ಕಾಲವೇ ಸರಿಯಾದ ಉತ್ತರ ಕೊಡಲಿದೆ: ಎಚ್.ಡಿ.ರೇವಣ್ಣ

| Published : May 23 2024, 01:00 AM IST

ಸಾರಾಂಶ

ಯಾರು ಆತಂಕಪಡಬೇಕಾಗಿಲ್ಲ. ಕಾಲವೇ ಉತ್ತರ ಕೊಡುತ್ತದೆ. ಟೈಂ ಬೇಕಾಗುತ್ತದೆ ಅಷ್ಟೇ. ಜಿಲ್ಲೆಯ ಜೆಡಿಎಸ್ ಕಾರ್ಯಕರ್ತರ ಸಂಕಷ್ಟಕ್ಕೆ ಜೊತೆಯಲ್ಲಿ ನಿಲ್ಲುತ್ತೇನೆ ಎಂದು ಮಾಜಿ ಸಚಿವ ಎಚ್.ಡಿ. ರೇವಣ್ಣ ಹೇಳಿದರು. ಹಾಸನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಜೆಡಿಎಸ್ ಕಾರ್ಯಕರ್ತರಿಗೆ ಧೈರ್ಯ ಜೆಡಿಎಸ್‌ ನಾಯಕ । ಜೆಡಿಎಸ್‌ ಸಂಕಷ್ಟಕ್ಕೆ ನಿಲ್ಲುತ್ತೇನೆ

ಕನ್ನಡಪ್ರಭ ವಾರ್ತೆ ಹಾಸನ

ಯಾರು ಆತಂಕಪಡಬೇಕಾಗಿಲ್ಲ. ಕಾಲವೇ ಉತ್ತರ ಕೊಡುತ್ತದೆ. ಟೈಂ ಬೇಕಾಗುತ್ತದೆ ಅಷ್ಟೇ. ಜಿಲ್ಲೆಯ ಜೆಡಿಎಸ್ ಕಾರ್ಯಕರ್ತರ ಸಂಕಷ್ಟಕ್ಕೆ ಜೊತೆಯಲ್ಲಿ ನಿಲ್ಲುತ್ತೇನೆ ಎಂದು ಮಾಜಿ ಸಚಿವ ಎಚ್.ಡಿ. ರೇವಣ್ಣ ಹೇಳಿದರು.

ನಗರದ ಕುವೆಂಪು ಬಡಾವಣೆಯ ಡಿ.ಟಿ.ಪರಮೇಶ್ ನಿವಾಸದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ಹಾಸನ ಜಿಲ್ಲೆಯ ಲೋಕಸಭಾ ಚುನಾವಣೆ ಫಲಿತಾಂಶವನ್ನು ಜನತೆಗೆ ಬಿಟ್ಟಿದ್ದೇನೆ. ಜನತೆಯ ತೀರ್ಪಿಗೆ ತಲೆ ಬಾಗುತ್ತೇವೆ. ನಾವು ಅಧಿಕಾರಕ್ಕೋಸ್ಕರ ಹೋರಾಟ ಮಾಡುವುದಿಲ್ಲ. ಅಧಿಕಾರ ಇದ್ದರೂ ಇಲ್ಲದಿದ್ದರೂ ಕೆಲಸ ಮಾಡುತ್ತೇವೆ. ಕೋರ್ಟ್‌ನಲ್ಲಿ ಕೇಸ್ ಇದ್ದಾಗ ನಾನು ಮಾತನಾಡುವುದಿಲ್ಲ. ಹೇಸಿಗೆಯಂತಹ ವಿಚಾರವವು ರಾಜ್ಯಕ್ಕೆ, ನಮಗೆ ಗೌರವ ತಂದು ಕೊಡುವುದಿಲ್ಲ. ಈ ವಿಚಾರವನ್ನು ರಾಜಕೀಯವಾಗಿ ತೆಗದುಕೊಂಡು ಹೋಗಲಾಗುತ್ತಿದೆ. ಇದಕ್ಕೆಲ್ಲಾ ಮೂಲ ಯಾರಿದ್ದಾರೆ ಅವರನ್ನು ಬಂಧಿಸಿ ಶಿಕ್ಷೆ ವಿಧಿಸಲಿ’ ಎಂದು ಪತ್ರಕರ್ತರ ಪ್ರಶ್ನೆಯೊಂದಕ್ಕೆ ಉತ್ತರಿದರು.

ತಮ್ಮ ಮೇಲೆ ಎರಡು ಪ್ರಕರಣ ದಾಖಲು ವಿಚಾರವಾಗಿ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿ, ‘ಯಾರು ಆತಂಕಪಡಬೇಕಾಗಿಲ್ಲ. ಕಾಲವೇ ಉತ್ತರ ಕೊಡುತ್ತದೆ. ಟೈಂ ಬೇಕು ಅಷ್ಟೇ. ನಮ್ಮ ಜಿಲ್ಲೆಯ ಜನರನ್ನು ಅರವತ್ತು ವರ್ಷ ದೇವೇಗೌಡರು ಕಾಪಾಡಿದ್ದಾರೆ. ನಾನಿದ್ದೀನಿ, ಎ.ಮಂಜು, ಸ್ವರೂಪ್ ಪ್ರಕಾಶ್ ಇದ್ದಾರೆ. ಕಾರ್ಯಕರ್ತರು ಯಾರು ಭಯಪಡುವ ಆತಂಕಪಡುವ ಅಗತ್ಯವಿಲ್ಲ. ನನಗೂ ಜಿಲ್ಲೆಯ ಜನ ಇಪ್ಪತ್ತೈದು ವರ್ಷ ಆಶೀರ್ವಾದ ಮಾಡಿದ್ದಾರೆ’ ಎಂದು ಕಾರ್ಯಕರ್ತರಿಗೆ ಧೈರ್ಯ ತುಂಬಿದರು.

