ಹುಲಿ ಉಗುರು ಪ್ರಕರಣ ಎಫೆಕ್ಟ್: ಆತಂಕದಲ್ಲಿ ಮಲೆನಾಡಿಗರು!
KannadaprabhaNewsNetwork | Published : Oct 26 2023, 01:00 AM IST
ಹುಲಿ ಉಗುರು ಪ್ರಕರಣ ಎಫೆಕ್ಟ್: ಆತಂಕದಲ್ಲಿ ಮಲೆನಾಡಿಗರು!
ಸಾರಾಂಶ
ಹುಲಿ ಉಗುರನ್ನು ಧರಿಸುವುದು ಒಳ್ಳೆಯದು ಎಂಬ ನಂಬಿಕೆ ಸಾಮಾನ್ಯ ಜನರಲ್ಲಿ ಇದೆ
ಗೋಪಾಲ್ ಯಡಗೆರೆ ಕನ್ನಡಪ್ರಭ ವಾರ್ತೆ ಶಿವಮೊಗ್ಗ ಬಿಗ್ ಬಾಸ್ ಸ್ಪರ್ಧಿ ವರ್ತೂರು ಸಂತೋಷ್ ಹುಲಿ ಉಗುರನ್ನು ಬಂಗಾರದ ಕಟ್ಟು ಹಾಕಿ ಧರಿಸಿ, ಜೈಲು ಪಾಲಾಗಿದ್ದಾರೆ. ಇದರ ಬೆನ್ನಲ್ಲೇ ಎಲ್ಲ ಕಡೆಗಳಲ್ಲಿಯೂ ಆತಂಕದ ವಾತಾವರಣ ನಿರ್ಮಾಣವಾಗಿದೆ. ಮಲೆನಾಡಿನ ಅನೇಕ ಮನೆಗಳಲ್ಲಿ ಹಲವು ತಲೆಮಾರುಗಳಿಂದ ಬಂದಂತಹ ವನ್ಯಜೀವಿಗಳಿಗೆ ಸಂಬಂಧಿಸಿದ ಕೆಲವಾರು ವಸ್ತುಗಳು ಇದ್ದು, ಇವರಲ್ಲಿ ಗೊಂದಲ ಮೂಡಿದೆ. ಹುಲಿ ಉಗುರನ್ನು ಧರಿಸುವುದು ಒಳ್ಳೆಯದು ಎಂಬ ನಂಬಿಕೆ ಸಾಮಾನ್ಯ ಜನರಲ್ಲಿ ಇದೆ. ಇದನ್ನು ಧರಿಸಿದರೆ ಧೈರ್ಯವಂತರಾಗುತ್ತಾರೆ, ಅದೃಷ್ಟ ಒಲಿಯತ್ತೆ ಎಂಬ ನಂಬಿಕೆಯೂ ಇದೆ. ಈ ನಂಬಿಕೆಯನ್ನು ದುರುಪಯೋಗಪಡಿಸಿಕೊಂಡ ವಂಚಕರು ನಕಲಿ ಹುಲಿ ಉಗುರನ್ನು ಕೂಡ ಅಸಲಿ ಎಂದು ಹೇಳಿ ಮಾರಾಟ ಮಾಡಿದ್ದಾರೆ. ಕೆಲವರು ಅಸಲಿ ಉಗುರನ್ನು ಕೂಡ ಧರಿಸಿರಬಹುದು. ಆದರೆ, ವರ್ತೂರು ಸಂತೋಷ್ ವಿಚಾರ ಬೆಳಕಿಗೆ ಬರುತ್ತಿದ್ದಂತೆ ಹುಲಿಯುಗುರು ಅಸಲಿಯೋ, ನಕಲಿಯೋ, ಎಲ್ಲರೂ ಧರಿಸಿದ್ದನ್ನು ತಮ್ಮ ಕುತ್ತಿಗೆಯಿಂದ ತೆಗೆದಿದ್ದಾರೆ. ಈ ಸುದ್ದಿ ಜನರಲ್ಲಿ ಸಹಜವಾಗಿಯೇ ಗಾಬರಿ ಹುಟ್ಟಿಸಿದೆ. ಚಿಕ್ಕಮಗಳೂರು ಸೇರಿದಂತೆ ಹಲವೆಡೆ ಅರಣ್ಯಾಧಿಕಾರಿಗಳು ಸ್ವಯಂಪ್ರೇರಿತರಾಗಿ ದೂರು ದಾಖಲಿಸುತ್ತಿರುವುದರಿಂದ ಜನರು ಭಯಬಿದ್ದಿದ್ದಾರೆ. ಮುಂದುರಿಯಲಿರುವ ಸಮಸ್ಯೆ: ಇನ್ನೊಂದೆಡೆ ಮಲೆನಾಡಿನ ಅನೇಕ ಹಳೆಯ ಮನೆಗಳಲ್ಲಿ ಹಲವು ತಲೆಮಾರುಗಳಿಂದ ಬಂದಿರುವ ಕಾಡುಕೋಣಗಳು, ಜಿಂಕೆ ಕೋಡನ್ನು ಅಲಂಕಾರವಾಗಿ ಗೋಡೆಗಳಲ್ಲಿ ತೂಗು ಹಾಕಿದ್ದಾರೆ. ಇದರ ಬಗ್ಗೆ ಅವರಿಗೆ ಯಾವ ಮಾಹಿತಿಯೂ ಇಲ್ಲ. ಆದರೆ ಅರಣ್ಯ ಇಲಾಖೆ ಪ್ರಕಾರ ಇದು ಕಾನೂನು ಬಾಹಿರ! ಅರಣ್ಯ ಸಂರಕ್ಷಣಾ ಕಾಯ್ದೆ ಜಾರಿಗೆ ಬಂದ ಸಂದರ್ಭ ಯಾವ ಮನೆಯಲ್ಲಿ ಈ ರೀತಿಯ ವಸ್ತುಗಳು ಇವೆಯೋ ಅವುಗಳನ್ನು ಅವರು ಸರ್ಕಾರದೆದುರು ಘೋಷಿಸಿಕೊಳ್ಳಬೇಕಿತ್ತು. ಇದಕ್ಕೆ ಆಗ ಅವಕಾಶ ಕೂಡ ಮಾಡಿಕೊಡಲಾಗಿತ್ತು. ಆದರೆ, ಬಹುತೇಕ ಬಂದಿಗೆ ಇದರ ಬಗ್ಗೆ ಯಾವ ಅರಿವೂ ಇಲ್ಲ. ಈಗ ಇದನ್ನು ಘೋಷಿಸಿಕೊಳ್ಳಲು ಅವಕಾಶವೇ ಇಲ್ಲ. ಹಾಗೆಯೇ ಇಟ್ಟುಕೊಳ್ಳಲೂ ಕೂಡ ಅವಕಾಶವಿಲ್ಲ. ಈಗ ಬಹಿರಂಗಪಡಿಸಿದರೆ ಕೇಸು ಗ್ಯಾರಂಟಿ. ಸೆರಗಲ್ಲಿ ಕೆಂಡ ಕಟ್ಟಿಕೊಂಡ ಸ್ಥಿತಿ. - - - - ಫೋಟೋಗಳು: ಟೈಗರ್‌ನೈಲ್1, 2, 3.ಜೆಪಿಜಿ: (ಸಾಂದರ್ಭಿಕ ಚಿತ್ರಗಳು)