ಹುಲಿ ಉಗುರು ಧಾರಣೆ: ಶಿವಮೊಗ್ಗದಲ್ಲಿ ಯಾವುದೇ ಪ್ರಕರಣಗಳಿಲ್ಲ
KannadaprabhaNewsNetwork | Published : Oct 26 2023, 01:01 AM IST
ಹುಲಿ ಉಗುರು ಧಾರಣೆ: ಶಿವಮೊಗ್ಗದಲ್ಲಿ ಯಾವುದೇ ಪ್ರಕರಣಗಳಿಲ್ಲ
ಸಾರಾಂಶ
ಎಲ್ಲವೂ ಇಲಾಖೆ ಅನುಮತಿಯೊಂದಿಗೇ ನಡೆದಿತ್ತು
ಕನ್ನಡಪ್ರಭ ವಾರ್ತೆ ಶಿವಮೊಗ್ಗ ಬಿಗ್ ಬಾಸ್ ಸ್ಪರ್ಧಿ ವರ್ತೂರು ಸಂತೋಷ್ ಅವರು ಹುಲಿ ಉಗುರು ಧರಿಸಿ, ಬಂಧನಕ್ಕೆ ಒಳಗಾದ ಬಳಿಕ ರಾಜ್ಯದ ಇನ್ನೂ ಹಲವೆಡೆ ಇದೇ ರೀತಿಯ ಪ್ರಕರಣ ದಾಖಲಾಗಿದೆ. ಇದರ ಬೆನ್ನಲ್ಲೇ ಹುಲಿಯುಗುರು ಪೆಂಡೆಂಟ್ ಮಾದರಿಗಳ ಧಾರಣೆ ಸಂಬಂಧ ಎಲ್ಲೆಡೆ ಆತಂಕದ ವಾತಾವರಣವಿದ್ದು, ಜಿಲ್ಲೆಯಲ್ಲಿ ಮಾತ್ರ ಇದುವರೆಗೆ ಈ ರೀತಿಯ ಯಾವುದೇ ಪ್ರಕರಣ ದಾಖಲಾಗಿಲ್ಲ. ಈಗ ವಿನಯ್ ಗುರೂಜಿ ವಿಚಾರ ಮುನ್ನೆಲೆಗೆ: ಆದರೆ, ಕೆಲವು ವರ್ಷಗಳ ಹಿಂದೆ ಇಲ್ಲಿನ ಉದ್ಯಮಿ, ಪ್ರಗತಿಪರ ಕೃಷಿಕ ಅಮರೇಂದ್ರ ಕಿರೀಟಿ ಅವರು ಗೌರಿಗದ್ದೆ ವಿನಯ್ ಗುರೂಜಿ ಅವರಿಗೆ ನೀಡಿದ್ದ ಹುಲಿ ಚರ್ಮದ ವಿಚಾರ ಇದೀಗ ಮುನ್ನೆಲೆಗೆ ಬಂದಿದೆ. ಇದಕ್ಕೆ ಅಮರೇಂದ್ರ ಕಿರೀಟಿಯವರು ಸ್ಪಷ್ಟನೆ ಕೂಡ ನೀಡಿದ್ದಾರೆ. 80 ವರ್ಷಗಳ ಹಿಂದೆಯೇ ತಮ್ಮ ಪೂರ್ವಿಕರಿಂದ ಬಂದಿದ್ದ ಹುಲಿಚರ್ಮವನ್ನು 2019ರಲ್ಲಿ ಗೌರಿಗದ್ದೆ ವಿನಯ್ ಗುರೂಜಿ ಅವರಿಗೆ ನೀಡಿದ್ದರು. ಇದಕ್ಕೆ ಮೊದಲು ವನ್ಯಜೀವಿ ಡಿಎಫ್ಓ ಚಂದ್ರಶೇಖರ್ ಅವರಿಂದ ಅನುಮತಿ ಕೂಡ ಪಡೆದಿದ್ದರು. ಆದರೆ ಆ ಬಳಿಕ ಇದು ಸಾಮಾಜಿಕ ಜಾಲತಾಣಲ್ಲಿ ಚರ್ಚೆಗೆ ಒಳಗಾದ ಸಂದರ್ಭದಲ್ಲಿ ಅರಣ್ಯಾಧಿಕಾರಿಗಳ ಸಲಹೆ ಮೇರೆಗೆ 2022ರಲ್ಲಿ ಈ ಹುಲಿಚರ್ಮನ್ನು ಗುರೂಜಿ ಅವರಿಂದ ವಾಪಸ್ ಪಡೆದು ಇಲಾಖೆಗೆಯವರಿಗೆ ಹಸ್ತಾಂತರಿಸಿದ್ದರು. ಈ ವೇಳೆ ಎಲ್ಲ ಕಾನೂನು ಪ್ರಕ್ರಿಯೆಯನ್ನು ಪಾಲಿಸಿದ್ದರು. ಇದನ್ನು ಪಡೆದ ಇಲಾಖೆ ಚರ್ಮವನ್ನು ನಾಶಪಡಿಸಿದ್ದರು. ಈಗ ಹುಲಿಚರ್ಮ ನನ್ನ ಬಳಿಯಾಗಲಿ, ವಿನಯ್ ಗುರೂಜಿ ಅವರ ಬಳಿಯಾಗಲಿ ಇಲ್ಲ ಎಂದು ಕಿರೀಟಿಯವರು ಮಾಧ್ಯಮಗಳಿಗೆ ಸ್ಪಷ್ಟಪಡಿಸಿದ್ದಾರೆ. - - -