ಸಹಾಯಕ ಸಚಿವೆಯಾಗಿ ನಾನು ಮೊದಲ ಬಾರಿಗೆ ಪ್ರಮಾಣ ವಚನ ಸ್ವೀಕರಿಸುವಾಗ, ಕಿಕ್ಕಿರಿದ ಆ ಕೋಣೆಯಲ್ಲಿದ್ದ ಮಹಿಳೆಯರ ಸಂಖ್ಯೆ ಕೇವಲ ಬೆರಳೆಣಿಕೆಯಷ್ಟು.

ಶೋಭಾ ಕರಂದ್ಲಾಜೆ

ಸಹಾಯಕ ಸಚಿವೆಯಾಗಿ ನಾನು ಮೊದಲ ಬಾರಿಗೆ ಪ್ರಮಾಣ ವಚನ ಸ್ವೀಕರಿಸುವಾಗ, ಕಿಕ್ಕಿರಿದ ಆ ಕೋಣೆಯಲ್ಲಿದ್ದ ಮಹಿಳೆಯರ ಸಂಖ್ಯೆ ಕೇವಲ ಬೆರಳೆಣಿಕೆಯಷ್ಟು. ಆ ದೃಶ್ಯವು ಸಾರ್ವಜನಿಕ ಕ್ಷೇತ್ರದಲ್ಲಿ ಮಹಿಳೆಯರು ಇನ್ನೂ ಕ್ರಮಿಸಬೇಕಾದ ದೂರವನ್ನು ಸೂಚಿಸುತ್ತಿತ್ತು. ನಾನು ಸಾಂಸ್ಕೃತಿಕವಾಗಿ ಶ್ರೀಮಂತವಾದ ಕರಾವಳಿ ಕರ್ನಾಟಕದ ಪುತ್ತೂರು ಬಳಿಯ ಒಂದು ಸಣ್ಣ ಹಳ್ಳಿಗೆ ಸೇರಿದವಳು. ಅಲ್ಲಿ ಮಹಿಳೆಯರು ಸದೃಢರು ಮತ್ತು ಶಕ್ತಿವಂತೆಯರು. ಆ ಶಕ್ತಿಯನ್ನು ಸಾರ್ವಜನಿಕ ಜೀವನಕ್ಕೆ ತರುವುದು ಕೆಲವೇ ಕೆಲವರು. ಪ್ರತಿಯೊಬ್ಬರೂ ಇಂಥ ಅವಕಾಶ ಪಡೆಯುವುದು ಎಷ್ಟು ಕಷ್ಟವೆಂಬುದು ನನಗೆ ತಿಳಿದಿದೆ. ಹಾಗಾಗಿ, ಮಹಿಳೆಯರನ್ನು ಹೆಚ್ಚಿನ ಸಂಖ್ಯೆಯಲ್ಲಿ ಇಂಥ ಸ್ಥಾನಕ್ಕೆ ತರುವ ಉದ್ದೇಶದಿಂದ ನಾರಿ ಶಕ್ತಿ ವಂದನ ಅಧಿನಿಯಮವನ್ನು ಅಂಗೀಕರಿಸಲಾಗಿದೆ. ಸಂಸತ್ತು 2023ರ ಸೆಪ್ಟೆಂಬರ್‌ನಲ್ಲಿ ಈ ಬಗ್ಗೆ ಚರ್ಚಿಸಿ, ಸಂವಿಧಾನ ತಿದ್ದುಪಡಿ ಮಾಡಲಾಗಿದೆ. ಆದರೆ ಈಗ ಅತ್ಯಂತ ಸವಾಲಿನ ಭಾಗ. ಅದನ್ನು ಜಾರಿಗೊಳಿಸುವುದು. ಮಹಿಳೆಯರಿಗೆ ಸಮಾನ ಅವಕಾಶ ಭಾರತವು 67 ಕೋಟಿ ಮಹಿಳೆಯರಿಗೆ ನೆಲೆಯಾಗಿದೆ. ಆದರೆ ಸುದೀರ್ಘ ವರ್ಷಗಳಿಂದ, ನಮ್ಮ ಮಹಿಳಾ ಶಾಸಕರು ಆ ಜನಸಂಖ್ಯೆಯಲ್ಲಿ ಕೇವಲ ಶೇ.15ರಷ್ಟನ್ನು ಮಾತ್ರ ಪ್ರತಿನಿಧಿಸಿದ್ದಾರೆ. ನಿರ್ಧಾರ ಕೈಗೊಳ್ಳುವ ಪ್ರಕ್ರಿಯೆಯಿಂದ ತನ್ನ ಅರ್ಧದಷ್ಟು ನಾಗರಿಕರನ್ನು ನಿರಂತರವಾಗಿ ಹೊರಗಿಡುವ ಪ್ರಜಾಪ್ರಭುತ್ವವನ್ನು ನೈಜ ಪ್ರಜಾಪ್ರಭುತ್ವ ಎಂದು ಪರಿಗಣಿಸಲಾಗದು. ನಾರಿ ಶಕ್ತಿ ವಂದನ ಅಧಿನಿಯಮವು ಇದನ್ನು ಸರಿಪಡಿಸುವ ನಿಟ್ಟಿನಲ್ಲಿ ಒಂದು ಮಹತ್ವದ ಹೆಜ್ಜೆಯಾಗಿದೆ. ಆದರೆ ಅದನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸದ ಹೊರತು ಅದು ಕಾಗದದ ಮೇಲಿನ ಕಾನೂನಾಗಿ ಮಾತ್ರ ಉಳಿಯುತ್ತದೆ. ಯಾವುದೇ ಮೌಲ್ಯವನ್ನು ಪಡೆಯುವುದಿಲ್ಲ. ಹಾಗಾಗಿ ಕ್ಷೇತ್ರ ಪುನರ್ವಿಂಗಡಣೆ ನಡೆಯಬೇಕು, ಮುಂದಿನ ಹಂತವಾಗಿ ಸಂಸತ್ತು ಮತ್ತು ಪ್ರತಿ ರಾಜ್ಯ ವಿಧಾನಸಭೆಯ ಮೂರನೇ ಒಂದರಷ್ಟು ಸ್ಥಾನಗಳನ್ನು ಮಹಿಳೆಯರು ಅಲಂಕರಿಸುತ್ತಾರೆ.ಕಾನೂನುಗಳನ್ನು ರೂಪಿಸುವ ಪ್ರಕ್ರಿಯೆಯಲ್ಲಿ ಮಹಿಳೆಯರನ್ನು ಸೇರಿಸಿಕೊಂಡಾಗ, ಹಲವು ಸಕಾರಾತ್ಮಕ ಬದಲಾವಣೆಗಳಾಗುತ್ತವೆ. ದಶಕಗಳ ಹಿಂದೆ ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿಯನ್ನು ಜಾರಿಗೆ ತಂದಿದ್ದ ಪಂಚಾಯತ್ ರಾಜ್ ಸಂಸ್ಥೆಗಳಲ್ಲಿ ಸಾಕಷ್ಟು ಉತ್ತಮ ಬದಲಾವಣೆಗಳಾಗಿವೆ. ನೀರು, ಆರೋಗ್ಯ, ಶಿಕ್ಷಣ ಮತ್ತು ಮಕ್ಕಳ ಪೋಷಣೆಗೆ ಹೆಚ್ಚಿನ ನಿಧಿಯನ್ನು ಮೀಸಲಿಡಲಾಗಿದೆ. ಭ್ರಷ್ಟಾಚಾರಕ್ಕೆ ವಿರೋಧ ಮತ್ತು ಸಮುದಾಯಗಳಿಗೆ ಹೆಚ್ಚಿನ ಉತ್ತರದಾಯಿತ್ವ ಕಾಣಬಹುದಾಗಿದೆ. ಇದು ಮಹಿಳಾ ಪ್ರಾತಿನಿಧ್ಯದ ನೈಜ ಸಾಕಾರತೆ. ತಡೆಗೋಡೆ ತೊಡೆಯುವ ಕಾನೂನು: ಮಹಿಳೆಯರು ತಮ್ಮದೇ ಆದ ಅರ್ಹತೆಯ ಮೇಲೆ ಮೇಲೇರಬೇಕು ಎಂಬ ವಾದವನ್ನು ಕೇಳಿದ್ದೇನೆ. ಆ ಭಾವನೆಯನ್ನು ನಾನು ಗೌರವಿಸುತ್ತೇನೆ. ಆದರೆ ನಾನು ಪ್ರಮೇಯವನ್ನು ತಿರಸ್ಕರಿಸುತ್ತೇನೆ. ನಿರ್ವಾತದಲ್ಲಿ ಅರ್ಹತೆ ಅಸ್ತಿತ್ವದಲ್ಲಿರಲು ಸಾಧ್ಯವಿಲ್ಲ. ಅವಕಾಶಗಳು ಇರುವಲ್ಲಿ ಮಾತ್ರ ಅದು ಪ್ರವರ್ಧಮಾನಕ್ಕೆ ಬರುತ್ತದೆ. ತಲೆಮಾರುಗಳಿಂದಲೂ ಸಾಮಾಜಿಕ, ಆರ್ಥಿಕ ಮತ್ತು ಸಾಂಸ್ಕೃತಿಕ ರಚನಾತ್ಮಕ ಅಡೆತಡೆಗಳು ಪ್ರತಿಭಾವಂತ ಮಹಿಳೆಯರನ್ನು ರಾಜಕೀಯದಿಂದ ದೂರವಿರಿಸಿವೆ. ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಯಲ್ಲಿ ಸದಾ ಪ್ರಭಾವಶಾಲಿಗಳಿಗೆ, ಉತ್ತಮ ಸಂಪರ್ಕಗಳನ್ನು ಹೊಂದಿರುವವರಿಗೆ, ಆನುವಂಶಿಕವಾಗಿ ರಾಜಕೀಯ ಬಂಡವಾಳವುಳ್ಳವರಿಗೆ ಮಾತ್ರ ಆದ್ಯತೆ ದೊರೆಯುತ್ತದೆ. ಆದರೆ, ಹೆಚ್ಚಿನ ಮಹಿಳೆಯರು ಈ ಯಾವ ಅನುಕೂಲಗಳನ್ನೂ ಹೊಂದಿರುವುದಿಲ್ಲ. ಹಾಗಾಗಿ ಮಹಿಳಾ ಮೀಸಲಾತಿಯು ಅರ್ಹತೆಯನ್ನು ಕಡಿಮೆ ಮಾಡುವುದಿಲ್ಲ, ಅದು ತಡೆಗೋಡೆಯನ್ನು ತೊಡೆದುಹಾಕುತ್ತದೆ. ಮಹಿಳೆಯರಿಗೆ ನ್ಯಾಯಯುತ ಅವಕಾಶ ನೀಡಿದಾಗ, ಅವರು ಕೇವಲ ಭಾಗವಹಿಸುವುದಿಲ್ಲ, ಬದಲಾಗಿ ಮುನ್ನಡೆಸುತ್ತಾರೆ.ಮಹಿಳಾ ಧ್ವನಿಗೆ ಶಕ್ತಿ ತರುವ ಕಾರ್ಯ: ನಿರ್ಧಾರ ಕೈಗೊಳ್ಳುವ ಸಮಯದಲ್ಲಿ ಆ ಜಾಗದಲ್ಲಿ ಯಾರಿದ್ದಾರೆ ಎಂಬುದು ಅಲ್ಲಿ ಏನು ಚರ್ಚಿಸಲಾಗುತ್ತದೆ ಎಂಬುದನ್ನು ನಿರ್ಧರಿಸುತ್ತದೆ. ಸರ್ಕಾರದಲ್ಲಿ ನನ್ನ ವ್ಯಾಪಕ ಅನುಭವದಿಂದ ಈ ಮಾತನ್ನು ಹೇಳುತ್ತಿದ್ದೇನೆ. ಮಹಿಳಾ ಶಾಸಕರು ತಾಯಿಯ ಆರೋಗ್ಯ ನಿಧಿಯನ್ನು ಕಡಿತಗೊಳಿಸಿದಾಗ ಅದರ ಮರುಜಾರಿಗೆ ಒತ್ತಾಯಿಸುತ್ತಾರೆ. ಸರ್ಕಾರದ ನೀತಿಗಳ ಅನುಷ್ಠಾನದಲ್ಲಿ ಮಹಿಳೆಯರ ಪಾಲಿಗೆ ಕಠಿಣವೆನಿಸುವ ಕ್ರಮಗಳ ವಿರುದ್ಧ ದನಿ ಎತ್ತುತ್ತಾರೆ. ಪುರುಷ ಸಹೋದ್ಯೋಗಿಗಳು ತಲೆಕೆಡಿಸಿಕೊಳ್ಳದ ಕ್ಷೇತ್ರದ ಕಳವಳಗಳತ್ತ ಮಹಿಳೆಯರು ಗಮನ ಹರಿಸುತ್ತಾರೆ. ಸಂಸತ್ತು ಮತ್ತು ವಿಧಾನಸಭೆಗಳಲ್ಲಿ ಶೇ.33ರಷ್ಟು ಮೀಸಲಾತಿ ನೀಡಿದರೆ ಇದೇ ಮೊದಲ ಬಾರಿಗೆ ಈ ಧ್ವನಿಗಳಿಗೆ ಶಕ್ತಿ ಬರಲಿದೆ. ಮಹಿಳೆಯರ ಸಂಪೂರ್ಣ ಮತ್ತು ಸಮಾನ ಭಾಗವಹಿಸುವಿಕೆಯಿಲ್ಲದೆ ಭಾರತವು ತನ್ನ ಪೂರ್ಣ ಸಾಮರ್ಥ್ಯವನ್ನು ಅರಿತುಕೊಳ್ಳಲು ಸಾಧ್ಯವಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿಯವರು ಹೇಳುತ್ತಾ ಬಂದಿದ್ದಾರೆ. ಇದು