ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಗೆ 4 ಬಾರಿ ಅವಕಾಶ

| Published : Mar 19 2025, 12:31 AM IST

ಸಾರಾಂಶ

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ಸರ್ವ ಪಕ್ಷಗಳ ಪ್ರತಿನಿಧಿಗಳ ಸಭೆಯಲ್ಲಿ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಮಾತನಾಡಿದರು.

ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಭೆಯಲ್ಲಿ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಹೇಳಿಕೆಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಭಾರತ ಚುನಾವಣಾ ಆಯೋಗವು ಪ್ರಜಾಪ್ರತಿನಿಧಿ ಕಾಯ್ದೆ 1950ರ ಸೆಕ್ಷನ್ 14ಕ್ಕೆ ತಿದ್ದುಪಡಿ ಮಾಡಿ ಮತದಾರರ ನೋಂದಣಿ ನಿಯಮಗಳು 1960ಕ್ಕೆ ಅನುಗುಣವಾಗಿ ಮತದಾರರ ಪಟ್ಟಿಗೆ ಹೆಸರುಗಳನ್ನು ಸೇರ್ಪಡೆ ಮಾಡಲು ವರ್ಷಕ್ಕೆ ನಾಲ್ಕು ಅರ್ಹತಾ ದಿನಾಂಕಗಳನ್ನು ನೀಡಿ ಅವಕಾಶ ಕಲ್ಪಿಸಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಟಿ.ವೆಂಕಟೇಶ್ ತಿಳಿಸಿದರು.

ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಮಂಗಳವಾರ ನೋಂದಾಯಿತ ಹಾಗೂ ಮಾನ್ಯತೆ ಪಡೆದ ಎಲ್ಲ ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು,

ಜನವರಿ 1ನೇ, ಏಪ್ರಿಲ್ 1ನೇ, ಜುಲೈ1 ಹಾಗೂ ಅಕ್ಟೋಬರ್ 1ಕ್ಕೆ 18 ವರ್ಷ ಪೂರ್ಣಗೊಳ್ಳುವವರು ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ಮಾಡಬಹುದು.

ಹೆಸರು ಕೈಬಿಟ್ಟು ಹೋಗಿರುವವರು ಹಾಗೂ ಮತದಾರರ ಪಟ್ಟಿಯಲ್ಲಿ ಮಾಹಿತಿಯನ್ನು ತಿದ್ದುಪಡಿ ಮಾಡಿಸಬೇಕಾದಲ್ಲಿ ಮತ್ತು ಅದೇ ವಿಧಾನಸಭಾ ಕ್ಷೇತ್ರದ ಬೇರೆ ಮತಗಟ್ಟೆಗೆ ವರ್ಗಾಯಿಸಬೇಕಾಗಿದ್ದಲ್ಲಿ ನಿಗದಿಪಡಿಸಿರುವ ನಮೂನೆಗಳಲ್ಲಿ ಅರ್ಜಿ ಭರ್ತಿ ಮಾಡಿ, ತಮ್ಮ ವ್ಯಾಪ್ತಿಯ ಮತದಾನ ಕೇಂದ್ರದಲ್ಲಿ, ತಾಲೂಕು ಕಚೇರಿಯಲ್ಲಿ, ಉಪವಿಭಾಗಾಧಿಕಾರಿಗಳ ಕಾರ್ಯಾಲಯದಲ್ಲಿ ನೀಡಿ ಸ್ವೀಕೃತಿ ಪಡೆಯಬಹುದಾಗಿದೆ ಎಂದು ತಿಳಿಸಿದರು.

ನಮೂನೆ-6 ಹೊಸದಾಗಿ ಹೆಸರುಗಳನ್ನು ಸೇರಿಸುವುದಕ್ಕೆ ಭಾವಚಿತ್ರದೊಂದಿಗೆ ಅರ್ಜಿ ಸಲ್ಲಿಸಬೇಕು. ನಮೂನೆ-7 ಹೆಸರುಗಳನ್ನು ಕೈಬಿಡಲು ಮತ್ತು ಆಕ್ಷೇಪಣೆ ಅರ್ಜಿ, ನಮೂನೆ-8 ಮತದಾರರ ಪಟ್ಟಿಯಲ್ಲಿ ಮಾಹಿತಿ ತಪ್ಪಾಗಿದ್ದಲ್ಲಿ ತಿದ್ದುಪಡಿ ಬಗ್ಗೆ ಹಾಗೂ ಬೇರೆ ಮತಗಟ್ಟೆಗೆ ವರ್ಗಾಯಿಸಬೇಕಾಗಿದ್ದಲ್ಲಿ, ಎಪಿಕ್ ಕಾರ್ಡ್ ಬದಲಾಯಿಸಲು, ವಿಕಲಚೇತನ ಮತದಾರರನ್ನು ಗುರುತು ಮಾಡಲು ಭಾವಚಿತ್ರದೊಂದಿಗೆ ಅರ್ಜಿ ಸಲ್ಲಿಸಬೇಕು ಎಂದು ಹೇಳಿದರು.

ಮತದಾನ ಕೇಂದ್ರಗಳಲ್ಲಿ ನೇಮಕಗೊಂಡಿರುವ ನಿರ್ಧಿಷ್ಠಾಧಿಕಾರಿಗಳಿಗೆ, ಮತಗಟ್ಟೆ ಅಧಿಕಾರಿಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ. 2025ರ ಜ.06ರಂದು ಪ್ರಚುರ ಪಡಿಸಿದ ಅಂತಿಮ ಮತದಾರರ ಪಟ್ಟಿಯನ್ನು ಮತಗಟ್ಟೆ ಕೇಂದ್ರ, ಗ್ರಾಪಂ ಕಚೇರಿ, ನಗರಸಭೆ, ಪುರಸಭೆ ಹಾಗೂ ಪಟ್ಟಣ ಪಂಚಾಯಿತಿ, ತಾಲೂಕು ಕಚೇರಿ, ಉಪ ವಿಭಾಗಾಧಿಕಾರಿಗಳ ಕಚೇರಿ ಹಾಗೂ www.ceokarnataka.kar.nic.in, https://chitradurga.nic.in ವೆಬ್‍ಸೈಟ್‍ನಲ್ಲಿಯೂ ಸಹ ಪರಿಶೀಲಿಸಿಕೊಂಡು ಪಟ್ಟಿಯಲ್ಲಿ ಹೆಸರು ಇಲ್ಲದಿದ್ದಲ್ಲಿ ಪೂರಕ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬಹುದು. ಅರ್ಜಿಗಳನ್ನು ವೋಟರ್ ಹೆಲ್ಪ್‍ಲೈನ್‌ನಲ್ಲಿ ಆನ್‍ಲೈನ್ ಮೂಲಕವೂ ಸಲ್ಲಿಸಬಹುದಾಗಿದೆ ಎಂದು ತಿಳಿಸಿದರು.

ವಯಸ್ಸಿನ ಬಗ್ಗೆ ದಾಖಲೆಗಾಗಿ ಸಕ್ಷಮ ಸ್ಥಳೀಯ ಸಂಸ್ಥೆ, ಪುರಸಭಾ ಪ್ರಾಧಿಕಾರ, ಜನನ ಮತ್ತು ಮರಣಗಳ ರಿಜಿಸ್ಟ್ರಾರರು ನೀಡಿದ ಜನನ ಪ್ರಮಾಣ ಪತ್ರ, ಆಧಾರ್ ಕಾರ್ಡ್, ಪ್ಯಾನ್‍ಕಾರ್ಡ್, ಡ್ರೈವಿಂಗ್ ಲೈಸೆನ್ಸ್, ಜನ್ಮ ದಿನಾಂಕ ಹೊಂದಿದ ಸಿಬಿಎಸ್‍ಸಿ, ಐಸಿಎಸ್‍ಇ, ರಾಜ್ಯ ಶಿಕ್ಷಣ ಮಂಡಳಿಗಳು ನೀಡಿದ 10ನೇ ತರಗತಿ ಅಥವಾ 12ನೇ ತರಗತಿಯ ಪ್ರಮಾಣ ಪತ್ರಗಳನ್ನು ವಯಸ್ಸಿನ ದಾಖಲೆಗಾಗಿ ನೀಡಬಹುದಾಗಿದೆ.

