ಮತದಾರರು ಅನುಭವಿಸಿದ ದೌರ್ಜನ್ಯಕ್ಕೆ ಅಂತ್ಯ ಕಾಲವಿದು: ಕೆ.ಪಿ. ಕುಮಾರ್

| Published : Apr 08 2024, 01:00 AM IST

ಸಾರಾಂಶ

ತಮ್ಮ ಸುದೀರ್ಘ ಸೇವಾ ವೃತ್ತಿಯಲ್ಲಿ ಒಂದೇ ಒಂದು ಕಪ್ಪು ಚುಕ್ಕೆಯಿಲ್ಲದೆ ದೀನ, ದಲಿತರ, ಬಡವರ ಆರೋಗ್ಯ ಕಾಪಾಡಿರುವ ಸಹೃದಯವಂತ ಮಂಜುನಾಥ್ ರವರ ಸ್ಪರ್ಧೆಯಿಂದ ಕಾಂಗ್ರೆಸ್ ಪಕ್ಷಕ್ಕೆ ನಡುಕ ಉಂಟಾಗಿದೆ.

ಕನ್ನಡಪ್ರಭ ವಾರ್ತೆ ಕನಕಪುರ

ಕಳೆದ ಮೂವತ್ತು ವರ್ಷಗಳಿಂದ ಕ್ಷೇತ್ರದ ಮತದಾರರು ಅನುಭವಿಸಿದ ದೌರ್ಜನ್ಯಕ್ಕೆ ಅಂತ್ಯದ ಕಾಲ ಡಾ. ಮಂಜುನಾಥ್ ರೂಪದಲ್ಲಿ ಬಂದಿದೆ ಎಂದು ಬಿಜೆಪಿ ಪಕ್ಷದ ಗ್ರಾಮಾಂತರ ಮಂಡಲ ಅಧ್ಯಕ್ಷ ಕೆ.ಪಿ. ಕುಮಾರ್ ತಿಳಿಸಿದರು.

ನಗರದಲ್ಲಿ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ. ಮಂಜುನಾಥ್ ರ ಧರ್ಮಪತ್ನಿ ಅನುಸೂಯರವರು ನಡೆಸಿದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ತಾಲೂಕಿನ ಜನರು ಕಳೆದ ಮೂವತ್ತು ವರ್ಷಗಳಿಂದ ನಿರಂತರ ದೌರ್ಜನ್ಯ, ದಬ್ಬಾಳಿಕೆಯ ಆಡಳಿತದಿಂದ ಬೇಸತ್ತು ಹೋಗಿದ್ದು, ಈ ಬಾರಿ ಮಂಜುನಾಥ್ ರು ನಮಗೆ ಅಭ್ಯರ್ಥಿಯಾಗಿ ದೊರೆತಿರುವುದು ಒಂದು ಸೌಭಾಗ್ಯವೇ ಆಗಿದೆ. ಕ್ಷೇತ್ರದ ಜನರನ್ನು ಭಯ ಮುಕ್ತ ಗೊಳಿಸಲು ಇವರನ್ನು ಧರ್ಮಸ್ಥಳ ಮಂಜುನಾಥ ಸ್ವಾಮಿಯೇ ನಮ್ಮ ಬಳಿ ಕಳಿಸಿದಂತಾಗಿದ್ದು, ನಮ್ಮ ತಾಲೂಕಿನ ಪ್ರಬುದ್ಧ ಜನತೆ ಹಣ, ಆಮಿಷಕ್ಕೆ ಬಲಿಯಾಗದೇ ಅಭೂತಪೂರ್ವ ಬೆಂಬಲ ನೀಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ತಾಲೂಕು ಜೆಡಿಎಸ್ ಪಕ್ಷದ ಅಧ್ಯಕ್ಷ ಬಿ. ನಾಗರಾಜು ಮಾತನಾಡಿ, ತಮ್ಮ ಸುದೀರ್ಘ ಸೇವಾ ವೃತ್ತಿಯಲ್ಲಿ ಒಂದೇ ಒಂದು ಕಪ್ಪು ಚುಕ್ಕೆಯಿಲ್ಲದೆ ದೀನ, ದಲಿತರ, ಬಡವರ ಆರೋಗ್ಯ ಕಾಪಾಡಿರುವ ಸಹೃದಯವಂತ ಮಂಜುನಾಥ್ ರವರ ಸ್ಪರ್ಧೆಯಿಂದ ಕಾಂಗ್ರೆಸ್ ಪಕ್ಷಕ್ಕೆ ನಡುಕ ಉಂಟಾಗಿದೆ. ಮತದಾರರ ಒಲವು ಮಂಜುನಾಥ್ ರ ಪರ ವ್ಯಕ್ತವಾಗುತ್ತಿರುವುದನ್ನು ನೋಡಿ ವಿಚಲಿತರಾಗಿರುವ ಕಾಂಗ್ರೆಸ್ ಪಕ್ಷವು, ಬಿಜೆಪಿ-ಜೆಡಿಎಸ್ ಪಕ್ಷದ ಮುಖಂಡರಿಗೆ ಹಣದ ಆಮಿಷದ ಜೊತೆಗೆ ಬೆದರಿಕೆ ಹಾಕುವ ಮೂಲಕ ಅವರನ್ನು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಳಿಸಿಕೊಳ್ಳುತ್ತಿದ್ದಾರೆ. ಅವರಿಗೆ ಸೋಲು ಖಚಿತ ಎಂಬುದು ಗೊತ್ತಾಗಿದ್ದು, ಹಣದ ಆಮಿಷ, ಬೆದರಿಕೆಯಿಂದ ಮುಖಂಡರನ್ನು ಸೆಳೆಯಬಹುದೇ ಹೊರತು ಪ್ರಬುದ್ಧ ಮತದಾರರನ್ನು ಖರೀದಿಸಲು ಅವರಿಂದ ಸಾಧ್ಯವಿಲ್ಲ ಎಂದರು.