ಕೇವಲ ಅವರ ಮಾತಿನಲ್ಲಿ ಉಳಿದಿಲ್ಲ. ಬದಲಿಗೆ ‘ಬೇಟಿ ಬಚಾವೋ ಬೇಟಿ ಪಡಾವೋ’, ‘ಜನ್ ಧನ್’, ‘ಉಜ್ವಲಾ’ ಮತ್ತು ‘ಪಿಎಂ ಆವಾಸ್ ಯೋಜನೆ’ಗಳಂತಹ ಕ್ರಮಗಳನ್ನು ಅನುಷ್ಠಾನಕ್ಕೆ ತಂದಿದ್ದಾರೆ. ಮಹಿಳೆಯರನ್ನು ದಾಖಲೆಯ ಮಟ್ಟದಲ್ಲಿ ಸೇರ್ಪಡೆಗೊಳಿಸುವ ಮೂಲಕ ಪ್ರತಿ ನೀತಿಯನ್ನು ದೃಢ ನಿಶ್ಚಯದಿಂದ ಮುನ್ನಡೆಸಿದ್ದಾರೆ. ಅವರು ನಾರಿ ಶಕ್ತಿಯನ್ನು ‘ವಿಕಸಿತ ಭಾರತ’ದ ಅಡಿಪಾಯ ಎಂದು ಹೇಳುತ್ತಾರೆ. ನಾರಿ ಶಕ್ತಿ ವಂದನ ಅಧಿನಿಯಮವು ಆ ದೃಷ್ಟಿಕೋನದ ಸಂಪೂರ್ಣ ಅಭಿವ್ಯಕ್ತಿಯಾಗಿದೆ. ಮಹಿಳಾ ಮೀಸಲು ನೀತಿಯೆಂಬುದು ನಮ್ಮೆಲ್ಲರಿಗೂ ಸೇರಿದ್ದು. ಯಾವುದೇ ಒಂದು ಪಕ್ಷಕ್ಕೆ ಸೀಮಿತವಾದುದಲ್ಲ. ಸರ್ಕಾರದಲ್ಲಿದ್ದು, ಈ ರಾಷ್ಟ್ರಕ್ಕೆ ಸೇವೆ ಸಲ್ಲಿಸಿದ ಮಹಿಳೆಯಾಗಿ ನಾನು ಮನವಿ ಮಾಡುತ್ತೇನೆ. ಇಂಥ ಕಾನೂನನ್ನು ಜಾರಿಗೆ ತರುವುದು ನಮ್ಮ ದೇಶದ ಹಿತದೃಷ್ಟಿಯಿಂದ ಅತ್ಯಗತ್ಯ. ಇದಕ್ಕೆ ನಾವೆಲ್ಲರೂ ಒಮ್ಮತದಿಂದ ಬೆಂಬಲ ಸೂಚಿಸುವುದು ಅಗತ್ಯ. ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ವಿಧಾನಸಭೆ ಮತ್ತು ಸಂಸತ್ತನ್ನು ಪ್ರವೇಶಿಸುವಂತೆ ಮಾಡಲು ಸರ್ಕಾರ ಈ ಕ್ರಮಕ್ಕೆ ಮುಂದಾಗಿದೆ. ಸರ್ಕಾರದ ತತ್ವವು ಸದೃಢವಾಗಿದೆ. ಅದು ಜಾರಿಗೆ ಬರಬೇಕಾದ ಅವಶ್ಯಕತೆಯೂ ತುರ್ತಾಗಿದೆ. ಇಂಥ ಅಮೂಲ್ಯ ನೀತಿಯಿಂದ ಸ್ತ್ರೀಯರು ವಂಚಿತರಾಗುವಂತೆ ಮಾಡಲು ನಾವು ಬಿಡಬಾರದು.

2023ರ ಸೆಪ್ಟೆಂಬರ್‌ನಲ್ಲಿ ಈ ಮಸೂದೆಯನ್ನು ಅಂಗೀಕರಿಸಿ ಇತಿಹಾಸ ನಿರ್ಮಿಸಲಾಯಿತು. ಆದರೆ ಅದರ ನಂತರ ನಡೆಯಬೇಕಾದ ಪ್ರಕ್ರಿಯೆ ನಡೆದರಷ್ಟೇ ಅದು ಪರಿಪೂರ್ಣವಾಗಲಿದೆ. ತನ್ನ ದೇಶಕ್ಕೆ ಸೇವೆ ಸಲ್ಲಿಸಲು ಬಯಸುವ ಯಾವುದೇ ಮಹಿಳೆಗೆ ಧ್ವನಿ ದೊರಕಿಸಿಕೊಡಲು ನಾವು ಕಾರ್ಯಪ್ರವೃತ್ತರಾಗುವ ಸಮಯ ಈಗ ಬಂದಿದೆ.