ಕಾರವಾರದ ಕ್ರೀಡಾ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಕರ್ನಾಟಕ ರಾಜ್ಯ ಫುಟ್‌ಬಾಲ್ ಸಂಸ್ಥೆ ಹಾಗೂ ಬೋಲ್ಡ್ ಆ್ಯಂಡ್ ಡೈನಾಮಿಕ್ ಸ್ಪೋರ್ಟ್ಸ್ ಕ್ಲಬ್ ಸಹಯೋಗದಲ್ಲಿ ಸೆ. 6ರಂದು ಟೈಗರ್ ಐಕೆಎಫ್ ನಮ್ಮ ಕರ್ನಾಟಕ ಫುಟ್‌ಬಾಲ್ ಟ್ರಯಲ್ಸ್ ಆಯೋಜಿಸಲಾಗುತ್ತಿದೆ.

ಕನ್ನಡಪ್ರಭ ವಾರ್ತೆ ಕಾರವಾರ

ಕಾರವಾರದ ಕ್ರೀಡಾ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಕರ್ನಾಟಕ ರಾಜ್ಯ ಫುಟ್‌ಬಾಲ್ ಸಂಸ್ಥೆ ಹಾಗೂ ಬೋಲ್ಡ್ ಆ್ಯಂಡ್ ಡೈನಾಮಿಕ್ ಸ್ಪೋರ್ಟ್ಸ್ ಕ್ಲಬ್ ಸಹಯೋಗದಲ್ಲಿ ಸೆ. 6ರಂದು ಟೈಗರ್ ಐಕೆಎಫ್ ನಮ್ಮ ಕರ್ನಾಟಕ ಫುಟ್‌ಬಾಲ್ ಟ್ರಯಲ್ಸ್ ಆಯೋಜಿಸಲಾಗುತ್ತಿದೆ ಎಂದು ಕ್ಲಬ್‌ನ ಉಪಾಧ್ಯಕ್ಷ ಲಿಯೋ ಲೇವಿಸ್ ತಿಳಿಸಿದರು.

ನಗರದ ಜಿಲ್ಲಾ ಪತ್ರಿಕಾಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಮಹತ್ವದ ಟ್ರಯಲ್ಸ್ ಮೂಲಕ ಕಾರವಾರ ಹಾಗೂ ಉತ್ತರ ಕನ್ನಡ ಜಿಲ್ಲೆಯ ಯುವ ಫುಟ್‌ಬಾಲ್ ಆಟಗಾರರಿಗೆ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಉತ್ತಮ ವೇದಿಕೆ ದೊರೆಯಲಿದೆ. ಕ್ಲಬ್ ನಿರಂತರವಾಗಿ ಸ್ಥಳೀಯ ಕ್ರೀಡಾ ಪ್ರತಿಭೆಗಳನ್ನು ಪ್ರೋತ್ಸಾಹಿಸುತ್ತಿದ್ದು, ಫುಟ್‌ಬಾಲ್‌ಗೆ ವಿಶೇಷ ಆದ್ಯತೆ ನೀಡಲಾಗುತ್ತಿದೆ. ಸ್ಥಳೀಯ ಪ್ರತಿಭೆಗಳನ್ನು ಗುರುತಿಸಿ ಮುಂದಿನ ದಿನಗಳಲ್ಲಿ ಇಂಡಿಯನ್ ಲೀಗ್ ಸೇರಿದಂತೆ ರಾಷ್ಟ್ರೀಯ ಮಟ್ಟದ ಸ್ಪರ್ಧೆಗಳಿಗೆ ಸಜ್ಜುಗೊಳಿಸುವ ನಿಟ್ಟಿನಲ್ಲಿ ತರಬೇತಿ ನೀಡಲಾಗುತ್ತಿದೆ ಎಂದು ಹೇಳಿದರು.

ಕಾರವಾರ ಹಾಗೂ ಗ್ರಾಮೀಣ ಭಾಗಗಳಲ್ಲಿ ಉತ್ತಮ ಫುಟ್‌ಬಾಲ್ ಪ್ರತಿಭೆಗಳಿದ್ದು, ಅವರಿಗೆ ಸೂಕ್ತ ಕ್ರೀಡಾಂಗಣ, ಕ್ರೀಡಾ ಕಿಟ್ ಹಾಗೂ ಅಗತ್ಯ ಮೂಲಸೌಕರ್ಯಗಳ ಕೊರತೆಯಿದೆ. ಮುಂದಿನ ದಿನಗಳಲ್ಲಿ ಗ್ರಾಮೀಣ ಭಾಗದ ಆಟಗಾರರ ಕೌಶಲ್ಯವನ್ನು ಗುರುತಿಸಿ, ಅವರಿಗೆ ಅಗತ್ಯ ತರಬೇತಿ ಮತ್ತು ಮಾರ್ಗದರ್ಶನ ನೀಡಲು ಕ್ಲಬ್ ಮುಂದಾಗಲಿದೆ ಎಂದು ಲಿಯೋ ಲೇವಿಸ್ ತಿಳಿಸಿದರು.