ಜೆಡಿಎಸ್ ಯುವ ಮುಖಂಡ ಭರತ್ ಬಾಲ ನರಸಿಂಹಯ್ಯ, ಜೆಡಿಎಸ್ ಪಕ್ಷದ ಮುಖಂಡ ಚಿನ್ನಸ್ವಾಮಿ, ಪುಟ್ಟರಾಜು, ಕಬ್ಬಾಳೇಗೌಡ, ಬಿಜೆಪಿ ನಗರ ಮಂಡಲ ಅಧ್ಯಕ್ಷ ಮಂಜುನಾಥ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದರು. ಜೆಡಿಎಸ್ ಪಕ್ಷದ ಮಾಜಿ ಅಧ್ಯಕ್ಷ ಸಿದ್ಧಮರೀಗೌಡ, ಮಾಜಿ ತಾಪಂ ಸದಸ್ಯ

ಧನಂಜಯ್, ಮುಖಂಡರಾದ ಶಿವಕುಮಾರ್, ಸರ್ದಾರ್, ಬಿಜೆಪಿ ಪಕ್ಷದ ತಾಪ್ರಧಾನ ಕಾರ್ಯದರ್ಶಿ ಕುಮಾರಸ್ವಾಮಿ, ಯುವ ಮೋರ್ಚಾ ಅಧ್ಯಕ್ಷ ಸುನಿಲ್, ಶೇಖರ್, ರಾಮಕೃಷ್ಣ, ಎಸ್ ಟಿ ಮೋರ್ಚಾದ ಶಿವಮುತ್ತು, ಮಹಿಳಾ ಘಟಕದ ಶ್ರೀವಳ್ಳಿ, ಪವಿತ್ರಾ,ವರಲಕ್ಷ್ಮೀ ಸೇರಿ ಎರಡು ಪಕ್ಷಗಳ ಕಾರ್ಯಕರ್ತರು, ಮುಖಂಡರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

----------------------------------

ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ. ಮಂಜುನಾಥ್ ಪರ ನಡೆದ ಕಾರ್ಯಕರ್ತರ ಸಭೆಯಲ್ಲಿ ಎರಡು ಪಕ್ಷದ ಮುಖಂಡರು ಮಾತನಾಡಿದರು.