರೆ ಕಾಡು ಪ್ರಾಣಿಗಳು ನಾಡಿಗೆ ಬರುವುದಿಲ್ಲ ಎಂದಿದ್ದಾರೆ. ಬಂಡೀಪುರದೊಳಗೆ ಇರುವ ರೆಸಾರ್ಟ್‌, ಹೋಂ ಸ್ಟೇಗಳಿಂದ ವನ್ಯಜೀವಿಗಳಿಗೆ ತೊಂದರೆಯಾಗಿದೆ. ವನ್ಯಜೀವಿಗಳು ಇರಬೇಕಾದ ಸ್ಥಳದಲ್ಲಿ ರೆಸಾರ್ಟ್‌ ಹಾಗೂ ಹೋಂ ಸ್ಟೇಗಳು ತಲೆ ಎತ್ತಿರುವುದೇ ಕಾಡು ಪ್ರಾಣಿಗಳು ನಾಡಿಗೆ ಬರಲು ಕಾರಣವಾಗಿದೆ ಎಂದಿದ್ದಾರೆ. ತಾಲೂಕಿನ ಶಿವಪುರ ಬಳಿ ಹಾಡು ಹಗಲೇ ಹುಲಿ ಕುರಿಗಾಹಿಗಳಿಬ್ಬರ ಮೇಲೆ ದಾಳಿ ನಡೆಸಿ ಗಾಯಗೊಳಿಸಿರುವ ಹುಲಿಯನ್ನು ಕೂಡಲೇ ಸೆರೆ ಹಿಡಿಯಬೇಕು ಎಂದು ಆಗ್ರಹಿಸಿದ್ದಾರೆ. ಶಿವಪುರ ಸುತ್ತ ಮುತ್ತ ಹುಲಿ ಆಗಾಗ್ಗೆ ಕಾಣಿಸಿಕೊಂಡಿರುವುದು ಈ ಭಾಗದ ರೈತರು ಹಾಗೂ ಸಾರ್ವಜನಿಕರು ಆತಂಕಕ್ಕೆ ಒಳಗಾಗಿದ್ದು ಕೂಡಲೇ ಹುಲಿ ಬಂಧಿಸಬೇಕು ಎಂದು ಒತ್ತಾಯಿಸಿದರು.