ಸಾರಾಂಶ
ಅರಣ್ಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಮೇಲೆ ಹೆಜ್ಜೇನು ದಾಳಿ ಮಾಡಿರುವ ಘಟನೆ ಪೊನ್ನಂಪೇಟೆ ತಾಲೂಕಿನ ಹರಿಹರ ಗ್ರಾಮದಲ್ಲಿ ಗುರುವಾರ ನಡೆದಿದೆ. ಡಿಆರ್‌ಎಫ್‌ಒ, ಶಾರ್ಪ್ ಶೂಟರ್ ಕೆ. ಪಿ. ರಂಜನ್, ಮಾವುತ ಗುಂಡ ಅವರಿಗೆ ಹೆಜ್ಜೇನು ಕಡಿತವಾಗಿದೆ. ಮತ್ತಿಗೋಡು ಸಾಕಾನೆ ಶಿಬಿರದ ಆನೆಗಳೊಂದಿಗೆ ಹುಲಿ ಸೆರೆ ಕಾರ್ಯಾಚರಣೆ ನಡೆಯುತ್ತಿತ್ತು.
ಕನ್ನಡಪ್ರಭ ವಾರ್ತೆ ಪೊನ್ನಂಪೇಟೆ
ಹುಲಿ ಕಾರ್ಯಾಚರಣೆಗೆ ಹೋಗಿದ್ದ ಅರಣ್ಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಮೇಲೆ ಹೆಜ್ಜೇನು ದಾಳಿ ಮಾಡಿರುವ ಘಟನೆ ಕೊಡಗು ಜಿಲ್ಲೆಯ ಪೊನ್ನಂಪೇಟೆ ತಾಲೂಕಿನ ಹರಿಹರ ಗ್ರಾಮದಲ್ಲಿ ಗುರುವಾರ ನಡೆದಿದೆ.ಡಿಆರ್‌ಎಫ್‌ಒ, ಶಾರ್ಪ್ ಶೂಟರ್ ಕೆ. ಪಿ. ರಂಜನ್, ಮಾವುತ ಗುಂಡ ಅವರಿಗೆ ಹೆಜ್ಜೇನು ಕಡಿತವಾಗಿದೆ. ಮತ್ತಿಗೋಡು ಸಾಕಾನೆ ಶಿಬಿರದ ಆನೆಗಳೊಂದಿಗೆ ಹುಲಿ ಸೆರೆ ಕಾರ್ಯಾಚರಣೆ ನಡೆಯುತ್ತಿತ್ತು.
ಭೀಮ ಹಾಗೂ ಮಹೇಂದ್ರ ಆನೆಗಳೊಂದಿಗೆ ಕಾರ್ಯಾಚರಣೆ ನಡೆಸುತ್ತಿದ್ದ ಅರಣ್ಯ ಅಧಿಕಾರಿಗಳ ತಂಡ ಡಿಆರ್‌ಎಪ್‌ಒ ರಂಜನ್ ಮತ್ತು ಮಾವುತ ಗುಂಡ ಅವರಿಗೆ ಶೆಟ್ಟಿಗೇರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಡಿಕೇರಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.ಪ್ರಕರಣ ಹಿನ್ನೆಲೆ:
ಬುಧವಾರ ಪೊನ್ನಂಪೇಟೆ ತಾಲೂಕಿನ ಹರಿಹರ ಗ್ರಾಮದ ಸುಬ್ರಹ್ಮಣ್ಯ ದೇವರ ಕೆರೆಯಲ್ಲಿ ಹುಲಿ ಒಂದು ನೀರು ಕುಡಿದು ಕಾಡಿಗೆ ಹೋಗುವ ದೃಶ್ಯವನ್ನು ಸ್ಥಳೀಯರು ಒಬ್ಬರು ಸೆರೆ ಹಿಡಿದಿದ್ದರು.ಈ ಬೆನ್ನಲ್ಲೇ ಅರಣ್ಯ ಇಲಾಖೆ ಹುಲಿಯ ಚಲನವಲನಗಳನ್ನು ಪತ್ತೆಹಚ್ಚಿ ಸೆರೆ ಹಿಡಿಯಲು ಬುಧವಾರ ಕಾರ್ಯಾಚರಣೆ ನಡೆಸಲಾಗಿತ್ತು. ಗುರುವಾರ ಕೂಡ ಮತ್ತೆ ಪುನಃ ಬೆಳಗ್ಗೆ ಹುಲಿ ಸೆರೆ ಹಿಡಿಯಲು ಭೀಮ ಹಾಗೂ ಮಹೇಂದ್ರ ಆನೆಗಳ ಸಹಾಯದಿಂದ ಒಟ್ಟು 50 ಅರಣ್ಯ ಸಿಬ್ಬಂದಿ ಕಾರ್ಯಾಚರಣೆ ನಡೆಸುವ ಸಂದರ್ಭ ದಿಢೀರ್ ಆಗಿ ಹೆಜ್ಜೇನು ದಾಳಿ ಮಾಡಿದೆ.
ಘಟನೆ ನಡೆದ ನಂತರ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತ ಮಾಡಲಾಗಿದೆ. ಮಾವುತ ಕುಳ್ಳ ಹಾಗೂ ಆನೆ ಭೀಮನ ಮೇಲೆ ಕೂಡ ಹೆಜ್ಜೇನು ದಾಳಿ ಮಾಡಿದೆ ಎಂದು ತಿಳಿದುಬಂದಿದೆ.