‘ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದು ಒಂದು ವರ್ಷ ಆಗಿದ್ದು, ಈ ಸರ್ಕಾರದ ವೇಳೆ ಯಾವುದಾದರೂ ರಸ್ತೆ ಗುಂಡಿ ಮುಚ್ಚಿಲ್ಲ. ಶಿಕ್ಷಕರ ಹುದ್ದೆ ಭರ್ತಿ ಮಾಡಿಲ್ಲ. ಒಂದು ವರ್ಷದಲ್ಲಿ ರಾಜ್ಯಕ್ಕೆ ಏನು ಕೊಡುಗೆ ಕೊಟ್ಟಿದ್ದಾರೆ’ ಎಂದು ಕಾಂಗ್ರೆಸ್ ಪಕ್ಷಕ್ಕೆ ಪ್ರಶ್ನೆ ಮಾಡಿದರು.

‘ನಮ್ಮ ಆಡಳಿತದಲ್ಲಿ ನಾವು ಶಾಲಾ, ಕಾಲೇಜಿಗೆ ಮೂಲಭೂತ ಸೌಕರ್ಯ ಕೊಟ್ಟು ತೋರಿಸಿದ್ದೇವೆ. ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ನಮ್ಮ ಜಿಲ್ಲೆ ಈ ಬಾರಿ ಹದಿನೈದನೇ ಸ್ಥಾನದಲ್ಲಿದೆ. ನಮ್ಮ ಸರ್ಕಾರ ಇದ್ದಾಗ ಹಾಸನ ಜಿಲ್ಲೆ ಮೊದಲ ಸ್ಥಾನದಲ್ಲಿತ್ತು. ಈ ರೀತಿಯಾಗಲೂ ಕಾರಣ ಯಾರು? ಈ ಚುನಾವಣೆಯಲ್ಲಿ ನಮ್ಮ ಪಕ್ಷದ ಅಭ್ಯರ್ಥಿಗೆ ಮತ ನೀಡಬೇಕು’ ಎಂದು ಮನವಿ ಮಾಡಿದರು.

‘ಕುಮಾರಸ್ವಾಮಿ ಆಡಳಿತದಲ್ಲಿ ರಾಜ್ಯದಲ್ಲಿ ೧೫೦೦ ಹೈಸ್ಕೂಲ್, ೨೪೦ ಪ್ರಥಮ ದರ್ಜೆ ಕಾಲೇಜು ತೆರೆದರು. ಖಾಲಿ ಇದ್ದ ಶಿಕ್ಷಕರ ಹುದ್ದೆ ಭರ್ತಿ ಮಾಡಿದ್ದು ಎಚ್.ಡಿ.ಕುಮಾರಸ್ವಾಮಿ. ಐವತ್ತು ವರ್ಷ ಆಡಳಿತದ ಕಾಂಗ್ರೆಸ್ ಕೈಯಲ್ಲೂ ಆಗಿರಲಿಲ್ಲ. ಕುಮಾರಸ್ವಾಮಿ, ಯಡಿಯೂರಪ್ಪ ಶಿಕ್ಷಣ ಕ್ಷೇತ್ರಕ್ಕೆ ಕೊಡುಗೆ ಕೊಟ್ಟಿದ್ದಾರೆ. ಇಡೀ ಇಂಡಿಯಾ ದೇಶದಲ್ಲಿ ಶಿಕ್ಷಣಕ್ಕೆ ಒತ್ತು ಕೊಟ್ಟಿದ್ದು ದೇವೇಗೌಡರು. ದೇವೇಗೌಡರ ಕುಟುಂಬ ಯಾವುದೇ ಖಾಸಗಿ ಶಾಲೆ ಮಾಡಿಲ್ಲ. ಆದರೆ ಶಿಕ್ಷಕರ ಮಕ್ಕಳಿಗೆ ಉದ್ಯೋಗದಲ್ಲಿ ಹತ್ತು ಪರ್ಸೆಂಟ್ ಮೀಸಲಾತಿ ಕೊಡಬೇಕು’ ಎಂದು ಹೇಳಿದರು.

ಶಾಸಕರಾದ ಎಚ್.ಪಿ.ಸ್ವರೂಪ್, ಎ. ಮಂಜು, ಸ್ವರೂಪ ಪ್ರಕಾಶ್. ಮಾಜಿ ಸಚಿವರಾದ ಎಚ್.ಕೆ. ಕುಮಾರಸ್ವಾಮಿ. ಮಾಜಿ ಶಾಸಕರಾದ ಕೆ.ಎಸ್.ಲಿಂಗೇಶ್, ಬಿ.ವಿ. ಕರೀಗೌಡ, ಮಂಜೇಗೌಡ, ಎಸ್. ದ್ಯಾವೇಗೌಡ, ಶಿಕ್ಷಕರ ಕ್ಷೇತ್ರದ ಅಭ್ಯರ್ಥಿ ವಿವೇಕಾನಂದ ಇದ್ದರು.