ವಿರಾಜಪೇಟೆ ಪಟ್ಟಣದಲ್ಲಿ ಹುಲಿ ಪ್ರತ್ಯಕ್ಷ ಪ್ರಕರಣ: ಕಾರ್ಯಾಚರಣೆ ತಂಡಕ್ಕೆ ಸುಳಿವು

| Published : Dec 20 2024, 12:45 AM IST

ಸಾರಾಂಶ

ಹುಲಿ ಸಂಚಾರ ಕಂಡು ಬಂದಿರುವ ಹಿನ್ನೆಲೆ ಬುಧವಾರ ಬೆಳ್ಳಂಬೆಳಗ್ಗೆ ಯಿಂದ ಅರಣ್ಯ ಇಲಾಖೆ ಕಾರ್ಯಾಚರಣೆ ಆರಂಭಿಸಿದೆ.

ಕನ್ನಡಪ್ರಭ ವಾರ್ತೆ ವಿರಾಜಪೇಟೆ

ವಿರಾಜಪೇಟೆ ಪಟ್ಟಣ ಪ್ರದೇಶದಲ್ಲಿ ಹುಲಿ ಸಂಚಾರ ಕಂಡು ಬಂದಿರುವ ಬೆನ್ನಲ್ಲೇ ಬುಧವಾರ ಬೆಳ್ಳಂಬೆಳಗ್ಗೆಯಿಂದ ಅರಣ್ಯ ಇಲಾಖೆ ಕಾರ್ಯಚರಣೆ ಆರಂಭಿಸಿದ್ದು, ರಾಜ್ಯ ವನ್ಯಜೀವಿ ಸಂರಕ್ಷಣಾ ಮಂಡಳಿ ಸದಸ್ಯ ಸಂಕೇತ್ ಪೂವಯ್ಯ ಅವರು ಕಾರ್ಯಾಚರಣೆಯ ಪ್ರಗತಿಯನ್ನು ಸ್ಥಳದಲ್ಲಿ ಪರಿಶೀಲನೆ ನಡೆಸುತ್ತಿದ್ದಾರೆ.

ಗುರುವಾರ ಹುಲಿ ಕಾರ್ಯಾಚರಣೆ ಎರಡನೇ ದಿನವಾಗಿದ್ದು ಕುಕ್ಲೂರು ಗ್ರಾಮದ ಅಯ್ಯಪ್ಪ ದೇವ ಕಾಡಿನಲ್ಲಿ ಕಾಡು ಹಂದಿಯನ್ನು ಹಿಡಿದು ಭಾಗಶಃ ಹುಲಿ ತಿಂದಿರುವುದು ಕಂಡು ಬಂದಿದೆ.

ಇದರಿಂದ ಹುಲಿ ಸುತ್ತಮುತ್ತಲಲ್ಲೇ ಇರುವ ಸುಳಿವು ಸ್ಪಷ್ಟವಾಗಿ ಕಾರ್ಯಾಚರಣೆ ತಂಡಕ್ಕೆ ದೊರೆತಿದ್ದು ಬಹು ಎಚ್ಚರಿಕೆಯಿಂದ ಕಾರ್ಯಾಚರಣೆಯನ್ನು ಮುಂದುವರಿಸಿದೆ ಎಂದು ಸಂಕೇತ್ ಪೂವಯ್ಯ ತಿಳಿಸಿದ್ದಾರೆ.

ಹುಲಿಯನ್ನು ಗ್ರಾಮದಿಂದ ಮಾಕುಟ್ಟ ಅರಣ್ಯ ಪ್ರದೇಶಕ್ಕೆ ಅಥವಾ ನಾಂಗಲ ಗ್ರಾಮದಿಂದ ಬ್ರಹ್ಮಗಿರಿ ಅರಣ್ಯ ಪ್ರದೇಶಕ್ಕೆ ಅಟ್ಟಲು ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಕಾರ್ಯಾಚರಣೆ ಉಸ್ತುವಾರಿ ವಹಿಸಿರುವ ಸಂಕೇತ್ ಪೂವಯ್ಯ ಅವರು ಮಾಹಿತಿ ನೀಡಿದರು.

