ಸಾರಾಂಶ
ಚನ್ನಾಪುರ ಗ್ರಾಮದಲ್ಲಿ ಹುಲಿ ಸಂಚಾರದ ಗುರುತು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಕೃಷಿಕರಲ್ಲಿ ಆತಂಕ ಮೂಡಿದೆ.
ಕನ್ನಡಪ್ರಭ ವಾರ್ತೆ ಸೋಮವಾರಪೇಟೆ
ಗೌಡಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚನ್ನಾಪುರ ಗ್ರಾಮದಲ್ಲಿ ಹುಲಿ ಸಂಚಾರದ ಗುರುತು ಪತ್ತೆಯಾಗಿರುವ ಹಿನ್ನೆಲೆ ಸುತ್ತಮುತ್ತಲ ಗ್ರಾಮದ ಕೃಷಿಕರಲ್ಲಿ ಆತಂಕ ಮೂಡಿದೆ.ಭಾನುವಾರ ರಾತ್ರಿ ೮ ಗಂಟೆಯ ಸುಮಾರಿಗೆ ಚನ್ನಾಪುರ ಗ್ರಾಮದ ಕೆರೆಯ ತಟದ ರಸ್ತೆಯಲ್ಲಿ ಹುಲಿ ಸಂಚರಿಸಿದ ಬಗ್ಗೆ ಅರಣ್ಯ ಇಲಾಖೆಗೆ ಪ್ರತ್ಯಕ್ಷದರ್ಶಿಗಳು ದೂರು ನೀಡಿದ್ದರು. ಬೆಳಗ್ಗೆ ಶನಿವಾರಸಂತೆ ಅರಣ್ಯ ಇಲಾಖೆಯ ಡಿಆರ್‌ಎಫ್ ಸೂರ್ಯ ಮತ್ತು ಸಿಬ್ಬಂದಿ, ಗ್ರಾಮಸ್ಥರ ಸಹಕಾರದಿಂದ ಹುಲಿಯ ಹೆಜ್ಜೆ ಗುರುತನ್ನು ಪತ್ತೆ ಹಚ್ಚಿದ್ದಾರೆ. ನಂತರ ಗ್ರಾಮದ ರಸ್ತೆಯ ಬದಿಯಲ್ಲಿ ಸಿ.ಸಿ. ಕ್ಯಾಮೆರಾಗಳನ್ನು ಅಳವಡಿಸಿ, ಹುಲಿಯ ಚಲನವಲನ ಪತ್ತೆಗೆ ಕ್ರಮ ಕೈಗೊಂಡಿದ್ದಾರೆ.
ಚನ್ನಾಪುರ ಕೆರೆ ಏರಿಯ ರಸ್ತೆಯಲ್ಲಿ ಕಾರು ನಿಲ್ಲಿಸಿಕೊಂಡು ಪ್ರದೀಪ್ ಗಾಂಧಿ ಮತ್ತು ಸಿ.ಎಲ್. ವೆಂಕಟೇಶ್ ಮಾತನಾಡುತ್ತಿದ್ದ ಸಂದರ್ಭ ಹುಲಿ ಕಂಡಿದೆ. ಹುಲಿ ನೋಡಿದ ಇವರು ಗ್ರಾಮದ ಕುಟುಂಬಗಳಿಗೆ ಕರೆ ಮಾಡಿ, ಮನೆಯಿಂದ ಹೊರಬರದಂತೆ ಹಾಗೂ ರಸ್ತೆಯಲ್ಲಿ ತಿರುಗಾಡದಂತೆ ಎಚರಿಸಿದ್ದಾರೆ.ಅನೇಕರ ಮನೆಗಳಲ್ಲಿ ಹಸುಗಳನ್ನು ಅಂಗಳದಲ್ಲೇ ಕಟ್ಟಿದ್ದರು. ಅದೃಷ್ಟವಶಾತ್ ಹುಲಿ ದಾಳಿ ಮಾಡಿಲ್ಲ. ಸಿ.ಎ.ಕೃಷ್ಣಪ್ಪ ಅವರ ಮನೆಯ ರಸ್ತೆಯಲ್ಲೇ ಹುಲಿ ತೆರಳಿ, ಕಾಫಿ ತೋಟ ಸೇರಿಕೊಂಡಿದೆ. ಗೌಡಳ್ಳಿ ಗ್ರಾಮ ಪಂಚಾಯಿತಿ ವತಿಯಿಂದ ಸೋಮವಾರ ಬೆಳಗ್ಗೆ ಧ್ವನಿ ವರ್ಧಕದ ಮೂಲಕ ನಿವಾಸಿಗಳು ದನಕರುಗಳೊಂದಿಗೆ ಹೊರಹೋಗದಂತೆ ಎಚ್ಚರಿಕೆ ಸಂದೇಶ ನೀಡಲಾಗಿದೆ.