ಇಂಡಿಯಾ ಖೇಲೋ ಫುಟ್‌ಬಾಲ್‌ನ ಸ್ಕೌಟಿಂಗ್ ಮತ್ತು ಆಪರೇಷನ್ಸ್ ಎಕ್ಸಿಕ್ಯೂಟಿವ್ ಯಧುಕೃಷ್ಣನ್ ವಿ. ಮಾತನಾಡಿ, ಕರ್ನಾಟಕದ ಸ್ಥಳೀಯ ಫುಟ್‌ಬಾಲ್ ಪ್ರತಿಭೆಗಳಿಗೆ ಸೂಕ್ತ ವೇದಿಕೆ ಕಲ್ಪಿಸಿ ವೃತ್ತಿಪರ ಅವಕಾಶಗಳನ್ನು ಒದಗಿಸುವ ಉದ್ದೇಶದಿಂದ ಇಂಡಿಯಾ ಖೇಲೋ ಫುಟ್‌ಬಾಲ್ ಹಾಗೂ ಕರ್ನಾಟಕ ರಾಜ್ಯ ಫುಟ್‌ಬಾಲ್ ಸಂಸ್ಥೆ ಜಂಟಿಯಾಗಿ ರಾಜ್ಯದ 12 ಜಿಲ್ಲೆಗಳಲ್ಲಿ ಬೃಹತ್ ಫುಟ್‌ಬಾಲ್ ಸ್ಕೌಟಿಂಗ್ ಮತ್ತು ಟ್ರಯಲ್ಸ್ ಕಾರ್ಯಕ್ರಮ ಹಮ್ಮಿಕೊಂಡಿವೆ ಎಂದರು.

ಈ ಕಾರ್ಯಕ್ರಮ ಕೇವಲ ಟ್ರಯಲ್ಸ್‌ಗೆ ಸೀಮಿತವಾಗಿಲ್ಲ. ಪ್ರತಿಭಾವಂತ ಆಟಗಾರರಿಗೆ ವೃತ್ತಿಪರ ಫುಟ್‌ಬಾಲ್ ಲೋಕಕ್ಕೆ ಪ್ರವೇಶಿಸಲು ಅಗತ್ಯವಾದ ಮಾರ್ಗದರ್ಶನ ಹಾಗೂ ಅವಕಾಶಗಳನ್ನು ಕಲ್ಪಿಸುವ ಮಹತ್ವದ ವೇದಿಕೆಯಾಗಿದೆ ಎಂದು ಹೇಳಿದರು.

ಇಲ್ಲಿಯವರೆಗೆ ಬೆಂಗಳೂರು ನಗರಕ್ಕೆ ಹೆಚ್ಚಿನ ಮಟ್ಟದಲ್ಲಿ ಸೀಮಿತವಾಗಿದ್ದ ಫುಟ್‌ಬಾಲ್ ಸ್ಕೌಟಿಂಗ್ ಪ್ರಕ್ರಿಯೆಯನ್ನು ವಿಕೇಂದ್ರೀಕರಿಸಿ, ರಾಜ್ಯದ ವಿವಿಧ ಭಾಗಗಳಲ್ಲಿರುವ ಸ್ಥಳೀಯ ಪ್ರತಿಭೆಗಳನ್ನು ಗುರುತಿಸಿ ಅವರನ್ನು ಉನ್ನತ ಮಟ್ಟಕ್ಕೆ ಬೆಳೆಸುವುದು ಈ ಅಭಿಯಾನದ ಪ್ರಮುಖ ಉದ್ದೇಶವಾಗಿದೆ. ಅಧಿಕೃತ ಹಾಗೂ ಪಾರದರ್ಶಕ ವೇದಿಕೆಯ ಮೂಲಕ ಪ್ರತಿಭಾವಂತ ಆಟಗಾರರಿಗೆ ಅವಕಾಶ ಕಲ್ಪಿಸಿ ಕರ್ನಾಟಕದ ಫುಟ್‌ಬಾಲ್ ಭವಿಷ್ಯವನ್ನು ಮತ್ತಷ್ಟು ಬಲಪಡಿಸುವುದು ಪಾಲುದಾರ ಸಂಸ್ಥೆಗಳ ಗುರಿಯಾಗಿದೆ ಎಂದು ಯಧುಕೃಷ್ಣನ್ ವಿ. ಹೇಳಿದರು.

ಕ್ಲಬ್ ಅಧ್ಯಕ್ಷ ಪಿ.ವಿ. ಪ್ರಜಿತ್, ಉಪಾಧ್ಯಕ್ಷ ಆಂಟನಿ ಡಿಕೋಸ್ಟಾ, ಸಂಯೋಜಕ ಸ್ಯಾಮ್ಸನ್ ಜಾನ್ ಡಿಸೋಜಾ, ಕಾರ್ಯದರ್ಶಿ ಅಕ್ವಿಲ್ ಫರ್ನಾಂಡಿಸ್, ಜಂಟಿ ಕಾರ್ಯದರ್ಶಿ ಕ್ರಿಸ್ಟೋಫರ್ ಡಿಸಿಲ್ವಾ, ಖಜಾಂಚಿ ಅಲ್ಫಾನ್ಸೊ ಫರ್ನಾಂಡಿಸ್ ಹಾಗೂ ನೋಯೆಲ್ ಕೊಯೆಲ್ಹೋ ಇದ್ದರು.