ಕಾಫಿ ಕಟಾವು ಸಮಯವಾಗಿರುವುದರಿಂದ ಬೆಳೆಗಾರರಿಗೆ ಬೆಳೆ ನಷ್ಟವಾಗಬಾರದೆಂಬ ಹಿತಾದೃಷ್ಟಿಯಿಂದ ಹಾಗೂ ಗ್ರಾಮಸ್ಥರ ಅಭಿಪ್ರಾಯದಂತೆ ಕಾಡಾನೆಗಳನ್ನು ತೋಟದೊಳಗೆ ಕಾರ್ಯಾಚರಣೆಗೆ ಬಳಸುತ್ತಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ಇದಲ್ಲದೆ ಹುಲಿ ಕುಕ್ಲೂರು ಗ್ರಾಮದ ಅಯ್ಯಪ್ಪ ದೇವ ಕಾಡಿನಲ್ಲಿ ಇರುವ ಶಂಕೆ ಹೆಚ್ಚಾಗಿದ್ದು ಕಾರ್ಯಾಚರಣೆ ಹಾಗೂ ಪಟಾಕಿ ಸಿಡಿಸಿ ಹುಲಿ ಸ್ಥಳದಿಂದ ಕದಡುವ ಪ್ರಯತ್ನ ಮಾಡಲಾಗುತ್ತಿದೆ. ಪಟ್ಟಣದಲ್ಲಿ ಜನಸಂಚಾರ ಹಾಗೂ ಜನದಟ್ಟಣೆ ಹೆಚ್ಚಾಗಿರುವುದರಿಂದ ಮುಂದಿನ ಎರಡು ದಿನ ಜನರು, ಶಾಲಾ ಮಕ್ಕಳು ಎಚ್ಚರಿಕೆ ವಹಿಸಬೇಕು. ಹುಲಿಯನ್ನು ಅರಣ್ಯಕ್ಕೆ ಅಟ್ಟಲು ಎಲ್ಲ ರೀತಿಯಲ್ಲಿ ಪ್ರಯತ್ನ ನಡೆಸಲಾಗುತ್ತಿದೆ ಎಂದು ಸಂಕೇತ್ ಪೂವಯ್ಯ ತಿಳಿಸಿದ್ದಾರೆ.

ಕಾವೇರಿ ಶಾಲೆಯಿಂದ ಮಡಿಕೇರಿ ವಿರಾಜಪೇಟೆ ರಸ್ತೆ ಅಯ್ಯಪ್ಪ ದೇವ ಕಾಡು ಕುಕ್ಲೂರು ಗ್ರಾಮ ಆಯಕಟ್ಟಿನಲ್ಲಿ ಸುಮಾರು 30ಕ್ಕೂ ಅಧಿಕ ಹುಲಿ ಟ್ರ್ಯಾಪ್ ಕ್ಯಾಮರಾ ಅಳವಡಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.

ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಕ್ಷೇತ್ರ ಶಾಸಕರಾದ ಎ. ಎಸ್. ಪೊನ್ನಣ್ಣ ಅವರು ಸ್ಪಷ್ಟ ನಿರ್ದೇಶನ ನೀಡಿದ್ದು, ಕಾರ್ಯಾ ಚರಣೆಯಿಂದ ಹುಲಿ ಅರಣ್ಯಕ್ಕೆ ವಾಪಸ್ ಆಗದಿದ್ದರೆ ಅರವಳಿಕೆಯನ್ನು ನೀಡಿ ಹುಲಿ ಸೆರೆಗೆ ಅಗತ್ಯ ಕ್ರಮ ಕೈಗೊಂಡು ಹುಲಿಯನ್ನು ಪುನರ್ವಸತಿ ಕೇಂದ್ರಕ್ಕೆ ಬಿಡಲು ಸೂಚನೆ ನೀಡಿರುವುದಾಗಿಯೂ ಅವರು ತಿಳಿಸಿದರು.

ಈಗಾಗಲೇ ಕಾರ್ಯಾಚರಣೆ ದೇವಕಾಡು, ಕಾಫಿ ತೋಟಗಳಲ್ಲಿ ನಡೆಯುತ್ತಿದ್ದು ಹುಲಿಯು ಹೆಜ್ಜೆ ಗುರುತು ಅನುಸರಿಸಿ ಹುಲಿ ಇರುವ ಸುಳಿವು ಪತ್ತೆಹಚ್ಚಲು ಎಲ್ಲ ರೀತಿಯಲ್ಲಿ ಪ್ರಯತ್ನಿಸಲಾಗುತ್ತಿದೆ ಎಂದು ವಿವರಿಸಿದರು. ವಿರಾಜಪೇಟೆ ಉಪ ಅರಣ್ಯ ಸಂರಕ್ಷಣಾಧಿಕಾರಿ ಜಗನ್ನಾಥ್, ವಲಯ ಅರಣ್ಯ ಅಧಿಕಾರಿ ಶಿವರಾಮ್, ಉಪವಲಯ ಅರಣ್ಯ ಅಧಿಕಾರಿ ದೇವಯ್ಯ ಮತ್ತು ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದಾರೆ.