ಸಾರಾಂಶ
ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ, ಶ್ರೀ ವೀರಭದ್ರ ಸ್ವಾಮಿ ಮಹಾರಥೋತ್ಸವದಲ್ಲಿ ಜಾನಪದ ಸಮ್ಮೇಳನ
ಕನ್ನಡಪ್ರಭ ವಾರ್ತೆ, ಬಾಳೆಹೊನ್ನೂರುರೂಪ ಮತ್ತು ರೂಪಾಯಿ ತುಂಬಾ ದಿನ ಉಳಿಯುವುದಿಲ್ಲ. ಮನುಷ್ಯನ ಒಳ್ಳೆಯತನ ಮಾತ್ರ ಚಿರಕಾಲ ನೆನಪಿನಲ್ಲಿ ಉಳಿಯುತ್ತದೆ. ಭೌತಿಕ ಸಂಪತ್ತು ನಿಜವಾದ ಸಂಪತ್ತೆಂದು ತಿಳಿದವರು ಬಹಳ ಜನ. ಆದರೆ ಸಮಯ ಸ್ನೇಹ ಮತ್ತು ಆರೋಗ್ಯ ಜೀವನದ ಅಮೂಲ್ಯ ಸಂಪತ್ತು ಎಂಬುದನ್ನು ಮರೆಯಬಾರದು ಎಂದು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರು ಅಭಿಪ್ರಾಯಪಟ್ಟರು.
ರಂಭಾಪುರಿ ಪೀಠದಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ ಹಾಗೂ ಕ್ಷೇತ್ರನಾಥ ಶ್ರೀ ವೀರಭದ್ರ ಸ್ವಾಮಿ ಮಹಾರಥೋತ್ಸವ ಅಂಗವಾಗಿ ಗುರುವಾರ ನಡೆದ ಜಾನಪದ ಸಮ್ಮೇಳನದ ಸಾನ್ನಿಧ್ಯವಹಿಸಿ ಆಶೀರ್ವಚನ ನೀಡಿದರು. ಮನೆಯ ಅಂಗಳದ ಕಸ ನಾವಾಗಲಿ ಬೇರೆಯವರಾಗಲಿ ಹಸನಗೊಳಿಸಬಹುದು. ಆದರೆ ಮನದಂಗಳದ ಕಸವನ್ನು ನಾವೇ ಹಸನ ಮಾಡಿಕೊಳ್ಳಬೇಕಾಗುತ್ತದೆ. ಜೀವನದಲ್ಲಿ ಗುರಿ ಮತ್ತು ಗುರು ಬಹಳ ಮುಖ್ಯ. ಹಣ ಕೆಟ್ಟಚಟ ಕಲಿಸುತ್ತದೆ. ಹಸಿವು ಬದುಕಿನ ಪಾಠ ಕಲಿಸುತ್ತದೆ. ಹಣ ಮಾನವೀಯತೆ ಮರೆಸುತ್ತದೆ. ಆದರೆ ಹಸಿವು ಅರಿವು ಮೂಡಿಸುವ ಕಾರ್ಯ ಮಾಡುತ್ತದೆ. ಚಿನ್ನವನ್ನು ಉಜ್ಜಿದಷ್ಟು ಹೊಳಪು ಹೆಚ್ಚುತ್ತದೆ ಎಂದು ಅಭಿಪ್ರಾಯಪಟ್ಟರು.ಜೀವನದಲ್ಲಿ ಬರುವ ಪ್ರತಿಯೊಂದು ಕಷ್ಟದ ಸಂದರ್ಭವೂ ನಮ್ಮ ವ್ಯಕ್ತಿತ್ವಕ್ಕೆ ಮೆರಗು ನೀಡುತ್ತದೆ. ಪ್ರಪಂಚದಲ್ಲಿ ಬೆಲೆ ಕಟ್ಟಲು ಆಗದ ವಸ್ತು ಅಂದರೆ ನಂಬಿಕೆ. ಅದನ್ನು ಸಂಪಾದಿಸಲು ವರ್ಷಗಳೇ ಬೇಕಾಗುತ್ತವೆ. ಆದರೆ ಕಳೆದುಕೊಳ್ಳಲು ಕ್ಷಣ ಮಾತ್ರ ಸಾಕು. ಕೆಟ್ಟ ಅಭ್ಯಾಸಗಳು ಇರುವವನನ್ನು ಬದಲಿಸಬಹುದು. ಆದರೆ ಕೆಟ್ಟ ಯೋಚನೆಗಳು ಇರುವವನನ್ನು ಬದಲಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದರು.ನಮ್ಮ ನಾಡಿನ ಜಾನಪದ ಜ್ಞಾನ ಅಮೂಲ್ಯ ಸಂಪತ್ತು. ಓದು ಬರಹ ಬರಲಾರದ ಎಷ್ಟೋ ಜನರು ಜಾನಪದ ಸಂಪತ್ತನ್ನು ಸಂಪಾದಿಸಿರುವುದನ್ನು ಕಾಣುತ್ತೇವೆ. ನೈತಿಕ ಮತ್ತು ಸಾಮಾಜಿಕ ಮೌಲ್ಯಗಳನ್ನು ಜಾನಪದ ಸಾಹಿತ್ಯದಲ್ಲಿ ಕಾಣಬಹುದು. ಜಾನದ ಉತ್ತಮ ಸಾಹಿತ್ಯವನ್ನು ಉಳಿಸಿ ಇನ್ನಷ್ಟು ಬೆಳೆಸುವ ಕಾರ್ಯ ಎಲ್ಲರಿಂದಲೂ ಆಗಬೇಕೆಂದರು.ಜಾನಪದ ಮೇಳ ಉದ್ಘಾಟಿಸಿದ ಚಿತ್ರದುರ್ಗದ ಉದ್ಯಮಿ ಪಟೇಲ್ ಶಿವಕುಮಾರ ಮಾತನಾಡಿ, ಹೂಗಳಿಂದ ತುಂಬಿದ ತೋಟ ಎಷ್ಟು ಸುಂದರವಾಗಿರುತ್ತದೋ ಒಳ್ಳೆಯ ಆಲೋಚನೆಗಳಿಂದ ತುಂಬಿದ ಮನಸ್ಸು ಸಹ ಅಷ್ಟೇ ಸುಂದರವಾಗಿರುತ್ತದೆ. ಸಂತೋಷದಲ್ಲಿ ತಬ್ಬಿಕೊಳ್ಳುವ ಸಂಬಂಧಗಳು ತಾತ್ಕಾಲಿಕ. ಕಷ್ಟದಲ್ಲಿದ್ದಾಗ ತಬ್ಬಿಕೊಳ್ಳುವ ಸಂಬಂಧ ಶಾಶ್ವತ. ವಸ್ತುವಿನ ಬೆಲೆ ಕೊಳ್ಳುವುದಕ್ಕೆ ಮೊದಲೇ ತಿಳಿದುಕೊಳ್ಳುತ್ತೇವೆ. ಮನುಷ್ಯನ ಬೆಲೆ ಕಳೆದುಕೊಂಡ ನಂತರ ತಿಳಿದುಕೊಳ್ಳುತ್ತದೆ. ಜಾನಪದ ಸಾಹಿತ್ಯದಲ್ಲಿ ಸಂಬಂಧಗಳ ಬೆಸುಗೆ ಮತ್ತು ಮಾನವೀಯತೆ ಆದರ್ಶ ಮೌಲ್ಯಗಳನ್ನು ಕಾಣಬಹುದು ಎಂದು ಹೇಳದರು.ದೇವದುರ್ಗ ಶಿಖರಮಠದ ಕಪಿಲಸಿದ್ಧ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮಿ ಕಲ್ಯಾಣ ಕರ್ನಾಟಕ ಭಾಗದಲ್ಲಿ ಗುರು ಪರಂಪರೆ ಮಹತ್ವವನ್ನು ವೀರಶೈವ ಧರ್ಮ ಸಂಸ್ಕೃತಿ ಬಿತ್ತರಿಸುತ್ತಿರುವ ಮಹತ್ಕಾರ್ಯ ಮಾಡುತ್ತಿರುವ ಹಿನ್ನೆಲೆಯಲ್ಲಿ ಅವರಿಗೆ ವೀರಶೈವ ಸಂಸ್ಕೃತಿ ಸಂವರ್ಧನ ರತ್ನ ಎಂಬ ಪದವಿ ನೀಡಲಾಯಿತು.ನೇತೃತ್ವ ವಹಿಸಿದ ಹಂಪಸಾಗರ ನವಲಿ ಹಿರೇಮಠದ ಅಭಿನವ ಶಿವಲಿಂಗ ರುದ್ರಮುನಿ ಶಿವಾಚಾರ್ಯರು ಮಾತನಾಡಿ, ಕೆಟ್ಟ ದಿನಗಳು ಇದ್ದ ಮಾತ್ರಕ್ಕೆ ಜೀವನವೇ ಕೆಟ್ಟದ್ದಾಗಬೇಕೆಂದಿಲ್ಲ. ರಾತ್ರಿ ಕಳೆದು ಹಗಲು ಬರುವಂತೆ ಒಳ್ಳೆಯ ದಿನಗಳು ಬಂದೇ ಬರುತ್ತವೆ. ಸಮಯ ಎಲ್ಲವನ್ನು ಬದಲಾಯಿಸುತ್ತದೆ. ಆದರೆ ನೆನಪುಗಳು ಯಾವತ್ತೂ ಬದಲಾಗಲ್ಲ. ಸೂರ್ಯನ ಕಿರಣಗಳು ಕೊಳಕು ಇರುವ ಜಾಗಕ್ಕೆ ಹೋಗುತ್ತವೆ. ಆದರೆ ಕೊಳಕಾಗುವುದಿಲ್ಲ. ಬದುಕಿನಲ್ಲಿ ಸೂರ್ಯನ ಕಿರಣಗಳಂತೆ ಮನುಷ್ಯ ಆಗ ಬೇಕು. ಯಾವ ಜಾಗಕ್ಕೆ ಹೋದರೂ ಯಾರ ಜೊತೆ ಇದ್ದರೂ ನಾವು ನಾವಾಗಿರಬೇಕು. ಕೊಳಕಾಗಬಾರದು. ಜೀವನದ ನೀತಿ ಬೋಧೆಯನ್ನು ಜಾನಪದ ಸಾಹಿತ್ಯದಿಂದ ತಿಳಿಯಲು ಸಾಮಾನ್ಯರಿಗೂ ಸಾಧ್ಯವಾಗುತ್ತದೆ ಎಂದರು.
ಇಳಾಲ್ ಗದ್ದೆಯ ಅನುಶ್ರೀ ಆದಿಗೌಡ ಭರತ ನಾಟ್ಯ ಪ್ರದರ್ಶನ, ಶಂಕ್ರಯ್ಯ ಗವಾಯಿ ಅವರಿಂದ ಸಂಗೀತ ಸೇವೆ ನಡೆಯಿತು. ಸಮಾರಂಭಕ್ಕೂ ಮುನ್ನ ಚಿಗುರೊಳ್ಳಿ ಶ್ರೀ ನಂದೀಶ್ವರ ದೇವಸ್ಥಾನದಲ್ಲಿ ಕೆಂಡಾರ್ಚನೆ ನೆರವೇರಿತು. ಬೆಳಿಗ್ಗೆ ಶಯನೋತ್ಸವ, ಜಗದ್ಗುರು ಶಿವಾನಂದ ಕಾಫಿ ಎಸ್ಟೇಟಿನಲ್ಲಿ ವನದುರ್ಗ ಚೌಡೇಶ್ವರಿ ಮಂದಿರದಲ್ಲಿ ನಡೆಯಿತು.ಕೊಗಳಿಯ ಎಚ್.ಎಸ್.ಶಂಕರಯ್ಯ, ನಂದಿಬೇವೂರಿನ ವೀರೇಶ, ಸೋಮಲಾಪುರದ ವೀರಣ್ಣ ಅಂಗಡಿ, ಹರಪನಹಳ್ಳಿ ತೆಗ್ಗಿನ ಮಠ ಸಂಸ್ಥಾನದ ವರಸದ್ಯೋಜಾತ ಶಿವಾಚಾರ್ಯರು, ಅಲಮೇಲ ಹಿರೇಮಠದ ಚಂದ್ರಶೇಖರ ಶಿವಾಚಾರ್ಯರು ಸೇರಿದಂತೆ ದಾನಿಗಳಿಗೆ, ಸೇವಾಕರ್ತರಿಗೆ ಶ್ರೀ ರಂಭಾಪುರಿ ಜಗದ್ಗುರು ಗುರುರಕ್ಷೆ ನೀಡಿ ಆಶೀರ್ವದಿಸಿದರು. ಮುಕ್ತಿಮಂದಿರ, ಎಡೆಯೂರು, ಮಳಲಿ, ಹೂಲಿ, ಅಮ್ಮಿನಬಾವಿ, ಸಿಂಧನೂರು, ಸಂಗೊಳ್ಳಿ, ಬೇರುಗಂಡಿ, ದೋರನಹಳ್ಳಿ, ಅಚಲೇರಿ, ದೊಡ್ಡಸಗರ, ಎಮ್ಮಿಗನೂರು ಶ್ರೀಗಳು ಸೇರಿದಂತೆ ನಾಡಿನ ವಿವಿಧ ಮಠಗಳ ಶಿವಾಚಾರ್ಯರು ಗುರುಲಿಂಗಯ್ಯ ಹಿರೇಮಠ ಹಿತ್ತಲ ಶಿರೂರು, ಪ್ರಕಾಶ ಬೆಂಡಿಗೇರಿ, ಬಿಳಿಕಿ ಹಿರೇಮಠದ ರಾಚೋಟೇಶ್ವರ ಶಿವಾಚಾರ್ಯ ಸ್ವಾಮಿ ಉಪಸ್ಥಿತರಿದ್ದರು.
೧೩ಬಿಹೆಚ್‌ಆರ್ ೫: ಬಾಳೆಹೊನ್ನೂರು ರಂಭಾಪುರಿ ಪೀಠದಲ್ಲಿ ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವದ ಅಂಗವಾಗಿ ನಡೆದ ಜಾನಪದ ಸಮ್ಮೇಳನವನ್ನು ರಂಭಾಪುರಿ ಜಗದ್ಗುರುಗಳ ನೇತೃತ್ವದಲ್ಲಿ ಉದ್ಯಮಿ ಪಟೇಲ್ ಶಿವಕುಮಾರ ಉದ್ಘಾಟಿಸಿದರು.