ವಿಳಾಸದ ಬಗ್ಗೆ ದಾಖಲೆಗಾಗಿ ಕನಿಷ್ಠ 1 ವರ್ಷದ ನೀರು, ವಿದ್ಯುತ್‍ಚ್ಛಕ್ತಿ, ಗ್ಯಾಸ್ ಸಂಪರ್ಕದ ಬಿಲ್, ಆಧಾರ್ ಕಾರ್ಡ್, ರಾಷ್ಟ್ರೀಕೃತ, ಶೆಡ್ಯೂಲ್ಡ್ ಬ್ಯಾಂಕ್, ಅಂಚೆ ಕಚೇರಿಯ ಚಾಲ್ತಿಯಲ್ಲಿರುವ ಪಾಸ್‍ಬುಕ್, ಪಾಸ್‍ಪೋರ್ಟ್, ಕಿಸಾನ್ ವಹಿಯನ್ನೊಳಗೊಂಡ ಕಂದಾಯ ಇಲಾಖೆಯ ಭೂ ಮಾಲೀಕತ್ವದ ದಾಖಲೆಗಳು, ನೋಂದಾಯಿತ ಬಾಡಿಗೆ ಭೋಗ್ಯ ಪತ್ರ, ನೋಂದಾಯಿತ ಕ್ರಯ ಪತ್ರ ವಿಳಾಸದ ಬಗ್ಗೆ ದಾಖಲೆಯನ್ನು ನೀಡಬಹುದಾಗಿದೆ ಎಂದು ತಿಳಿಸಿದರು.

ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಮಾತನಾಡಿ, ಜಿಲ್ಲೆಯ ಎಲ್ಲ ವಿಧಾನಸಭಾ ಕ್ಷೇತ್ರದ ಎಲ್ಲಾ ಮತಗಟ್ಟೆಗಳಲ್ಲಿ ಮತಗಟ್ಟೆ ಏಜೆಂಟ್‍ರನ್ನು ಪಕ್ಷವಾರು ನೇಮಕಾತಿ ಮಾಡಬೇಕು, ನೇಮಕಾತಿ ಮಾಡಿರುವ ಮತಗಟ್ಟೆ ಏಜೆಂಟರವರ ಮಾಹಿತಿಯನ್ನು ಮತಗಟ್ಟೆವಾರು ಸಲ್ಲಿಸುವಂತೆ ರಾಜಕೀಯ ಪಕ್ಷಗಳ ಮುಖಂಡರಿಗೆ ತಿಳಿಸಿದರು.

ಈ ವೇಳೆ ಉಪವಿಭಾಗಾಧಿಕಾರಿ ಮಹಬೂಬ್ ಜಿಲಾನಿ ಖುರೇಷಿ, ಬಿಜೆಪಿ ಜಿಲ್ಲಾ ಕಾರ್ಯಕಾರಿಣಿ ಸದಸ್ಯ ಟಿ.ಯಶವಂತ್ ಕುಮಾರ್, ಜಿಲ್ಲಾ ಜೆಡಿಎಸ್ ಜಿಲ್ಲಾ ಮಹಾ ಪ್ರಧಾನ ಕಾರ್ಯದರ್ಶಿ ಡಿ.ಗೋಪಾಲಸ್ವಾಮಿ ನಾಯಕ, ಜಿಲ್ಲಾ ಕಾಂಗ್ರೆಸ್ ಸಮಿತಿ ಪ್ರಧಾನ ಕಾರ್ಯದರ್ಶಿ ಡಿ.ಎನ್.ಮೈಲಾರಪ್ಪ, ಕಾರ್ಯದರ್ಶಿ ಸಿ.ಜೆ.ನಾಸಿರುದ್ದೀನ್, ಸಿಪಿಐ(ಎಂ) ಡಿಒಸಿ ಸಿ.ಕೆ.ಗೌಸ್‍ಪೀರ್ ಸೇರಿ ಚುನಾವಣಾ ತಹಸೀಲ್ದಾರ್ ಮಲ್ಲಿಕಾರ್ಜುನ ನಾಯಕ ಸೇರಿ ಚುನಾವಣಾ ಶಾಖೆ ಸಿಬ್ಬಂದಿ ಇದ್ದರು.